ADVERTISEMENT

ಕೆರೆ ಒಡೆದು ಅಪಾರ ಬೆಳೆ ಹಾನಿ

ಹರಪನಹಳ್ಳಿ: ಪರಿಹಾರಕ್ಕೆ ರೈತರ ಆಗ್ರಹ l ಪರಿಶೀಲನೆ ನಡೆಸಿದ ತಹಶೀಲ್ದಾರ್

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2017, 7:12 IST
Last Updated 5 ಅಕ್ಟೋಬರ್ 2017, 7:12 IST

ಹರಪನಹಳ್ಳಿ: ತಾಲ್ಲೂಕಿನ ಮಾಚಿಹಳ್ಳಿ ತಾಂಡಾ ಕೆರೆ ಏರಿ ಒಡೆದು ಅಂದಾಜು 70 ಎಕರೆಗೂ ಹೆಚ್ಚು ಮೆಕ್ಕೆಜೋಳ ಬೆಳೆ ಹಾಳಾಗಿದೆ ಗ್ರಾಮದ ಮುಖಂಡ ಸೂರ್ಯನಾಯ್ಕ ತಿಳಿಸಿದ್ದಾರೆ.

ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ಕೆರೆ ತುಂಬಿ ಭರ್ತಿಯಾಗಿತ್ತು. ರಾತ್ರಿ ಮಳೆ ನೀರು ಹೆಚ್ಚಾಗಿ ಅದರ ಏರಿ ಒಡೆದು ಬೆಳೆ ಹಾಳಾಗಿದ್ದು, ಕೆರೆಯ ನೀರು ಸಂಪೂರ್ಣ ಖಾಲಿಯಾಗಿದೆ.

ಕೆರೆ ನೀರಿನ ಕೊರೆತದಿಂದಾಗಿ ಎರಡು ಕಿ.ಮೀ. ವ್ಯಾಪ್ತಿಯಲ್ಲಿ ಬೆಳೆದು ನಿಂತಿದ್ದ ರಾಗಿ ಮೆಕ್ಕೆಜೋಳ, ಶೇಂಗಾ ಮುಂತಾದ ಬೆಳೆಗಳು ಹಾಳಾಗಿವೆ. ಕೆರೆ ನಿರ್ಮಿಸಲು ಬಳಸಲಾಗಿದ್ದ ಕಲ್ಲುಗಳು ನೀರಿನಲ್ಲಿ ಕೊಚ್ಚಿಹೋಗಿವೆ.

ADVERTISEMENT

ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ನಿರ್ಮಿಸಲಾಗಿದ್ದ ಗೋಕಟ್ಟೆಗಳು ಭರ್ತಿಯಾಗಿ, ಕೆರೆಗೆ ನೀರು ಬಂದಿದೆ.

ಬಿಜೆಪಿ ಮುಖಂಡ ಎಂ.ಪಿ.ನಾಯ್ಕ ಮಾತನಾಡಿ, ಕೆರೆ ಏರಿ ಒಡೆದ ಪರಿಣಾಮ ರೈತರ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಸರ್ಕಾರ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ತಹಶೀಲ್ದಾರ್‌ ಕೆ.ಗುರುಬಸವರಾಜ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ‘ಕೆರೆ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರಲಿದ್ದು, ದುರಸ್ತಿಗಾಗಿ ಅಧಿಕಾರಿಗೆ ಸೂಚಿಸಲಾಗಿದೆ. ಒಟ್ಟು 200 ಎಕರೆ ಬೆಳೆ ನಾಶವಾಗಿದೆ ಎಂದು ಅಂದಾಜು ಮಾಡಲಾಗಿದೆ. ಗುರುವಾರ ಸಮೀಕ್ಷೆ ನಡೆಸಿ ನಿಖರ ಮಾಹಿತಿ ಸಂಗ್ರಹಿಸಲಾಗುವುದು’ ಎಂದು ಹೇಳಿದರು. ರೈತರಾದ ಎಲ್‌. ಮಂಜ್ಯಾನಾಯ್ಕ, ಚಂದ್ರಾನಾಯ್ಕ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.