ADVERTISEMENT

ಕರ್ನಾಟಕವನ್ನು ರಾಮರಾಜ್ಯವನ್ನಾಗಿಸಿ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮನವಿ

​ಪ್ರಜಾವಾಣಿ ವಾರ್ತೆ
Published 4 ಮೇ 2018, 9:00 IST
Last Updated 4 ಮೇ 2018, 9:00 IST

ಹೊನ್ನಾಳಿ: ಕರ್ನಾಟಕವನ್ನು ರಾಮರಾಜ್ಯವನ್ನಾಗಿಸಲು ಬಿಜೆಪಿಗೆ ಮತ ನೀಡಿ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತದಾರರಲ್ಲಿ ಮನವಿ ಮಾಡಿದರು.

ಪಟ್ಟಣದ ಹಿರೇಕಲ್ಮಠದ ಸಮೀಪದಲ್ಲಿ ತಾಲ್ಲೂಕು ಬಿಜೆಪಿ ಗುರುವಾರ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

‘ಭ್ರಷ್ಟಾಚಾರ, ಭಯೋತ್ಪಾದನೆ, ಜಿಹಾದಿಗಳ ಅಟ್ಟಹಾಸ, ರೈತರ ಆತ್ಮಹತ್ಯೆಯಂತಹ ದುರ್ಘಟನೆಗಳಿಂದ ರಾಜ್ಯ ತತ್ತರಿಸಿ ಹೋಗಿದ್ದು, ಶಾಂತಿ ನೆಮ್ಮದಿ ಮತ್ತು ರಾಜ್ಯದ ಅಭಿವೃದ್ಧಿ ಪರ್ವಕ್ಕಾಗಿ ಎಲ್ಲರೂ ಬಿಜೆಪಿಯನ್ನು ಬೆಂಬಲಿಸಬೇಕು’ ಎಂದರು.

ADVERTISEMENT

‘ರಾಜ್ಯದಲ್ಲಿ 3500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಕುಟುಂಬಗಳಿಗೆ ಭೇಟಿ ನೀಡಿ ಸಾಂತ್ವನ ಹೇಳುವ ವ್ಯವಧಾನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಿಲ್ಲ. ರಾಜ್ಯದಲ್ಲಿ 25ಕ್ಕೂ ಅಧಿಕ ಹಿಂದೂಗಳ ಕಗ್ಗೊಲೆಯಾಗಿದ್ದು, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವ ಮನಸ್ಸು ಸಿದ್ದರಾಮಯ್ಯ ಮಾಡುತ್ತಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದರೆ ಈ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ನೀಡುತ್ತೇವೆ’ ಎಂದರು.

‘ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ಮೊದಲ ವರ್ಷವೇ ನಾವು ಅಭೂತಪೂರ್ವ ಸಾಧನೆಗಳನ್ನು ಮಾಡಿದ್ದು, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಮಾಡಿದ್ದು, ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಿದ್ದೇವೆ. ಇದರ ಪರಿಣಾಮ ಅಲ್ಲಿ ರೈತರ ಆತ್ಮಹತ್ಯೆಗಳು ನಿಂತಿವೆ. ಜನ ಸಾಮಾನ್ಯರು, ರೈತರು ನೆಮ್ಮದಿಯಿಂದ ಬದುಕುತ್ತಿದ್ದಾರೆ. ಇಂತಹ ವಾತಾವರಣ ನಿಮ್ಮ ರಾಜ್ಯದಲ್ಲಿಯೂ ಬರಬೇಕು ಎಂದರೆ ನೀವು ಬಿಜೆಪಿಗೆ ಮತ ನೀಡಬೇಕು’ ಎಂದರು.

‘ಕರ್ನಾಟಕ ರಾಜ್ಯ ಅತ್ಯಂತ ಸಂಪದ್ಭರಿತವಾಗಿದ್ದು, ಇಲ್ಲಿ ಹೇರಳವಾದ ಜಲ, ಅರಣ್ಯ ಸಂಪತ್ತು ಇದ್ದು, ಔದ್ಯೋಗಿಕ ಕ್ರಾಂತಿಗೆ ಸಾಕಷ್ಟು ಅವಕಾಶಗಳು ಇವೆ. ರಾಜ್ಯದಲ್ಲಿನ ಈ ಎಲ್ಲ ಸಂಪನ್ಮೂಲಗಳನ್ನು ಬಳಸಿಕೊಂಡು ಅಭಿವೃದ್ಧಿ ಪಥಕ್ಕೆ ಒಯ್ಯುವ ಶಕ್ತಿ ಬಿಜೆಪಿಗೆ ಮಾತ್ರ ಇದೆ’ ಎಂದರು.

ಅಭ್ಯರ್ಥಿ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ‘ತಾಲ್ಲೂಕಿನಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಸಾಧನೆಗಳು ಶಾಶ್ವತವಾಗಿದ್ದು, ಶಾಸಕರು ತಾಲ್ಲೂಕಿನಲ್ಲಿ ಭ್ರಷ್ಟಾಚಾರಕ್ಕೆ ಕಾರಣರಾಗಿದ್ದಾರೆ. ಸುಳ್ಳು ಹೇಳುವ ಮೂಲಕ ರಾಜಕಾರಣಕ್ಕೆ ಕಪ್ಪು ಚುಕ್ಕೆ ಇಟ್ಟಿದ್ದಾರೆ. ನಾನು ಶಾಸಕರಾಗಿ ಆಯ್ಕೆಯಾದರೆ ನೀರಾವರಿಗೆ ಆದ್ಯತೆ ನೀಡುವುದು ಹಾಗೂ ಕೆರೆಗಳನ್ನು ತುಂಬಿಸುವ ಪ್ರಯತ್ನ ಮಾಡಲಾಗುವುದು’ ಎಂದರು.

ಕಾಂಗ್ರೆಸ್ ಮುಖಂಡ ಕೆ.ವಿ. ಚನ್ನಪ್ಪ ಬಿಜೆಪಿ ಪಕ್ಷ ಸೇರ್ಪಡೆಗೊಂಡರು. ತಾಲ್ಲೂಕು ಸಾಧು ವೀರಶೈವ ಸಮಾಜದ ಮಾಜಿ ಅಧ್ಯಕ್ಷ ಕೆ.ಎಚ್.ಗುರುಮೂರ್ತಿ ಮಾತನಾಡಿದರು.

ವೇದಿಕೆಯಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಎಂ.ಆರ್. ಮಹೇಶ್, ಸುರೇಂದ್ರನಾಯ್ಕ, ಉಮಾ ರಮೇಶ್, ದೀಪಾ ಜಗದೀಶ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಡಿ.ಜಿ.ರಾಜಪ್ಪ, ಪ್ರಭು, ನೆಲಹೊನ್ನೆ ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.