ಹರಪನಹಳ್ಳಿ: ಸಮರ್ಪಕ ಕುಡಿಯುವ ನೀರು ಪೂರೈಸದಿರುವ ಗ್ರಾಮ ಪಂಚಾಯತ್ ಆಡಳಿತ ವೈಖರಿಯ ಕ್ರಮ ವಿರೋಧಿಸಿದ ಗ್ರಾಮಸ್ಥರು ಸೋಮವಾರ ತಾಲ್ಲೂಕಿನ ಬಾಗಳಿ ಪಂಚಾಯತ್ ಕಚೇರಿಗೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಒಂದು ತಿಂಗಳಿನಿಂದಲೂ ಗ್ರಾಮದಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಕೇಳಿದರೆ, ಬೋರ್‌ವೆಲ್‌ನ ಪಂಪು ಸುಟ್ಟಿದೆ, ಪೈಪ್‌ಲೈನ್ ಮಾರ್ಗದಲ್ಲಿ ಸೋರಿಕೆಯಾಗುತ್ತಿದೆ. ವಿದ್ಯುತ್ ಇಲ್ಲ...ಬರೀ ಹೀಗೆ ಉದಾಹರಣೆ ಹೇಳುತ್ತಾ ಪಂಚಾಯತ್ ಸಿಬ್ಬಂದಿ ಕಾಲ ತಳ್ಳುತ್ತಿದ್ದಾರೆ ಹೊರತು, ಸಮಸ್ಯೆಯನ್ನು ಪರಿಹರಿಸಲು ಮುಂದಾಗುತ್ತಿಲ್ಲ. ನೀರು ಪೂರೈಸಲು 5ಬೋರ್‌ವೆಲ್‌ಗಳು ಸಮರ್ಪಕವಾಗಿದ್ದರೂ ಸಹ, ಕುಡಿಯುವ ನೀರಿಗಾಗಿ ಹಪಹಪಿಸಬೇಕಾದ ಪರಿಸ್ಥಿತಿ ಉಂಟಾಗಿದೆ.
ನಾಲ್ಕೈದು ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಕುಡಿಯುವ ನೀರು ಸಂಗ್ರಹಿಸಲು ಹಗಲಿರಳು ಅಕ್ಕಪಕ್ಕದ ತೋಟಗಳಿಗೆ ಎಡತಾಕಬೇಕು. ಇನ್ನೂ ಜಾನುವಾರುಗಳಿಗೆ ನೀರಿಗಾಗಿ ಪರದಾಡುತ್ತಿರುವ ಭವಣೆ ಹೇಳತೀರದಾಗಿದೆ. ಕೆರೆಯ ಮಲೀನಗೊಂಡ ನೀರನ್ನೇ ಅನಿವಾರ್ಯವಾಗಿ ಜನ -ಜಾನುವಾರುಗಳು ಕುಡಿಯಬೇಕಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯ್ತಿ ನೀರು ಪೂರೈಕೆಯ ಬೋರ್‌ವೆಲ್‌ಗೆ ಅಳವಡಿಸಿರುವ ಮೋಟಾರ್ ರಿಪೇರಿ, ಪೈಪ್‌ಲೈನ್ ಮಾರ್ಗದಲ್ಲಿ ಸೋರಿಕೆ ದುರಸ್ತಿ, ಸಾಮಗ್ರಿ ಖರೀದಿ ಸೇರಿದಂತೆ ವಿವಿಧ ಬಾಬತ್ತುಗಳಿಗೆ ಪ್ರತಿವರ್ಷ ಲಕ್ಷಾಂತರ ರೂಗಳ ಹಣ ಖರ್ಚಾಗುತ್ತದೆ. ಆದರೆ, ಅಸಲಿಗೆ ಯಾವ ವಿಧವಾದ ದುರಸ್ತಿಯೂ ನಡೆಯದೆ, ಸಾಮಾಗ್ರಿಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿವೆ ಎಂದು ಆರೋಪಿಸಿದ ಗ್ರಾಮಸ್ಥರು, ಗ್ರಾಮ ಪಂಚಾಯ್ತಿ ಸಿಬ್ಬಂದಿಯ ನಿರ್ಲಕ್ಷ್ಯತನದಿಂದ ನೀರು ಸರಬರಾಜು ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿದೆ.
ಇದಕ್ಕೆ ಕಾರಣರಾದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಚಮನ್ ಸಾಹೇಬ್ ಹಾಗೂ ಕಾರ್ಯದರ್ಶಿ ಅವರನ್ನು ಕೂಡಲೇ ಬೇರೆಡೆಗೆ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ತಾಲ್ಲೂಕು ಪಂಚಾಯ್ತಿ ಸದಸ್ಯ ಎನ್. ಕೊಟ್ರೇಶ್, ಮಾಜಿ ಅಧ್ಯಕ್ಷ ಆರ್. ಕೆಂಚನಗೌಡ, ಗ್ರಾ.ಪಂ. ಮಾಜಿ ಅಧ್ಯಕ್ಷ ಬಿ. ಕೆಂಚಪ್ಪ, ಮುಖಂಡರಾದ ಎನ್. ಬಸವಲಿಂಗಪ್ಪ, ಬೆಟ್ಟಪ್ಪ ಮಾಸ್ತರ್, ಬೀರಪ್ಪ, ದುರಗಪ್ಪ, ಭೀಮಪ್ಪ, ಕೋಟೆಪ್ಪ ಇತರರ ನೇತೃತ್ವದಲ್ಲಿ ನೂರಾರು ಗ್ರಾಮಸ್ಥರು ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.