ADVERTISEMENT

ಕಾವೇರಿ ನೀರು ಬಿಡದಿರಲು ಒತ್ತಾಯ; ಹೆದ್ದಾರಿ ತಡೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2012, 5:21 IST
Last Updated 7 ಡಿಸೆಂಬರ್ 2012, 5:21 IST

ದಾವಣಗೆರೆ: ತಮಿಳುನಾಡಿಗೆ ಕಾವೇರಿ ನದಿಯಿಂದ ನಿತ್ಯ 10 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ರಾಜ್ಯಕ್ಕೆ ನಿರ್ದೇಶನ ನೀಡಿದ್ದು, ರಾಜ್ಯ ಸರ್ಕಾರ ಕಾವೇರಿ ನೀರು ಬಿಡದಂತೆ ಒತ್ತಾಯಿಸಿ ದರ್ಶನ್ ಅಭಿಮಾನಿಗಳ ಮತ್ತು ಕರ್ನಾಟಕ ನವ ನಿರ್ಮಾಣ ಸೇನೆಯ ಕಾರ್ಯಕರ್ತರು ಗುರುವಾರ ಸಮೀಪದ ಶಾಮನೂರು ರಾಷ್ಟ್ರೀಯ ಹೆದ್ದಾರಿ-4ರಲ್ಲಿನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ ವಿರುದ್ಧ ಕಾರ್ಯಕರ್ತರು ಘೋಷಣೆ ಕೂಗಿದರು. ನಿತ್ಯ 10 ಸಾವಿರ ಕ್ಯೂಸೆಕ್ ನೀರು ಬಿಟ್ಟರೆ ಬೇಸಗೆಯಲ್ಲಿ ರಾಜ್ಯದ ರೈತರು ಸಂಕಷ್ಟಕ್ಕೀಡಾಬೇಕಾಗುತ್ತದೆ. ಕೂಡಲೇ ರಾಜ್ಯ ಸರ್ಕಾರ ಕಾರ್ಯಪ್ರವೃತ್ತವಾಗಿ ಕಾವೇರಿ ನೀರು ಹಂಚಿಕೆ ವಿಷಯವನ್ನು ಬೆಳಗಾವಿ ಅಧಿವೇಶನದಲ್ಲಿ ಮುಖ್ಯವಾಗಿ ಚರ್ಚಿಸಿ ದೃಢ ನಿರ್ಣಯ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ತಕ್ಷಣ ಕೇಂದ್ರಕ್ಕೆ ಮೇಲ್ಮನವಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ರಾಜ್ಯಕ್ಕೆ ಪದೇಪದೇ ಅನ್ಯಾಯವಾಗುತ್ತಿದ್ದರೂ, ರಾಜ್ಯ ಪ್ರತಿಸಲವೂ ಕೈಚೆಲ್ಲುತ್ತಾ ಬರುತ್ತಿದೆ. ಪರಿಣಾಮವಾಗಿ ರಾಜ್ಯದ ರೈತರು ತೊಂದರೆ ಅನುಭವಿಸುವಂತಾಗಿದೆ. ನೀರು ಹಂಚಿಕೆಯಿಂದ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಕೇಂದ್ರಕ್ಕೆ ಹಾಗೂ ಸುಪ್ರೀಂ ಕೋರ್ಟ್‌ಗೆ ಸರಿಯಾಗಿ ಮನದಟ್ಟು ಮಾಡಿಲ್ಲ. ರಾಜ್ಯ ಸರ್ಕಾರದ ಇಂತಹ ನಿರ್ಲಕ್ಷತನ ಸಲ್ಲ. ನೆಲ, ಜಲ, ಭಾಷೆ ವಿಷಯದಲ್ಲಿ ಸರ್ಕಾರಗಳು ದಿಟ್ಟ ನಿಲುವು ಪ್ರದರ್ಶಿಸಬೇಕು ಎಂದು  ಪ್ರತಿಭಟನಾಕಾರರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಹೆದ್ದಾರಿಯಲ್ಲಿ ಬಂದ ತಮಿಳುನಾಡಿನ ಲಾರಿಯ ನಾಮಫಲಕಕ್ಕೆ ಪ್ರತಿಭಟನಾಕಾರರು ಅಗೌರವ ತೋರಿದರು.
ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ದೊಡ್ಡೇಶ್, ಎಸ್.ವೈ. ಶಿವಶಂಕರ್, ಎಸ್.ಎನ್. ಮಲ್ಲಿಕ್, ಟಿ.ಎಸ್. ಕರಿಯಪ್ಪ, ಭೋಜರಾಜ್, ಅಣ್ಣೇಶ್, ಹರೀಶ್, ಗುಡ್ಡಪ್ಪ, ಸಿ.ಎನ್. ಮಂಜುನಾಥ್, ನಾರಾಯಣಗೌಡ, ಕರ್ನಾಟಕ ನವ ನಿರ್ಮಾಣ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್. ವೆಂಕಟೇಶ್, ಪೂರ್ಣಾಚಾರಿ, ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.