ADVERTISEMENT

ಜಿಲ್ಲಾ ಕೆಡಿಪಿ ಸಭೆ ಚರ್ಚೆ: ಮೇವು, ಗೊಬ್ಬರ ನಿರ್ವಹಣೆ ನಿರಾತಂಕ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2012, 10:00 IST
Last Updated 18 ಫೆಬ್ರುವರಿ 2012, 10:00 IST

ದಾವಣಗೆರೆ: ಜಿಲ್ಲೆಯಲ್ಲಿ ಮೇವು ಸಂಗ್ರಹ, ಬರಗಾಲ ನಿರ್ವಹಣೆ, ನಕಲಿ ವೈದ್ಯರ ಹಾವಳಿ ತಡೆಗೆ ಶೀಘ್ರವೇ ಕ್ರಮ, ಅಪೌಷ್ಟಿಕತೆ ನಿವಾರಿಸಲು ಯೋಜನೆಗಳು, ಎಸ್ಸೆಸ್ಸೆಲ್ಸಿ ಫಲಿತಾಂಶ ವೃದ್ಧಿಗೆ ಕಾರ್ಯಕ್ರಮಗಳು...
-ಇವು ದಾವಣಗೆರೆ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿ ಚರ್ಚೆಯಾದ ಪ್ರಮುಖ ವಿಷಯಗಳು.

ಜಿಲ್ಲೆಯಲ್ಲಿ ಮೇವು ಸಂಗ್ರಹ ಸಂಬಂಧಿತ ಪ್ರಶ್ನೆಗೆ ವಿವರ ನೀಡಿದ ಜಂಟಿ ಕೃಷಿ ನಿರ್ದೇಶಕ ಆರ್.ಜಿ. ಗೊಲ್ಲರ್, ಜಿಲ್ಲೆಯ ವಿವಿಧ ಭಾಗಗಗಳ 200 ಎಕರೆ ಪ್ರದೇಶದಲ್ಲಿ ಮೇವು ಬೆಳೆ ಬೆಳೆಯಲು ಯೋಜನೆ ಸಿದ್ಧಪಡಿಸಲಾಗಿದ್ದು, 150 ಎಕರೆ ಪ್ರದೇಶದಲ್ಲಿ ಈಗಾಗಲೇ ಮೇವು ಬೆಳೆ ಬೆಳೆಯಲಾಗಿದೆ.
 
150 ಕ್ವಿಂಟಲ್ ಮೇವು ಬೆಳೆ ಬಿತ್ತನೆಬೀಜಗಳನ್ನು ರೈತರಿಗೆ ವಿತರಿಸಲಾಗಿದೆ. ಮಾತ್ರವಲ್ಲ ಹಲವೆಡೆ ಜೋಳ, ಶೇಂಗಾ ಬೆಳೆಯಲಾಗಿದ್ದು, ಸದ್ಯ ಮೇವಿನ ಕೊರತೆ ತಟ್ಟಲಾರದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಸಮೀಕ್ಷೆ ನಡೆಸಿ ಅಗತ್ಯವಿರುವಲ್ಲಿ ಗೋಶಾಲೆ ತೆರೆಯಬೇಕು ಎಂದು ಅಧ್ಯಕ್ಷ ವೀರೇಶ್ ಹನಗವಾಡಿ ಸೂಚಿಸಿದರು.

ರಸಗೊಬ್ಬರ ಸಂಗ್ರಹದ ಬಗ್ಗೆ ಮಾಹಿತಿ ನೀಡಿದ ಗೊಲ್ಲರ್ ಅವರು ಸದ್ಯ 80 ಸಾವಿರ ಟನ್ ರಸಗೊಬ್ಬರ ಸಂಗ್ರಹ ಇದೆ. ಇನ್ನೂ ಹೆಚ್ಚುವರಿ ಖರೀದಿಗೆ ರಸಗೊಬ್ಬರ ಮಾರುಕಟ್ಟೆ ಫೆಡರೇಷನ್‌ಗೆ ಹಣ ಪಾವತಿಸಬೇಕು. ಸದ್ಯಕ್ಕಂತೂ ಯಾವುದೇ ಆತಂಕಪಡ ಬೇಕಾಗಿಲ್ಲ ಎಂದು ಹೇಳಿದರು.

ನಕಲಿ ವೈದ್ಯರ ಹಾವಳಿ ತಡೆ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಸುಮಿತ್ರಾದೇವಿ, ಈ ಬಗ್ಗೆ ಇಲಾಖೆ ವತಿಯಿಂದ ತಂಡ ರಚಿಸಲಾಗಿದೆ. ಕುಂಚೂರಿನಲ್ಲಿ ಒಬ್ಬ ನಕಲಿ ವೈದ್ಯರ ವಿರುದ್ಧ ಎಫ್‌ಐಆರ್ ದಾಖಲಿಸಲು ಸಿದ್ಧತೆ ನಡೆದಿದೆ. ಭಾನುವಳ್ಳಿಯಲ್ಲಿಯೂ ದಾಖಲೆ ಪರಿಶೀಲನೆ ನಡೆದಿದೆ ಎಂದರು.

ಅದಕ್ಕೆ ಖಾರವಾಗಿ ಮಾತನಾಡಿದ ಅಧ್ಯಕ್ಷರು, ಇದು ಇಂದು-ನಿನ್ನೆಯ ಸಮಸ್ಯೆ ಅಲ್ಲ. ಇದುವರೆಗೆ ಯಾವುದೇ ಕ್ರಮ ಯಾಕೆ ಕೈಗೊಂಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ನಕಲಿ ವೈದ್ಯರ ವಿರುದ್ಧ ಕಾರ್ಯಾಚರಣೆ ನಡೆಸಿದ ಪ್ರತಿ ವಿವರವನ್ನು ವಾರಕ್ಕೊಮ್ಮೆ ಜಿಲ್ಲಾ ಪಂಚಾಯ್ತಿಗೆ ಸಲ್ಲಿಸಬೇಕು ಎಂದು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗುತ್ತಿ ಜಂಬುನಾಥ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸ್ಥಾಯಿ ಸಮಿತಿ ಅಧ್ಯಕ್ಷೆ ಅಂಬಿಕಾ ರಾಜಪ್ಪ ಮಾತನಾಡಿ, ಪಕ್ಕದ ಜಿಲ್ಲೆಗಳಲ್ಲಿ ಮಂಗನ ಕಾಯಿಲೆ ಕಂಡುಬರುತ್ತಿದೆ. ಇಲ್ಲಿ ಬಾರದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು ಎಂದರು.

ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ ಅವರಿಗೆ ಮೂರು ಹೊತ್ತು ವಿಶೇಷ ಆಹಾರ ನೀಡಲಾಗುತ್ತಿದೆ. ಅಲ್ಲದೇ, ಪ್ರತಿ ಮಗುವಿಗೆ ತಿಂಗಳಿಗೆ ್ಙ 750 ಮೌಲ್ಯದ ಪೌಷ್ಟಿಕಾಂಶವುಳ್ಳ ಆಹಾರ ನೀಡಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು.

ಶಿಕ್ಷಕರನ್ನು ಸತಾಯಿಸದಿರಿ: ಶಿಕ್ಷಕರಿಗೆ ವೇತನ ವಿಳಂಬವಾಗಿದೆ. ಅಲ್ಲದೇ, ಅವರ ವೈದ್ಯಕೀಯ ಭತ್ಯೆ ವಿತರಣೆ ಆಗಿಲ್ಲ. ಈ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಶಿಕ್ಷಕರನ್ನು ಶಿಕ್ಷಣ ಇಲಾಖೆ ಕಚೇರಿಗಳಲ್ಲಿ ಸತಾಯಿಸಬಾರದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಿ.ಎ. ರಾಜಶೇಖರಪ್ಪ ಅವರಿಗೆ ಅಧ್ಯಕ್ಷರು ಸೂಚಿಸಿದರು.
ಇಲಾಖೆಗೆ ಸ್ವಲ್ಪ ಅನುದಾನದ ಕೊರತೆಯಿದೆ. ಮಾರ್ಚ್ ತಿಂಗಳಲ್ಲಿ ಎಲ್ಲವೂ ಸರಿಯಾಗಲಿದೆ ಎಂದು ಡಿಡಿಪಿಐ ಸಭೆಗೆ ತಿಳಿಸಿದರು.

ಎಸ್ಸೆಸ್ಸೆಲ್ಸಿ ಫಲಿತಾಂಶ ವೃದ್ಧಿಗೆ `ಮಿಷನ್ -5~ ಎಂಬ ಕಾರ್ಯತಂತ್ರ ರೂಪಿಸಲಾಗಿದೆ. ಫಲಿತಾಂಶವು ರಾಜ್ಯದಲ್ಲಿ 5 ಸ್ಥಾನಗಳ ಒಳಗೆ ಬರುವ ಆಶಯ ಹೊಂದಲಾಗಿದೆ ಎಂದು ರಾಜಶೇಖರಪ್ಪ ತಿಳಿಸಿದರು.

ಮಂಡಕ್ಕಿಭಟ್ಟಿ ಪ್ರದೇಶಕ್ಕೆ ಬಾಲಕಾರ್ಮಿಕರ ವಿಶೇಷ ಶಾಲೆ ಮಂಜೂರಾಗಿದ್ದು, ಅದನ್ನು ಶೀಘ್ರವೇ ತೆರೆಯಲಾಗುವುದು. ಮಂಡಕ್ಕಿಭಟ್ಟಿಗಳಲ್ಲಿ ಈ ಹಿಂದೆ 1,200 ಬಾಲಕಾರ್ಮಿಕರು ಇದ್ದರು. ಈಗ ಶೇ. 95ರಷ್ಟು ನಿಯಂತ್ರಿಸಲಾಗಿದೆ ಎಂದು ಬಾಲಕಾರ್ಮಿಕರ ಪುನರ್ವಸತಿ ಅಧಿಕಾರಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.