ADVERTISEMENT

ಜೀವನಶೈಲಿ ರೋಗಗಳಿಂದ ಸಾವು ಹೆಚ್ಚಳ: ಆತಂಕ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 8:30 IST
Last Updated 15 ಅಕ್ಟೋಬರ್ 2012, 8:30 IST

ದಾವಣಗೆರೆ: ಬದಲಾಗುತ್ತಿರುವ ಜೀವನಶೈಲಿಯಿಂದ ಕಾಣಿಸಿಕೊಳ್ಳು ತ್ತಿರುವ ಹಲವು ರೋಗಗಳು ಸಾವಿನ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗುತ್ತಿವೆ. ಇದೊಂದು ಗಂಭೀರ ಸಂಗತಿ ಎಂದು ಭಾರತೀಯ ಮಕ್ಕಳ ತಜ್ಞ ವೈದ್ಯರ ಅಕಾಡೆಮಿಯ ಮಾಜಿ ಅಧ್ಯಕ್ಷ, ಕೇರಳದ ಮಕ್ಕಳ ಅಭಿವೃದ್ಧಿ ಕೇಂದ್ರದ ನಿರ್ದೇಶಕ ಡಾ.ಎಂ.ಕೆ.ಸಿ. ನಾಯರ್ ಆತಂಕ ವ್ಯಕ್ತಪಡಿಸಿದರು.

ಭಾರತೀಯ ಮಕ್ಕಳ ತಜ್ಞರ ಅಕಾಡೆಮಿ (ಐಎಪಿ) ಜಿಲ್ಲಾ ಶಾಖೆ, ಜೆಜೆಎಂ ವೈದ್ಯ ಕಾಲೇಜು, ಎಸ್‌ಎಸ್ ವೈದ್ಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಹಾಗೂ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಭಾನುವಾರ ನಗರದ ಬಾಪೂಜಿ ಸಭಾಂಗಣದಲ್ಲಿ ಆಯೋಜಿಸಿದ್ದ `ಪಿಡಿಕಾನ್-2012~- ರಾಜ್ಯಮಟ್ಟದ ಮಕ್ಕಳ ತಜ್ಞರ ವಾರ್ಷಿಕ ಸಮ್ಮೇಳನದಲ್ಲಿ ಅವರು ಉಪನ್ಯಾಸ ನೀಡಿದರು.

2005ರಲ್ಲಿ ಸಂಭವಿಸಿದ ಸಾವುಗಳಲ್ಲಿ ಶೇ 53ರಷ್ಟು ಜೀವನಶೈಲಿ ರೋಗ (ಎಲ್‌ಎಸ್‌ಡಿ)ಗಳಿಂದಲೇ ಆಗಿವೆ. ಮುಂದಿನ ದಶಕಗಳಲ್ಲಿ ಈ ಪ್ರಮಾಣ ಶೇ 65ಕ್ಕೆ ತಲುಪಲಿದೆ ಎಂದು ಸಮೀಕ್ಷೆಯೊಂದು ಅಂದಾಜಿ ಸಿದೆ. ಜೀವನಶೈಲಿ ರೋಗಗಳಾದ ಬೊಜ್ಜು 160 ಮಿಲಿಯನ್ ಮಂದಿಗೆ, ಹೃದಯ ಸಂಬಂಧಿ ರೋಗಗಳು 70 ಮಿಲಿಯನ್ ಮಂದಿಗೆ, ಎಚ್‌ಐವಿ 2.5 ಮಿಲಿಯನ್ ಮಂದಿಗೆ, ಮಧುಮೇಹ 40 ಮಿಲಿಯನ್ ಮಂದಿಗೆ ಇದೆ. ಜಾಗತೀಕರಣ, ಆಹಾರ ಪದ್ಧತಿಯಲ್ಲಿ ಶಿಸ್ತು ಇಲ್ಲದಿರುವುದು, ಕ್ರಿಯಾಶೀಲತೆ ಕಳೆದುಕೊಂಡಿರುವುದು ಮೊದಲಾದವು ಇದಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.

ಮಾಲ್ ಸಂಸ್ಕೃತಿ ಹೆಚ್ಚಾಗುತ್ತಿದೆ; ನೀವು ಇದನ್ನೇ ಮಾಡಬೇಕು ಮಾಧ್ಯಮಗಳು ನಿರ್ದೇಶನ ಮಾಡುವಂತಹ ಪರಿಸ್ಥಿತಿ ಇದೆ. ಹೀಗಾಗಿ, ಪೋಷಕರು ಮಕ್ಕಳನ್ನು ಎಲ್ಲದರಿಂದಲೂ ರಕ್ಷಿಸುವುದು ಸಾಧ್ಯವಾಗುತ್ತಿಲ್ಲ. ಮನೆಯಲ್ಲಿ ತಡೆದರೆ ಅವರು, ಅಂತರ್ಜಾಲದಲ್ಲಿ ನೋಡಿಕೊಳ್ಳುತ್ತಾರೆ. ಸಾಮಗ್ರಿಗಳನ್ನು ಮಾತ್ರವಲ್ಲ, ಮೌಲ್ಯ, ಗಟ್ಟಿಯಾದ ಸಂಬಂಧಗಳನ್ನು ಸಹ `ಬಿಸಾಕು~ ಎಂಬಂತೆ ಆಗಿದೆ. ಸಮಾಜ ಹೋಗಿ, ಕುಟುಂಬವಾಯಿತು. ಈಗ ಕುಟುಂಬ ಹೋಗಿ ವೈಯಕ್ತಿಕ ವಿಚಾರಕಷ್ಟೇ ಮಹತ್ವ ಕೊಡುತ್ತಿದ್ದೇವೆ ಎಂದು ವಿಷಾದಿಸಿದರು.

ಒತ್ತಡದ ಜೀವನದಿಂದ ಹೊರಬರಲು, ಬೊಜ್ಜಿನಿಂದ ತಪ್ಪಿಸಿಕೊಳ್ಳಲು ದೈಹಿಕ ಕಸರತ್ತು ಮುಖ್ಯ. ಎಷ್ಟೇ ಕೆಲಸವಿದ್ದರೂ ಬಿಡುವು ಮಾಡಿಕೊಂಡು ವಾರದಲ್ಲಿ 5 ದಿನ 30 ನಿಮಿಷವಾದರೂ ವಾಕಿಂಗ್ ಮಾಡಬೇಕು. ಎಣ್ಣೆ ಪದಾರ್ಥಗಳನ್ನು ಕಡಿಮೆ ಸೇವಿಸಬೇಕು. ತಂಬಾಕಿನಿಂದ ದೂರವಿರಬೇಕು. ಆಗ, ರೋಗಗಳಿಂದಲೂ ಸಹ ದೂರವಿರಬಹುದು ಎಂದು ಸಲಹೆ ನೀಡಿದರು.

ಡಾ.ಸುಬ್ರಹ್ಮಣ್ಯ ಉಡುಪ, ಡಾ.ಪುಟ್ಟಪ್ಪ ಬೇತೂರ್ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.
ಇದಕ್ಕೂ ಮುನ್ನ, ಡಾ.ಜಿ.ಸಿ.ಎಂ. ಪ್ರದೀಪ್ ಹಾಗೂ ಡಾ.ಎಸ್.ಎಂ. ದಡೇದ್ ಮಾತನಾಡಿದರು.
ಡಾ.ಪಿ.ಎಸ್. ಸುರೇಶ್‌ಬಾಬು, ಡಾ.ಬಾಣಾಪುರ್‌ಮಠ್, ಡಾ.ಶೋಭಾ ಬಾಣಾಪುರ್‌ಮಠ್, ಡಾ.ಜಿ. ಗುರುಪ್ರಸಾದ್, ಡಾ.ಎನ್.ಕೆ. ಕಾಳಪ್ಪನವರ್, ಡಾ.ಬಿ.ಎಸ್. ಪ್ರಸಾದ್ ಪಾಲ್ಗೊಂಡಿದ್ದರು.

ನಂತರ ನಡೆದ ಕಾರ್ಯಕ್ರಮದಲ್ಲಿ, ಅತ್ಯುತ್ತಮ ಪ್ರಬಂಧ ಮಂಡಿಸಿದವರಿಗೆ ಬಹುಮಾನ ವಿತರಿಸಲಾಯಿತು. ರಸಪ್ರಶ್ನೆ ಸ್ಪರ್ಧೆ ನಡೆಯಿತು. ಸಂಜೆ ಸರಳ ಸಮಾರೋಪ ಸಮಾರಂಭ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.