ADVERTISEMENT

ತೆಂಗಿನಕಾಯಿ ಸುಲಿಯಲು ಸರಳ ಯಂತ್ರ

​ಪ್ರಜಾವಾಣಿ ವಾರ್ತೆ
Published 17 ಜನವರಿ 2011, 9:30 IST
Last Updated 17 ಜನವರಿ 2011, 9:30 IST

ಚನ್ನಗಿರಿ: ಒಣಗಿದ ತೆಂಗಿನಕಾಯಿ ಸುಲಿಯಲು ಬಹಳಷ್ಟು ಶ್ರಮಪಡಬೇಕು. ಗ್ರಾಮೀಣ ಪ್ರದೇಶದಲ್ಲಿ ಕಾಯಿ ಸುಲಿಯಲು ಕಬ್ಬಿಣದಿಂದ ಮಾಡಿದ ಮಚ್ಚನ್ನು ಉಪಯೋಗಿಸುತ್ತಾರೆ. ಆದರೂ ಅದರಲ್ಲಿ ಸುಲಭವಾಗಿ ಸುಲಿಯಲು ಸಾಧ್ಯವಾಗುವುದಿಲ್ಲ. ಇಲ್ಲೊಬ್ಬ ಯುವಕ ಪರಿಶ್ರಮ ಇಲ್ಲದೇ ಸರಳವಾಗಿ ತೆಂಗಿನಕಾಯಿ ಸುಲಿಯುವ ಸರಳ ಯಂತ್ರವನ್ನು ಕಂಡುಹಿಡಿದಿದ್ದಾನೆ.

ಚನ್ನಗಿರಿ ಪಟ್ಟಣದ ಜೀವವಿಮಾ ಕಚೇರಿಗೆ ಹೋಗುವ ಮಾರ್ಗದಲ್ಲಿ ಕಾಳಿಕಾಂಬಾ ವರ್ಕ್‌ಶಾಪ್ ಇದೆ. 22 ವರ್ಷ ವಯಸ್ಸಿನ ಯುವಕ ಸಿ.ವಿ. ನಾಗರಾಜಾಚಾರಿ ಈ ಯಂತ್ರವನ್ನು ಕಂಡುಹಿಡಿದಿದ್ದಾನೆ.

ಈಗಲೂ ಹಳೇ ಪದ್ಧತಿಯಂತೆ ತೆಂಗಿನಕಾಯಿ ವ್ಯಾಪಾರಿಗಳು ತೆಂಗಿನಕಾಯಿಯನ್ನು ಸುಲಿಸಲು ಒಂದು ದೊಡ್ಡ ಹಾರೆಯನ್ನು ನೆಲಕ್ಕೆ ಚುಚ್ಚಿ ಕಾಯಿಯನ್ನು ಹಾರೆಯ ಮೇಲ್ಭಾಗದ ಚೂಪಾದ ತುದಿಗೆ ಸಿಕ್ಕಿಕೊಳ್ಳುವಂತೆ ಮಾಡಿ ಸುಲಿಯುತ್ತಾರೆ. ಈ ಕಾರ್ಯಕ್ಕೆ ಅನುಭವ ಇರಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಕೈಗೆ ಗಾಯವಾಗುವ ಸಂಭವ ಇರುತ್ತದೆ.

ಹೊಸ ಸರಳ ವಿಧಾನದ ಮೂಲಕ ಸಿಪ್ಪೆಯಿಂದ ಕಾಯಿಯನ್ನು ಬೇರ್ಪಡಿಸಬಹುದು. ಈ ಚಿತ್ರದಲ್ಲಿರುವ ಯಂತ್ರವನ್ನು ನೋಡಿ. ಮೊದಲನೆಯ ಹಿಡಿಕೆಯಿಂದ ಕಾಯಿಯನ್ನು ಒತ್ತಿ ಹಿಡಿಯಲಾಗುತ್ತದೆ. ಎರಡನೆಯ ಹಿಡಿಕೆ ಒತ್ತುವುದರಿಂದ ಸಿಪ್ಪೆ ಬೇರ್ಪಡುತ್ತದೆ. ಮೊದಲನೆಯ ಹಿಡಿಕೆಯನ್ನು 3-4 ಬಾರಿ ಒತ್ತಿ ಸಿಪ್ಪೆಯನ್ನು ಸಂಪೂರ್ಣವಾಗಿ ಸುಲಿಯಬಹುದು. ಈ ಸಾಧನಕ್ಕೆ ಮೋಟಾರ್‌ನ್ನು ಕೂಡಾ ಅಳವಡಿಸಬಹುದು. ಆದರೆ, ಖರ್ಚು ಹೆಚ್ಚಾಗುತ್ತದೆ. ಈ ಸಾಧನದ ವೈಶಿಷ್ಟವೆಂದರೆ ಹೆವಿಡ್ಯೂಟಿ, ಹೆಚ್ಚು ಸುರಕ್ಷತೆ, ಸರಳ ವಿಧಾನವಾಗಿದೆ. ಒಂದು ಗಂಟೆಗೆ 200 ತೆಂಗಿನಕಾಯಿಯ ಸಿಪ್ಪೆಯನ್ನು ಸುಲಿಯಬಹುದು. ಇದನ್ನು ತಯಾರಿಸಲು ರೂ 1,800 ಖರ್ಚಾಗುತ್ತದೆ. ಸಣ್ಣ ಉದ್ದಿಮೆದಾರರಿಗೆ ಈ ಯಂತ್ರ ಒಂದು ವರದಾನವಾಗುತ್ತದೆ.

ನಾಗರಾಜಾಚಾರಿ ಕೈಗಾರಿಕಾ ತರಬೇತಿಯನ್ನು ಅಭ್ಯಾಸ ಮಾಡುತ್ತಿದ್ದು, ಒಂದು ವಿಷಯದಲ್ಲಿ ಅನುತ್ತೀರ್ಣನಾಗಿದ್ದಾನೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಹೊಟ್ಟೆಪಾಡಿಗಾಗಿ ಮನೆಯಲ್ಲಿಯೇ ಸಣ್ಣ ವರ್ಕ್‌ಶಾಪ್ ಮಾಡಿಕೊಳ್ಳಲಾಗಿದೆ. ಈತನ ತಂದೆ ನಾಗಾಚಾರಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅವರ ತಾಯಿ ಮನೆಯ ಬಳಿಯೇ ಒಂದು ಸಣ್ಣ ಗೂಡಂಗಂಡಿ ಇಟ್ಟುಕೊಂಡಿದ್ದಾರೆ.

‘ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಛಲದಿಂದ ಈ ಯಂತ್ರವನ್ನು ಕಂಡುಹಿಡಿದಿದ್ದೇನೆ. ಮುಂದೆ ತೆಂಗಿನ ಮರ ಏರುವ ಸರಳ ಯಂತ್ರವನ್ನು ಕಂಡುಹಿಡಿಯಬೇಕೆಂಬ ಆಸೆ ಇದೆ. ಆದರೆ, ಹಣದ ಕೊರತೆ ಹಾಗೂ ಪ್ರೋತ್ಸಾಹದ ಕೊರತೆ ಇದೆ. ಸರ್ಕಾರದಿಂದ ಪ್ರೋತ್ಸಾಹ ಸಿಕ್ಕರೆ ಇನ್ನು ಹೊಸ ಹೊಸ ಯಂತ್ರಗಳನ್ನು ಕಂಡುಹಿಡಿದು ರೈತರಿಗೆ ನೀಡಬೇಕೆಂಬ ಮಹಾದಾಸೆ ಇದೆ ಎನ್ನುತ್ತಾರೆ ನಾಗರಾಜಾಚಾರಿ.

ಸಂಪರ್ಕಕ್ಕೆ ಮೊಬೈಲ್: 97384 24477.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.