ADVERTISEMENT

ತನಿಖೆ ವೇಳೆ ತಾಂತ್ರಿಕ ಕೌಶಲ ರೂಢಿಸಿಕೊಳ್ಳಿ

ಪೂರ್ವವಲಯ ಮಟ್ಟದ ಪೊಲೀಸ್‌ ಕರ್ತವ್ಯ ಕೂಟದಲ್ಲಿ ಐಜಿಪಿ ಡಾ.ಎಂ.ಎ.ಸಲೀಂ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2017, 8:52 IST
Last Updated 12 ಅಕ್ಟೋಬರ್ 2017, 8:52 IST

ದಾವಣಗೆರೆ: ಪ್ರಕರಣಗಳ ತನಿಖೆ ನಡೆಸುವ ಸಂದರ್ಭ ಅಧಿಕಾರಿಗಳು ತಾಂತ್ರಿಕ ಹಾಗೂ ವೈಜ್ಞಾನಿಕ ಕೌಶಲಗಳನ್ನು ಬಳಸಿಕೊಳ್ಳಬೇಕು ಎಂದು ಪೂರ್ವವಲಯ ಐಜಿಪಿ ಡಾ.ಎಂ.ಎ.ಸಲೀಂ ಕಿವಿಮಾತು ಹೇಳಿದರು.

ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೂರ್ವವಲಯ ಮಟ್ಟದ ಪೊಲೀಸ್‌ ಕರ್ತವ್ಯ ಕೂಟ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಕರಣದ ಮೂಲವೇ ತನಿಖೆಯಾಗಿದ್ದು, ವಸ್ತುಸ್ಥಿತಿಯನ್ನು ಬಯಲು ಮಾಡುವುದೇ ಮೂಲ ಉದ್ದೇಶವಾಗಿರುತ್ತದೆ. ಆದ್ದರಿಂದ, ತನಿಖೆಗೆ ವಿಶೇಷ ಒತ್ತು ನೀಡಬೇಕು. ಜತೆಗೆ, ಇಲಾಖೆಯ ಇತರೆ ಕರ್ತವ್ಯಗಳಾದ ಕಾನೂನು ಸುವ್ಯವಸ್ಥೆ, ಸಂಚಾರ ನಿರ್ವಹಣೆ, ಕಾನೂನುಗಳ ಜಾರಿಯೂ ಮುಖ್ಯ ಎಂದರು.

ADVERTISEMENT

ಸಾಕ್ಷ್ಯಗಳ ಸಂಗ್ರಹ ಹಾಗೂ ಮಂಡನೆ ಮುಖ್ಯವಾಗಿದ್ದು, ತನಿಖಾ ಹಂತದಲ್ಲಿ ಲೋಪವಾಗದಂತೆ ಎಚ್ಚರವಹಿಸಬೇಕು. ತರಬೇತಿ ಶಾಲೆಗಳು, ಪೊಲೀಸ್ ಅಕಾಡೆಮಿ, ವಿಧಿವಿಜ್ಞಾನ ವಿಭಾಗ ಸೇರಿದಂತೆ ಇತರ ಕೌಶಲಗಳ ಬಗ್ಗೆ ತರಬೇತಿ ನೀಡುವ ಕೇಂದ್ರಗಳಿವೆ. ಫೊಟೊಗ್ರಫಿ, ಡಾಗ್ ಸ್ಕ್ಯಾಡ್, ಫಿಂಗರ್‌ಪ್ರಿಂಟ್ ಇತರೆ ವಿಷಯಗಳಲ್ಲಿ ವಿಶೇಷ ತರಬೇತುದಾರರಿಂದ ತನಿಖಾಧಿಕಾರಿಗಳಿಗೆ ತರಬೇತಿ ನೀಡುವುದು ಅವಶ್ಯ ಎಂದರು.

ತನಿಖಾ ಹಂತದಲ್ಲಿ ಸಂಗ್ರಹಿಸಿದ ಅಂಶಗಳು ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡುತ್ತದೆ. ಹಲವು ಬಾರಿ ತನಿಖಾಧಿಕಾರಿಯ ಲೋಪದಿಂದ ಅಪರಾಧಿಗೆ ಲಾಭವಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಕಾನೂನಿನಿಂದ ಅಪರಾಧಿಗಳು ತಪ್ಪಿಸಿಕೊಳ್ಳದಂತೆ ಜಾಗ್ರತೆ ವಹಿಸಬೇಕು ಎಂದು ಐಜಿಪಿ ಕಿವಿಮಾತು ಹೇಳಿದರು.

ಕೌಶಲಯುತ ತನಿಖೆಯಲ್ಲಿ ವಿಶೇಷ ಸಾಧನೆ ಮಾಡಿದವರ ವಿಧಾನಗಳನ್ನು ಇಲಾಖೆಯ ವಿವಿಧ ಸ್ತರಗಳಲ್ಲಿ ಅಳವಡಿಸಿಕೊಳ್ಳಲಾಗುವುದು. ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಸ್ಪರ್ಧಿಗಳು ಪ್ರತಿಭೆಯನ್ನು ಪ್ರದರ್ಶಿಸಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪಡೆದು ವಲಯಕ್ಕೆ ಹೆಸರು ತರಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಭೀಮಾಶಂಕರ ಎಸ್.ಗುಳೇದ ಮಾತನಾಡಿ, ಹಿಂದೆ, ಪ್ರಾಮುಖ್ಯತೆ ಪಡೆದ ವಿಚಾರಗಳು ಪ್ರಸ್ತುತ ಬೇರೆ ಆಯಾಮ ಪಡೆದುಕೊಳ್ಳುತ್ತಿವೆ. ತನಿಖೆಯೇ ಇಲಾಖೆಯ ಜೀವಾಳವಾಗಿದ್ದು, ಅಪರಾಧಿಯನ್ನು ನ್ಯಾಯಸ್ಥಾನದಲ್ಲಿ ತಂದು ನಿಲ್ಲಿಸಿ ಶಿಕ್ಷೆ ಕೊಡಿಸುವ ಕೆಲಸವಾಗುತ್ತಿದೆ. ತನಿಖೆ ಸಮಯದಲ್ಲಿ ಲೋಪವಾಗದಂತೆ ಜಾಗರೂಕರಾಗಿರಬೇಕು. ಲೋಪವೆಸಗಿದರೆ ಸೂಕ್ತ ಕ್ರಮ ಜರುಗಿಸಲಾಗುತ್ತಿದೆ ಎಂದು ಎಚ್ಚರಿಕೆ ನೀಡಿದರು.

ಪ್ರಾದೇಶಿಕ ವಿಧಿವಿಜ್ಞಾನ ವಿಭಾಗದ ಉಪ ನಿರ್ದೇಶಕಿ ಡಾ.ಛಾಯಾ ಮಾತನಾಡಿ, ಪೂರ್ವವಲಯದ ಸ್ಪರ್ಧಾಳುಗಳು ಉತ್ತಮ ಕೌಶಲ ಪರಿಣಿತಿ ಪಡೆದು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪಡೆಯಬೇಕು ಎಂದರು. ಡಿಎಸ್‌ಪಿ ಅನಿಲ್‌ಕುಮಾರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.