ದಾವಣಗೆರೆ: ಪ್ರಸಕ್ತ ಬೇಸಿಗೆಯಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿಭಾಯಿಸಲು ರಾಜ್ಯ ಸರ್ಕಾರ ₨ 8 ಕೋಟಿ ಅನುದಾನ ಬಿಡುಗಡೆ ಮಾಡಿದೆ’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ಬಿ.ಹೇಮಚಂದ್ರ ತಿಳಿಸಿದರು.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಪಂಚಾಯ್ತಿ ಸರ್ವ ಸದಸ್ಯರ ಸಾಮಾನ್ಯಸಭೆಯಲ್ಲಿ ಅನುಪಾಲನಾ ವರದಿ ಚರ್ಚೆಯ ನಂತರ ಜಿ.ಪಂ.ಸದಸ್ಯ ನಾಗೇಂದ್ರಪ್ಪ ಅವರು ಕುಡಿಯುವ ನೀರಿನ ಪೂರೈಕೆಗೆ ಜಿಲ್ಲಾ ಪಂಚಾಯ್ತಿ ಮಾಡಿಕೊಂಡಿ ರುವ ಪೂರ್ವಸಿದ್ಧತೆ ಮತ್ತು ಅನುದಾನದ ಬಗ್ಗೆ ಕೈಗೆತ್ತಿಕೊಂಡ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿ ಮಾಹಿತಿ ನೀಡಿದರು.
‘ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ಜಿಲ್ಲಾ ಪಂಚಾಯ್ತಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಪೂರೈಕೆಗೆ ₨ 17 ಕೋಟಿ ಅನುದಾನ ನೀಡುವಂತೆ ಪ್ರಸ್ತಾವ ಸಲ್ಲಿಸಿತ್ತು. ₨ 8 ಕೋಟಿ ಅನುದಾನ ಬಿಡುಗಡೆಯಾಗಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ತೀವ್ರ ಸಮಸ್ಯೆ ಇರುವ ಕಡೆಗಳಲ್ಲಿ ಆದ್ಯತೆ ಮೇರೆಗೆ ನೀರಿನ ಪೂರೈಕೆಗೆ ಕಾಮಗಾರಿ ನಡೆಸಲು ಕ್ರಿಯಾಯೋಜನೆ ರೂಪಿಸಲಾಗುವುದು’ ಎಂದು ವಿವರಿಸಿದರು.
1.9 ಲಕ್ಷ ಜಾನುವಾರಿಗೆ ಲಸಿಕೆ
‘ಜಿಲ್ಲೆಯಲ್ಲಿ ರೈತರು ಜಾನುವಾರುಗಳಿಗೆ ಹರಡುತ್ತಿರುವ ಕಾಲುಬಾಯಿ ರೋಗದಿಂದ ಕಂಗೆಟ್ಟಿದ್ದಾರೆ. ಈ ರೋಗ ನಿಯಂತ್ರಣಕ್ಕೆ ಪಶುಸಂಗೋಪನೆ ಇಲಾಖೆ ಯಾವ ಕ್ರಮಕೈಗೊಂಡಿದೆ’ ಎಂದು ಸದಸ್ಯರು ಕೈಗೆತ್ತಿಕೊಂಡ ಪ್ರಶ್ನೆಗೆ ಪಶುಸಂಗೋಪನೆ ಇಲಾಖೆ ನಿರ್ದೇಶಕ ಮಹೇಶ್ವರ ಗೌಡ, ‘ಜಿಲ್ಲೆಯಲ್ಲಿ ಒಟ್ಟು 4.8ಲಕ್ಷ ಜಾನುವಾರುಗಳಿವೆ. ಇದುವರೆಗೆ 1.09ಲಕ್ಷ ಜಾನುವಾರುಗಳಿಗೆ ಕಾಲುಬಾಯಿ ಲಸಿಕೆ ಹಾಕಲಾಗಿದೆ.
ಮಾರ್ಚ್ 15ರವರೆಗೆ ಲಸಿಕೆ ಹಾಕುವ ಕಾರ್ಯ ಮುಂದುವರಿಯಲಿದೆ. ಲಸಿಕೆಯಿಂದಾಗಿ ಜಾನುವಾರುಗಳಿಗೆ ಊತ ಬರುತ್ತದೆ ಮತ್ತು ಹಾಲು ನೀಡುವುದಿಲ್ಲ ಎಂದು ರೈತರು ಲಸಿಕೆ ಹಾಕಿಸಲು ಮುಂದಾಗುತ್ತಿಲ್ಲ. ಇದರಿಂದಾಗಿ ನಿರೀಕ್ಷಿತ ಗುರಿ ಮುಟ್ಟಲು ಸಾಧ್ಯವಾಗಿಲ್ಲ. ಆದರೆ, ಒಂದು ವಾರದವರೆಗೆ ಊತ ಬರುತ್ತದೆ. ನಂತರ ಸರಿ ಹೋಗುತ್ತದೆ’ ಎಂದು ಹೇಳಿದರು.
‘ಮನೆಮನೆಗೆ ಹೋಗಿ ರೈತರಿಗೆ ಅರಿವು ಮೂಡಿಸುವ ಜತೆಗೆ ಜಾನುವಾರುಗಳಿಗೆ ಲಸಿಕೆ ಹಾಕುವ ಜವಾಬ್ದಾರಿ ನಿಮ್ಮದು. ಅದನ್ನು ನಿಭಾಯಿಸಿ ಗುರಿ ಸಾಧಿಸಿ’ ಎಂದು ಸಿಇಒ ಅವರಿಗೆ ಸೂಚಿಸಿದರು.
ಶಿವಮೊಗ್ಗದಲ್ಲಿ ಸಬ್ಸಿಡಿ ಇದೆ, ಇಲ್ಲಿ ಏಕಿಲ್ಲ?
‘ಮಳೆಗಾಲದಲ್ಲಿ ರೈತರಿಗೆ ಕೃಷಿ ಇಲಾಖೆ ಹಂಚುವ ತಾಡಪಾಲುಗಳಿಗೆ ಇಲಾಖೆ ₨ 1300 ವಸೂಲಿ ಮಾಡುತ್ತಿದೆ. ಪಕ್ಕದ ಜಿಲ್ಲೆ ಶಿವಮೊಗ್ಗದಲ್ಲಿ ಇದೇ ತಾಡಪಾಲುಗಳನ್ನು ರೈತರಿಗೆ ಶೇ 90ರಷ್ಟು ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದೆ. ನಮ್ಮಲ್ಲೇಕೆ ಸಾಧ್ಯವಿಲ್ಲ’ ಎಂದು ಸದಸ್ಯ ಶಿವರಾಮನಾಯ್ಕ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ವಿ.ಸದಾಶಿವ ಪ್ರತಿಕ್ರಿಯಿಸಿ,‘ ಸಬ್ಸಿಡಿ ದರದಲ್ಲಿ ನೀಡಲು ಸಾಧ್ಯವೇ ಎಂಬುದು ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ’ ಹೇಳಿದರು.
ಶಿಥಿಲ ಶಾಲೆಗಳು!
‘ಜಿಲ್ಲೆಯ ಹಾಲವಾಣ, ಚಿಕ್ಕಳ್ಳಿ ಬೇವೂರು, ಮಾಗನೂರುಗಳಲ್ಲಿನ ಶಾಲೆಗಳು ಶಿಥಿಲ ಗೊಂಡಿವೆ. ವರ್ಷದಿಂದ ಕಟ್ಟಡ ದುರಸ್ತಿ ಗೊಳಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಮನವಿ ಮಾಡುತ್ತಿದ್ದರೂ ಪ್ರಯೋಜನವಾಗಿಲ್ಲ’ ಎಂದು ಸದಸ್ಯೆ ಪ್ರೇಮಾ ಸಿದ್ದೇಶ್, ಸಹನಾ ರವಿ ಆರೋಪಿಸಿದರು.
‘ಜಿಲ್ಲೆಯಲ್ಲಿ ಶಿಥಿಲಗೊಂಡ 1209 ಶಾಲೆಗಳನ್ನು ತೆರವುಗೊಳಿಸಿ ಪುನರ್ ನಿರ್ಮಾಣಗೊಳಿಸಲು ಅನಿರ್ಬಂಧಿತ ಯೋಜನೆಯಲ್ಲಿ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಆ ಯೋಜನೆಯಲ್ಲಿ ಈ ಶಾಲೆಗಳನ್ನು ಸೇರಿಸಲಾಗುವುದು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಿ.ಕೆ.ಶಿವಕುಮಾರ್ ಸದಸ್ಯರ ಗಮನಕ್ಕೆ ತಂದರು.
ಅಂಗನವಾಡಿಗಳಿಗೆ ಸೌಲಭ್ಯ ಕಲ್ಪಿಸಿ: ಎನ್.ಕೆ.ಪಾಟೀಲ್ ವರದಿ ಪ್ರಕಾರ ಅಂಗನವಾಡಿಗಳಿಗೆ ಮೂಲಸೌಕರ್ಯ ಕಲ್ಪಿಸಬೇಕು. ಆದರೆ, ಜಿಲ್ಲೆಯಲ್ಲಿ ಅಂಗನವಾಡಿಗಳ ಸ್ಥಿತಿ ಚಿಂತಾಜನಕವಾಗಿದೆ. ಅಲ್ಲಿ ಖರೀದಿಸಿರುವ ಕುಡಿಯುವ ನೀರಿನ ಫಿಲ್ಟರ್‌ಗಳ ಗುಣಮಟ್ಟ ಸರಿಯಿಲ್ಲ’
ಎಂದು ಸದಸ್ಯರು ಒಕ್ಕೊರಲಿನಿಂದ ಆರೋಪಿಸಿದರು.
‘ಹಳೆಯ ಫಿಲ್ಟರ್‌ಗಳನ್ನು ಬದಲಾಯಿಸಲಾಗುತ್ತಿದೆ. ಉಳಿದವುಗಳನ್ನು ದುರಸ್ತಿಗೊಳಿಸಿ ಸೂಕ್ತ ವ್ಯವಸ್ಥೆ ಗೊಳಿಸಲಾಗುವುದು’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ವಾಸುದೇವ ಉತ್ತರಿಸಿದರು.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಪ್ರೇಮಾ ಲೋಕೇಶಪ್ಪ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸರ್ವತ ಫಾತಿಮಾ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ನಾಗರಾಜ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ವೀರಭದ್ರಪ್ಪ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಶಾರದಾ ಉಮೇಶ್ ನಾಯ್ಕ ಹಾಜರಿದ್ದರು.
ಪುರಸ್ಕಾರ ಧನಕ್ಕೆ ಆನ್‌ಲೈನ್ ನಿಯಮ ಅಡ್ಡಿ
‘ಪಿಯು, ಪದವಿ, ಸ್ನಾತಕೋತ್ತರ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಗೊಂಡ ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ಸರ್ಕಾರ ಪುರಸ್ಕಾರ ಧನ ನೀಡುತ್ತಿದೆ. ಇದುವರೆಗೆ ಜಿಲ್ಲೆಯಲ್ಲಿ ಎಷ್ಟು ವಿದ್ಯಾರ್ಥಿಗಳಿಗೆ ಈ ಧನ ವಿತರಿಸಲಾಗಿದೆ? ಬಿಡುಗಡೆಯಾಗಿರುವ ಅನುದಾನ ಎಷ್ಟು’ ಎಂದು ಸದಸ್ಯ ನಾಗೇಂದ್ರಪ್ಪ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗೆ ಪ್ರಶ್ನೆ ಎಸೆದರು.
‘ಜಿಲ್ಲೆಗೆ ಒಟ್ಟು ₨ 27ಲಕ್ಷ ಅನುದಾನ ಬಂದಿದೆ. 1270 ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡುವ ಗುರಿ ಹೊಂದಲಾಗಿತ್ತು. ಇದುವರೆಗೂ ಆನ್‌ಲೈನ್ ಮೂಲಕ 496 ಅರ್ಜಿಗಳು ಬಂದಿವೆ. ₨8.36ಲಕ್ಷ ಪುರಸ್ಕಾರ ಧನ ವಿತರಿಸಲಾಗಿದೆ’ ಎಂದು ವಿವರಿಸಿದರು. ಇದರಿಂದ ಅಸಮಾಧಾನಗೊಂಡ ಸಿಇಒ ಎ.ಬಿ.ಹೇಮಚಂದ್ರ , ‘ಪುರಸ್ಕಾರಧನದಿಂದ ಯಾವೊಬ್ಬ ಬಡ ವಿದ್ಯಾರ್ಥಿ ವಂಚಿತರಾಗಬಾರದು. ಇನ್ನು 15 ದಿನಗಳಲ್ಲಿ ವಿದ್ಯಾರ್ಥಿಗಳ ಪಟ್ಟಿ ತಯಾರಿಸಿ ಅವರಿಗೆ ಪುರಸ್ಕಾರಧನ ತಲುಪಿಸಬೇಕು. ಅನುದಾನ ವಾಪಸ್ ಹೋಗದಂತೆ ನೋಡಿಕೊಳ್ಳಬೇಕು’ ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಹಾಂತೇಶ್ ಅವರಿಗೆ ಎಚ್ಚರಿಕೆ ನೀಡಿದರು.
ಕ್ಷೀರಭಾಗ್ಯ ಹಾಲಿನಪುಡಿ ನಿಷೇಧಿಸಿ!
ಕ್ಷೀರಭಾಗ್ಯ ಯೋಜನೆಯಡಿ ಶಾಲಾ ಮಕ್ಕಳಿಗೆ ನೀಡುತ್ತಿರುವ ಹಾಲಿನ ಪುಡಿ ಪ್ಯಾಕೆಟ್‌ನಲ್ಲಿ ತಯಾರಾದ ಮತ್ತು ಅವಧಿ ಮುಕ್ತಾಯ ದಿನಾಂಕ ನಮೂದಿಸಿಲ್ಲ. ಇದನ್ನು ಮುದುವರಿಸಿದ್ದಲ್ಲಿ ಶಾಲಾ ಮಕ್ಕಳ ಪ್ರಾಣಕ್ಕೆ ಅಪಾಯ ತಪ್ಪಿದ್ದಲ್ಲ’ ಎಂದು ಸದಸ್ಯೆ ಜಯಲಕ್ಷ್ಮಿ ಸಭೆಯ ಗಮನ ಸೆಳೆದರು.
ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಬಸವಲಿಂಗಪ್ಪ ಉತ್ತರಿಸಿ, ‘ಕೆನೆರಹಿತ ಪಾಲಿನ ಪುಡಿ ಪ್ಯಾಕೆಟ್ ಇಲ್ಲಿ ಪನರ್ ತಯಾರಿಸಲಾಗುತ್ತದೆ. ಹಾಗಾಗಿ, ತಯಾರು ಮತ್ತು ಮುಕ್ತಾಯ ಅವಧಿ ದಿನಾಂಕ ನಮೂದಿಸಿಲ್ಲ. ಈ ವಿಚಾರದಲ್ಲಿ ಇಲಾಖೆ ಎಚ್ಚರ ವಹಿಸಿದೆ’ ಎಂದು ಹೇಳಿದರು.
₨ 1.50 ಕೋಟಿ ಪರಿಹಾರ ವಿತರಣೆ
ಜಿಲ್ಲೆಯಲ್ಲಿ ಕೊಳೆರೋಗಕ್ಕೆ ಬಲಿಯಾಗಿರುವ ಅಡಿಕೆ ಬೆಳೆಗೆ ಪರಿಹಾರ ನೀಡಲಾಗುತ್ತಿದ್ದು, ಜಿಲ್ಲೆಗೆ 3 ಕೋಟಿ ಪರಿಹಾರ ಹಣ ಬಿಡುಗಡೆಯಾಗಿದೆ. ಶೇ 50ರಷ್ಟು ಹಾನಿ ಅನುಭವಿಸಿರುವ ರೈತರಿಗೆ ₨ 1.50 ಕೋಟಿಯಷ್ಟು ಪರಿಹಾರ ವಿತರಿಸಲಾಗಿದೆ.
–ಉಮೇಶ್ ಶಂಕರ್‌ಮಿರ್ಜಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ.
ಜವಾಬ್ದಾರಿ ಹೆಚ್ಚಿದೆ: ಸಿಇಒ ಖಾತ್ರಿ ಅನುಷ್ಠಾನದಲ್ಲಿ ಪ್ರಶಸ್ತಿ ಸಿಕ್ಕಿದ್ದು, ಜವಾಬ್ದಾರಿ ಹೆಚ್ಚಿದೆ. ಜಿಲ್ಲೆಯಲ್ಲಿ ಎಲ್ಲರಿಗೂ ಉದ್ಯೋಗ ಕಲ್ಪಿಸಬೇಕು. ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು. ಶಿಕ್ಷಣ, ಆರೋಗ್ಯ ಸುಧಾರಣೆಯಾಗಬೇಕು. ಸಂಪೂರ್ಣ ಶೌಚಾಲಯ ನಿರ್ಮಾಣ ಆಗಬೇಕು. ಇವು ನನ್ನ ಗುರಿಯಾಗಿದೆ. ನಿಮ್ಮ ಸಹಕಾರ ಹೀಗೆ ಇದ್ದರೆ ಸಾಧಿಸುತ್ತೇನೆ.
- ಎ.ಬಿ. ಹೇಮಚಂದ್ರ, ಜಿ.ಪಂ. ಸಿಇಒ
ಸಭೆಯ ಪ್ರಮುಖ ನಿರ್ಣಯಗಳು
*ತಾಲ್ಲೂಕು ಆಸ್ಪತ್ರೆಗಳಿಗೆ ಪ್ರತಿವರ್ಷ ನೀಡಲಾಗುತ್ತಿದ್ದ ಔಷಧಿ ವೆಚ್ಚವನ್ನು ₨ 20 ಲಕ್ಷದಿಂದ ₨ 30 ಲಕ್ಷಕ್ಕೆ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವ.
*ಹನಿನೀರಾವರಿ ಸಬ್ಸಿಡಿಯನ್ನು 10 ವರ್ಷಕ್ಕೆ ಬದಲಾಗಿ, 5 ವರ್ಷಕ್ಕೆ ನಿದಿಗೊಳಿಸುವುದು. ಸಬ್ಸಿಡಿ ಪಡೆದ ಫಲಾನುಭವಿ 5 ವರ್ಷದ ನಂತರ ಮತ್ತೆ ಸಬ್ಸಿಡಿ ಪಡೆಯಬಹುದು.
*ಅನುದಾನಿತ ಶಾಲೆಗಳಿಗೆ ಶೌಚಾಲಯಗಳನ್ನು ನಿರ್ಮಿಸಿಕೊಡುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.