ADVERTISEMENT

ತಂಗಾಳಿಯಲಿ ತೇಲಿ ಬಂದ ಪ್ರೇರಣಾ

ಚಂದ್ರಹಾಸ ಹಿರೇಮಳಲಿ
Published 22 ಫೆಬ್ರುವರಿ 2012, 5:20 IST
Last Updated 22 ಫೆಬ್ರುವರಿ 2012, 5:20 IST

ಅಲ್ಲಿ ಬಣ್ಣದ ಲೋಕವೇ ಅನಾವರಣಗೊಂಡಿತ್ತು. ಇಡೀ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಸಮೂಹ ಬಣ್ಣದಲ್ಲಿ ಅದ್ದಿ ತೆಗೆದಂತೆ ಕಾಣುತ್ತಿತ್ತು. ಹಾಸ್ಯಚಟಾಕಿ, ಸುಮಧುರ ಗಾಯನ, ಮೈಮನಗಳನ್ನೇ ಮರೆಸುವ ಕುಣಿತ ಸಂಭ್ರಮೋಲ್ಲಾಸದ ಅಲೆಯಲ್ಲಿ ತೇಲುವಂತೆ ಮಾಡಿತ್ತು.

ಅದು ಬರೀ ಹಾಡು-ಕುಣಿತ, ಹಾಸ್ಯಕ್ಕೆ ಸೀಮಿತವಾಗಿರಲಿಲ್ಲ. ವಿದ್ಯಾರ್ಥಿಗಳ ಬುದ್ದಿಮತ್ತೆಯನ್ನು ಪರೀಕ್ಷಿಸುವ ಕಸರತ್ತಿಗೂ ವೇದಿಕೆ ಕಲ್ಪಿಸಲಾಗಿತ್ತು. ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಅವಕಾಶ ಒದಗಿಸಲಾಗಿತ್ತು.

ಇಂತಹ ಅದ್ಭುತಲೋಕಕ್ಕೆ ಎಲ್ಲರನ್ನು ಕರೆದುಕೊಂಡು ಹೋಗಿದ್ದು ಈಚೆಗೆ ನಗರದ ಬಾಪೂಜಿ ಸಭಾಂಗಣದಲ್ಲಿ ನಡೆದ ಅಂತರಕಾಲೇಜು ಯುವೋತ್ಸವ `ಪ್ರೇರಣಾ ರೆಸೋನೆನ್ಸ್-12~ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದು ನಗರದ ಬಿಐಇಟಿ ರಸ್ತೆಯಲ್ಲಿರುವ `ಜೆ.ಎಚ್. ಪಟೇಲ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಂಡ್ ಟೆಕ್ನಾಲಜಿ~.

ಈ ಯುವ ಕಾರ್ಯಕ್ರಮಕ್ಕೆ ಧ್ವನಿ ತುಂಬಿದ್ದು ದಾವಣಗೆರೆ, ಚಿತ್ರದುರ್ಗ, ಹಾವೇರಿ ಜಿಲ್ಲೆಗಳ ಆಯ್ದ 15 ಕಾಲೇಜುಗಳ 150 ವಿದ್ಯಾರ್ಥಿ-ವಿದ್ಯಾರ್ಥಿನಿಯರು. ಯುವ ಉತ್ಸವದಲ್ಲಿ ಗಮನ ಸೆಳೆದದ್ದು ಭಯಾನಕ ನೃತ್ಯ ಪ್ರದರ್ಶನ. ಭೂತ-ಪ್ರೇತಗಳ ಪರಿಕಲ್ಪನೆಯನ್ನು ಒಳಗೊಂಡ ನೃತ್ಯ ರೂಪಕಗಳು.

`ತಂಗಾಳಿಯಲ್ಲಿ ತೇಲಿ ಬಂದೆ, ನಿನ್ನನ್ನು ಸೇರಲೆಂದೇ...~ ರಾ...ರಾ.. ಸರಸಕು ರಾ... ರಾ... ಮುಂತಾದ ಹಾಡುಗಳಿಗೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ವಿಚಿತ್ರ ವೇಷ-ಭೂಷಣ ಹಾಕಿ ಕುಣಿದ ವೈಖರಿ ನೆರೆದ ಪ್ರೇಕ್ಷಕರ ಹಣೆಯಲ್ಲಿ ಬೆವರು ಮೂಡಿಸಿತು. 15 ತಂಡಗಳು ಒಂದಕ್ಕಿಂತ ಒಂದು ಉತ್ತಮ ಪ್ರದರ್ಶನ ನೀಡಿದವು.

ವಿದ್ಯಾರ್ಥಿಗಳ ಕೌಶಲ ಬಿಂಬಿಸುವ ಲಘು ನಾಟಕಗಳು ಗಮನ ಸಳೆದವು. ಬಹುತೇಕ ವಿದ್ಯಾರ್ಥಿಗಳು ಭ್ರಷ್ಟಾಚಾರದ ಸುತ್ತ ವಿಷಯ ಕೇಂದ್ರೀಕರಿಸಿದ್ದರು. ಭ್ರಷ್ಟಾಚಾರಕ್ಕೆ ಈಡಾಗುವ ಮನುಷ್ಯನ ವರ್ತನೆಗಳು, ಅಪಹಾಸ್ಯದ ಸನ್ನವೇಶಗಳು ನಗೆಗಡಲಲ್ಲಿ ತೇಲಿಸಿದವು.

ನಮ್ಮಲ್ಲಿನ ಪ್ರತಿಭೆಯನ್ನು ಇತರೆ ಕಾಲೇಜು ವಿದ್ಯಾರ್ಥಿಗಳ ಜತೆ ತುಲನೆ ಮಾಡಲು, ಅವರಲ್ಲಿನ ಕೌಶಲ ನಾವು ಅಳವಡಿಸಿಕೊಳ್ಳಲು ಈ ಯುವ ಉತ್ಸವ ದಾರಿದೀಪವಾಗಿದೆ. ಪಾಠದ ಜತೆ ಪಠ್ಯೇತರ ವಿಷಯದಲ್ಲೂ ಹೇಗೆ ಪ್ರಭುತ್ವ ಸಾಧಿಸಬಹುದು ಎನ್ನುವುದನ್ನು ಅರಿಯಲು ಸಹಕಾರಿಯಾಯಿತು ಎನ್ನುತ್ತಾರೆ ಜೆ.ಎಚ್. ಪಟೇಲ್ ಕಾಲೇಜಿನ ವಿದ್ಯಾರ್ಥಿನಿಯರಾದ ಅರ್ಪಿತಾ, ಗೌರಿ ಹಾಗೂ ಮೇಘನಾ.

ಬರೀ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮಾತ್ರ ವೇದಿಕೆ ಸೀಮಿತವಾಗಿರಲಿಲ್ಲ. ಕಾರ್ಯಕ್ರಮದ ಉದ್ಘಾಟನೆ, ಸಮಾರೋಪದ ನೆಪದಲ್ಲಿ ಉಪನ್ಯಾಸಕ್ಕೂ ಅವಕಾಶ ಕಲ್ಪಿಸಲಾಗಿತ್ತು.

ಬಾಪೂಜಿ ಅಕಾಡೆಮಿ ಆಫ್ ಮ್ಯಾನೇಜ್‌ಮೆಂಟ್‌ನ ಪ್ರಾಂಶುಪಾಲ ಡಾ.ಟಿ. ಮಂಜುನಾಥ್, ಬಾಪೂಜಿ ಪಾಲಿಟೆಕ್ನಿಕ್‌ನ ಪ್ರೊ.ಅರುಣ್‌ಕುಮಾರ್, ಗಣೇಶ್ ಅವರು ವ್ಯವಸ್ಥಾಪನಾ ಕೌಶಲ, ಬದುಕಿನ ಮೌಲ್ಯ ಹಾಗೂ ಆಡಳಿತ ನಿರ್ವಹಣೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಜತೆಗೆ, ವ್ಯವಹಾರಿಕ ಜ್ಞಾನ ವೃದ್ಧಿಸುವ, ಲೆಕ್ಕಪತ್ರಗಳ ಬಗ್ಗೆ ಅರಿವು ಮೂಡಿಸುವ `ಮ್ಯಾನೇಜೇರಿಯಾ~ ಸಂಶೋಧನಾ ಯೋಜನೆಗಳ ಕುರಿತು ಮಾಹಿತಿ ಒದಗಿಸುವ `ಟೆಕ್-ಟಿಕ್~ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಕಾಲೇಜಿನ ಪಾಂಶುಪಾಲ ಬಿ.ಎಲ್. ಕೋರೆ, ಪ್ರಾಧ್ಯಾಪಕರಾದ ಜಿ.ಎಲ್. ಪ್ರಸನ್ನಕುಮಾರ್, ನಿತಿನ್, ಲೋಕೇಶ್, ವಿಕ್ರಮ್ ಮತ್ತಿತರ ಶ್ರಮದ ಫಲ ವೇದಿಕೆಯ ಮೇಲೆ ಅಚ್ಚುಕಟ್ಟಾಗಿ ಮೂಡಲು ಪ್ರೇರಣೆಯಾಗಿತ್ತು.
ಕಾರ್ಯಕ್ರಮದ ಕೇಂದ್ರಬಿಂದು ಮಿಸ್ ಹಾಗೂ ಮಿಸ್ಟರ್ ಪ್ರೇರಣಾ ಮಂದ ಬೆಳಕಿನಲ್ಲಿ ಪ್ರೇರಣಾ ಕೀರೀಟಕ್ಕಾಗಿ ಯುವಕ-ಯುವತಿಯರು ರ‌್ಯಾಂಪ್‌ಶೋ ಮೇಲೆ ಹೆಜ್ಜೆ ಹಾಕಿದರು.
 
ಸಂಘಟಕರ ನಾನಾ ಪ್ರಶ್ನೆಗಳಿಗೆ ಚಾಣಾಕ್ಷತನದಿಂದ ಉತ್ತರಿಸಿದರು. ಹತ್ತು ಹಲವು ವಿಷಯ ಕುರಿತ ಸೆಮಿನಾರ್ ನೀಡಿದರು. ಒಬ್ಬರಿಗಿಂತ ಒಬ್ಬರದು ಅದ್ಭುತ ಪ್ರದರ್ಶನ. ಕೊನೆಗೆ ವಿದ್ಯಾರ್ಥಿಗಳ ಕರತಾಡನದ ಮಧ್ಯೆ ನೂತನ್ ಕಾಲೇಜಿನ ಕ್ರೂನಾಲಿ ಕೆ. ಜೈನ್ ಮಿಸ್ ಪ್ರೇರಣಾ ಹಾಗೂ ದವನ್ ಕಾಲೇಜಿನ ಎ.ಪಿ. ಪುನೀತ್ ಮಿಸ್ಟರ್ ಪ್ರೇರಣಾ ಕೀರೀಟ ತೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.