ADVERTISEMENT

ಜಮೀನು ಮರಳಿ ಶಾಲೆಗೆ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಜೂನ್ 2013, 7:12 IST
Last Updated 12 ಜೂನ್ 2013, 7:12 IST

ಚನ್ನಗಿರಿ: ತಾಲ್ಲೂಕು ನಲ್ಲೂರು ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ 1955ರಲ್ಲಿ ಆಟದ ಮೈದಾನಕ್ಕಾಗಿ ದಾನ ಮಾಡಿದ ಜಮೀನನ್ನು ಶಾಲೆಗೆ ನೀಡುವಂತೆ ಆಗ್ರಹಿಸಿ ಶಾಲಾ ವಿದ್ಯಾರ್ಥಿಗಳು ಗ್ರಾಮಸ್ಥರೊಂದಿಗೆ ಸೇರಿ ಜಮೀನಿನಲ್ಲಿ ಕುಳಿತು ಮಂಗಳವಾರ ಪ್ರತಿಭಟನೆ ನಡೆಸಿದರು.

ಮೈಸೂರು ಸೀಮೆಯ ರಾಜ ಪ್ರಮುಖರು ವಿದ್ಯಾದಾನಕ್ಕಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ನಲ್ಲೂರು ಇವರಿಗೆ ಸಂಬಂಧಿಸಿದಂತೆ ಭೂ ದಾನ ಪತ್ರ ಸಂಖ್ಯೆ ನಂ 1004/55-56 ದಿನಾಂಕ 23.11.1955 ರಲ್ಲಿ ಬೆಲವಂತನಹಳ್ಳಿ ಸರ್ವೆ ನಂ 40/1ರಲ್ಲಿ 1 ಎಕರೆ 37 ಗುಂಟೆ ಹಾಗೂ ಸರ್ವೆ ನಂ 31/1ರಲ್ಲಿ 2 ಎಕರೆ 25 ಗುಂಟೆ ಜಮೀನನ್ನು ನೀಡಿರುವುದು ದಾನವಾಗಿರುತ್ತದೆ ಎಂದು ಈ ಜಮೀನಿನ ಬಳಿ ಇರುವ ನಾಮಫಲಕದಲ್ಲಿ ನಮೂದಿಸಲಾಗಿದೆ.

ಆದರೆ ದಾನ ನೀಡಿರುವ ಮನೆತನದ ವಾರಾಸುದಾರರಾದ ಸುನೀತಾ ಅವರು ಈ ಜಮೀನಿನಲ್ಲಿ ಸಾಗುವಳಿ ಮಾಡಲು ಮುಂದಾಗಿರುವುದನ್ನು ಕಂಡು ಶಾಲೆಗೆ ದಾನ ನೀಡಿದ ಜಮೀನನ್ನು ಶಾಲೆಗೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆಗೆ ನಡೆಸುತ್ತಿದ್ದೇವೆ. ಈ ಶಾಲೆಗೆ ಆಟದ ಮೈದಾನ ಇರುವುದಿಲ್ಲ. ಈ ಜಮೀನನ್ನು ಶಾಲೆಗೆ ನೀಡುವಂತೆ ಶಾಲೆಯ ಪರವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯ ಉಸ್ಮಾನ್ ಶರೀಫ್ ತಿಳಿಸಿದರು.

ಈ ಬಗ್ಗೆ ಜಮೀನು ದಾನ ಮಾಡಿದ  ಮನೆತನದ ವಾರಸುದಾರರಾದ ಸುನೀತಾ ಅವರು ಮಾತನಾಡಿ 1955ರಲ್ಲಿ ಶಾಲೆಗೆ ಜಮೀನನ್ನು ದಾನವಾಗಿ ನೀಡಿರುವುದು ಸತ್ಯ. ಆದರೆ ಈ ಜಮೀನನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯವರು ಇದುವರೆಗೆ ಸ್ವಾಧೀನ ಪಡಿಸಿಕೊಂಡಿರುವುದಿಲ್ಲ.

ಅಷ್ಟೇ ಅಲ್ಲದೇ 1955ರಿಂದ ಇಲ್ಲಿಯವರೆಗೂ ಶಾಲಾಭಿವೃದ್ಧಿ ಸಮಿತಿಗೆ ಪ್ರತಿ ವರ್ಷ ್ಙ 101 ಸಂದಾಯ ಮಾಡಿ ಈ ಜಮೀನಿನಲ್ಲಿ ಸಾಗುವಾಳಿಯನ್ನು ನಾವೇ ಮಾಡಿಕೊಂಡು ಬಂದಿದ್ದೇವೆ. ಈ ಬಗ್ಗೆ ಜಿಲ್ಲಾ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ನಮ್ಮ ಪರವಾಗಿ ತೀರ್ಪು ಬಂದಿದೆ. ಆ ಕಾರಣದಿಂದ ಜಮೀನಿನಲ್ಲಿ ಸಾಗುವಾಳಿ ಮಾಡಲು ಮುಂದಾಗಿದ್ದೇವೆ ಎಂದು ಹೇಳಿದರು.

ಗ್ರಾಮ ಪಂಚಾಯ್ತಿ ಸದಸ್ಯರಾದ ಯು. ಲಕ್ಷ್ಮಣಪ್ಪ, ಎನ್.ಬಿ. ಅನಿಲ್, ಮಹಮದ್ ಸೈಪುಲ್ಲಾ, ಫಾರೂಕ್, ಜಲೀಲ್, ಪರಸಪ್ಪ, ಅಣ್ಣಪ್ಪ, ಕನ್ನಡ ಜಾಗೃತಿ ಸಮತಿ ಮಾಜಿ ಅಧ್ಯಕ್ಷ ಆರ್. ಮಂಜಪ್ಪ, ಮುಖ್ಯಶಿಕ್ಷಕ ಪಿ. ರಾಜಪ್ಪ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.