ADVERTISEMENT

ಚನ್ನಗಿರಿ: ಶಿಥಿಲಗೊಂಡ ಮಿನಿ ಬಯಲು ರಂಗಮಂದಿರ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2017, 9:37 IST
Last Updated 7 ಡಿಸೆಂಬರ್ 2017, 9:37 IST
ಚನ್ನಗಿರಿಯ ಸರ್ಕಾರಿ ಬಾಲಿಕಾ ಪ್ರೌಢಶಾಲೆಯ ಆವರಣದಲ್ಲಿರುವ ಮಿನಿ ಬಯಲು ರಂಗಮಂದಿರ ಸಂಪೂರ್ಣವಾಗಿ ಶಿಥಿಲಗೊಂಡಿದೆ
ಚನ್ನಗಿರಿಯ ಸರ್ಕಾರಿ ಬಾಲಿಕಾ ಪ್ರೌಢಶಾಲೆಯ ಆವರಣದಲ್ಲಿರುವ ಮಿನಿ ಬಯಲು ರಂಗಮಂದಿರ ಸಂಪೂರ್ಣವಾಗಿ ಶಿಥಿಲಗೊಂಡಿದೆ   

ಚನ್ನಗಿರಿ: ಪಟ್ಟಣದ ಸರ್ಕಾರಿ ಬಾಲಿಕಾ ಪ್ರೌಢಶಾಲೆಯ ಆವರಣದಲ್ಲಿರುವ ಮಿನಿ ಬಯಲು ರಂಗಮಂದಿರ ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ಹೊಸ ಬಯಲು ರಂಗಮಂದಿರ ನಿರ್ಮಾಣ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಈ ಸರ್ಕಾರಿ ಬಾಲಿಕಾ ಪ್ರೌಢಶಾಲೆಯ ಆವರಣದಲ್ಲಿ ಬಾಲಿಕಾ ಪ್ರೌಢಶಾಲೆ, ಬಾಲಕರ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಇದೆ. ಮಕ್ಕಳ ಹಾಗೂ ಶಿಕ್ಷಣ ಇಲಾಖೆಯ ಕಾರ್ಯಕ್ರಮಗಳನ್ನು ನಡೆಸಲೆಂದು 2000ರಲ್ಲಿ ಶಾಸಕರಾಗಿದ್ದ ವಡ್ನಾಳ್‌ ರಾಜಣ್ಣ ಮಿನಿ ಬಯಲು ರಂಗಮಂದಿರ ನಿರ್ಮಾಣಕ್ಕೆ ₹ 1.5 ಲಕ್ಷ ಅನುದಾನ ಬಿಡುಗಡೆ ಮಾಡಿದ್ದರು. ರಂಗಮಂದಿರ ನಿರ್ಮಾಣವಾಗಿ 17 ವರ್ಷಗಳಾಗಿವೆ.

ಐದು ವರ್ಷದಿಂದ ಈ ಬಯಲು ರಂಗಮಂದಿರ ದುರಸ್ತಿ ಮಾಡಲು ಸಾಧ್ಯವಾಗದಷ್ಟು ರೀತಿಯಲ್ಲಿ ಸಂಪೂರ್ಣವಾಗಿ ಶಿಥಿಲಗೊಂಡಿದೆ. ಈಗ ಈ ಆವರಣದಲ್ಲಿ ರಂಗಮಂದಿರ ಇಲ್ಲದೇ ಇರುವುದರಿಂದ ಗುರುಭವನದಲ್ಲಿ ಹಾಗೂ ಶಾಲಾ ಕೊಠಡಿಗಳಲ್ಲಿ ಕಾರ್ಯಕ್ರಮಗಳನ್ನು ನಡೆಸುವಂತಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿ ಮಕ್ಕಳು ಕುಳಿತುಕೊಳ್ಳುವ ವ್ಯವಸ್ಥೆ ಇಲ್ಲದಿರುವುದರಿಂದ ದೊಡ್ಡ ಪ್ರಮಾಣದ ಕಾರ್ಯಕ್ರಮಗಳನ್ನು ನಡೆಸಲು ತೊಂದರೆ ಉಂಟಾಗಿದೆ.

ADVERTISEMENT

ಪಟ್ಟಣದಲ್ಲಿ ಸಾರ್ವಜನಿಕ ಸಮಾರಂಭ ನಡೆಸಲು ಒಂದು ಸುಸಜ್ಜಿತ ರಂಗಮಂದಿರ ಇಲ್ಲ. ಶಿಕ್ಷಣ ಇಲಾಖೆಯಿಂದ ಸಾಕಷ್ಟು ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಈ ಶಾಲಾ ಆವರಣದಲ್ಲಿ ಒಂದು ಸುಸಜ್ಜಿತ ರಂಗಮಂದಿರ ನಿರ್ಮಾಣ ಮಾಡುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ 2000ನೇ ಸಾಲಿನಲ್ಲಿ ಶಾಸಕರಾಗಿ ಮಿನಿ ರಂಗಮಂದಿರ ನಿರ್ಮಿಸಿದ ವಡ್ನಾಳ್‌ ರಾಜಣ್ಣ ಅವರೇ ಹಾಲಿ ಶಾಸಕರಾಗಿದ್ದು, ನೂತನ ರಂಗಮಂದಿರ ನಿರ್ಮಾಣಕ್ಕೆ ಅಗತ್ಯವಾದ ಅನುದಾನ ಬಿಡುಗಡೆಗೊಳಿಸಿ ಅನುಕೂಲ ಮಾಡಿಕೊಡಬೇಕು ಎಂದು ಪಟ್ಟಣದ ಅಣ್ಣಪ್ಪ, ಭರತ್‌ಕುಮಾರ್ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.