ADVERTISEMENT

ಗಣೇಶ ಚತುರ್ಥಿ ಅದ್ದೂರಿಗೆ ಬೆಲೆ ಏರಿಕೆ ಕರಿ ನೆರಳು

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2012, 5:30 IST
Last Updated 17 ಆಗಸ್ಟ್ 2012, 5:30 IST

ಚನ್ನಗಿರಿ: ಈ ಬಾರಿಯ ಕರಿಮುಖನ ಅದ್ದೂರಿ ಹಬ್ಬದ ಆಚರಣೆಗೆ ತಡವಾಗಿ ಪ್ರಾರಂಭಗೊಂಡ ಮುಂಗಾರು ಮಳೆ ಹಾಗೂ ಅಗತ್ಯವಸ್ತುಗಳ ಬೆಲೆ ಏರಿಕೆ ಸಂಪೂರ್ಣವಾಗಿ ಕಡಿವಾಣ ಹಾಕಲಿದೆ. ಇದರಿಂದ ಹಬ್ಬದ ಆಚರಣೆಯಲ್ಲಿ ಈ ಬಾರಿ ಅದ್ದೂರಿತನ ಮಾಯವಾಗುವ ಲಕ್ಷಣ ಕಂಡುಬರುತ್ತಿದೆ.

ಸೆ. 19ರಂದು ಗಣಪತಿ ಹಬ್ಬವನ್ನು ಇಡೀ ನಾಡಿನಾದ್ಯಂತ ಆಚರಿಸಲಿದ್ದಾರೆ. ಈಗಾಗಲೇ ಗಣಪತಿ ವಿಗ್ರಹಗಳ ಪ್ರತಿಷ್ಠಾಪನೆಗೆ ಗಣಪತಿ ವಿಗ್ರಹಗಳ ತಯಾರಿಕೆ ಕಾರ್ಯ ತಾಲ್ಲೂಕಿನಾದ್ಯಂತ ಭರದಿಂದ ಸಾಗಿದೆ. `ಪ್ಲಾಸ್ಟರ್ ಆಫ್ ಪ್ಯಾರೀಸ್~ನಿಂದ ಈ ಬಾರಿ ಗಣಪತಿ ವಿಗ್ರಹಗಳನ್ನು ತಯಾರಿಸಬಾರದೆಂದು ಜಿಲ್ಲಾಧಿಕಾರಿ ಆದೇಶ ಮಾಡಿದ್ದರೂ, ಅಲ್ಲಲ್ಲಿ ವಿಗ್ರಹಗಳ ತಯಾರಕರು ವಿಗ್ರಹಗಳನ್ನು ತಯಾರು ಮಾಡುತ್ತಿದ್ದಾರೆ. ಇನ್ನು ಕೆಲವರು ಸಾಂಪ್ರದಾಯಿಕವಾಗಿ ಕರಿಮಣ್ಣಿನಿಂದ ಗಣಪತಿ ವಿಗ್ರಹಗಳನ್ನು ತಯಾರು ಮಾಡುತ್ತಿದ್ದಾರೆ.

ಸಾಮಾನ್ಯವಾಗಿ ಪ್ರತಿವರ್ಷ ಸೆಪ್ಟೆಂಬರ್ ತಿಂಗಳ ಹೊತ್ತಿಗೆ ಹೆಸರು, ಉದ್ದು, ಎಳ್ಳು ಮುಂತಾದ ಪ್ರಮುಖ ವಾಣಿಜ್ಯ ಬೆಳೆಗಳು ಫಸಲಿಗೆ ಬಂದು ಅವುಗಳನ್ನು ಮಾರಾಟ ಮಾಡಿ, ಅದ್ದೂರಿಯಿಂದ ಗಣಪತಿ ಹಬ್ಬವನ್ನು ಆಚರಿಸುತ್ತಿದ್ದರು. ಆದರೆ, ಈ ಬಾರಿ ಮುಂಗಾರು ಮಳೆ ತಡವಾಗಿ ಬಿದ್ದಿರುವುದರಿಂದ ರೈತರು ತಮ್ಮಲ್ಲಿ ಇರುವ ಹಣವನ್ನೆಲ್ಲಾ ರಸಗೊಬ್ಬರ, ಬಿತ್ತನೆಬೀಜಗಳಿಗೆ ಹಾಕಿ ಕೈ ಖಾಲಿ ಮಾಡಿಕೊಂಡು ಮಳೆಗಾಗಿ ಮುಗಿಲನ್ನು ನೋಡುತ್ತಾ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಇದರ ಜತೆಗೆ ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿರುವುದು ಅಬ್ಬರದ ಹಬ್ಬದ ಆಚರಣೆಗೆ ಅಡ್ಡಿಯಾಗಲಿದೆ.

ADVERTISEMENT

ಸಕ್ಕರೆ ಕೆಜಿಗೆ ರೂ 39, ಬೆಲ್ಲ ರೂ. 35, ತೊಗರಿಬೇಳೆ ರೂ. 65, ಉದ್ದಿನಬೇಳೆ ರೂ.   75, ಅಕ್ಕಿ ರೂ. 40, ಹೆಸರುಬೇಳೆ ರೂ. 70 ಇದ್ದರೆ, ಒಂದು ಡಜನ್ ಬಾಳೆಹಣ್ಣಿಗೆ ರೂ.   45, ಸೇಬು 1 ಕೆಜಿಗೆ ರೂ. 150, ದ್ರಾಕ್ಷಿ  ರೂ. 120 ದರ ಇದ್ದು, ಇನ್ನು ಒಂದು ಕೆಜಿ ಮಲ್ಲಿಗೆಗೆ ರೂ. 300, ಒಂದು ಮಾರು ಸೇವಂತಿಗೆ ರೂ. 80 ದರ ಆಗಿ ಜನಸಾಮಾನ್ಯರು ಹಬ್ಬವನ್ನು ಆಚರಣೆ ಮಾಡಲು ಹಿಂದೇಟು ಹಾಕುವಂತಹ ಪರಿಸ್ಥಿತಿ ಇದೆ.

ಆದರೂ, ಪ್ರತಿವರ್ಷದಂತೆ ಗಣಪತಿ ವಿಗ್ರಹಗಳ ತಯಾರಿ ಕಾರ್ಯ ಈಗಾಗಲೇ ನಡೆದಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಜನರು ವಿಗ್ರಹಗಳನ್ನು ಖರೀದಿಸಲು ಬರುತ್ತಾರೆಯೇ ಇಲ್ಲವೇ ಎಂಬ ಅನುಮಾನ ಕಾಡುತ್ತಿದೆ.
ಹಿಂದೆಲ್ಲಾ ಮುಂಗಡವಾಗಿ ಹಣ ಕೊಟ್ಟು ವಿಗ್ರಹಗಳನ್ನು ತಯಾರು ಮಾಡಲು ಹೇಳುತ್ತಿದ್ದರು. ಆದರೆ, ಈ ಬಾರಿ ಯಾರೂ ಕೂಡಾ ವಿಗ್ರಹಗಳು ಬೇಕು ಎಂದು ಹತ್ತಿರಕ್ಕೆ ಬರುತ್ತಿಲ್ಲ. ಆದರೂ, ಕಳೆದ 30 ವರ್ಷಗಳಿಂದ ವಿಗ್ರಹಗಳನ್ನು ತಯಾರು ಮಾಡಿಕೊಂಡು ಬಂದಿದ್ದೇವೆ ಎನ್ನುತ್ತಾರೆ ಚನ್ನಗಿರಿ ಪಟ್ಟಣದ ಬಸವರಾಜ್, ಇಂದ್ರಮ್ಮ ದಂಪತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.