ADVERTISEMENT

ತೋಟದ ಬೆಳೆ ಅವಲಂಬಿಸಿ ಆದಾಯ ಗಳಿಸಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2011, 5:10 IST
Last Updated 18 ಅಕ್ಟೋಬರ್ 2011, 5:10 IST

ದಾವಣಗೆರೆ: ಜಿಲ್ಲೆಯ ರೈತರು ಅಡಿಕೆ, ಮೆಕ್ಕೆಜೋಳ, ತೆಂಗಿಗೆ ಮಾತ್ರವೇ ಸೀಮಿತವಾಗದೆ ಇತರೆ ತೋಟಗಾರಿಕೆ ಬೆಳೆಗಳನ್ನು ಬೆಳೆದರೆ ಹಲವು ಸಹಾಯಧನ ದೊರೆಯುತ್ತದೆ ಮತ್ತು ಆರ್ಥಿಕ ಅಭಿವೃದ್ಧಿಯನ್ನೂ ಸಾಧಿಸಬಹುದು ಎಂದು ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ ಸಲಹೆ ನೀಡಿದರು.

ನಗರದ ರೇಣುಕಾ ಮಂದಿರದಲ್ಲಿ ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯ್ತಿ, ಸಹರಾ, ಸ್ವರ್ಡ್-ಕೆ, ಮಾದರಿ ಸೇವಾ ನೆರವು ಸಂಸ್ಥೆಗಳು ಮತ್ತು ಮೆ. ಸಿಂಹಪುರಿ ಅಗ್ರಿಟೆಕ್ ಕಂಪೆನಿ ಆಶ್ರಯದಲ್ಲಿ ಆಯೋಜಿಸಿದ್ದ `ಪ್ರಗತಿಯತ್ತ ತೋಟಗಾರಿಕೆ~ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ತೋಟಗಾರಿಕೆ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೊಳಿಸಿವೆ. ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಗುಟ್ಕಾ ನಿಷೇಧಿಸಿರುವುದರಿಂದ ಮುಂದೆ ಅಡಿಕೆಗೆ ಬೇಡಿಕೆ ಕಡಿಮೆಯಾಗಬಹುದು. ಹೀಗಾಗಿ, ಜಿಲ್ಲೆಯ ರೈತರು ಕೋಕೋ ಬೆಳೆಯಲು ಮುಂದಾಗುವಂತೆ ತಿಳಿಸಿದರು.

ಜಿಲ್ಲೆಯಲ್ಲಿ 500 ಹೆಕ್ಟೇರ್ ಕೋಕೋ ಬೆಳೆಯಲು ಶಿಫಾರಸು ಮಾಡುವಂತೆ ಸರ್ಕಾರವನ್ನು ಕೋರಿದ್ದೆ. 100ನಲ್ಲಿ ಬೆಳೆಯಲು ಮಂಜೂರಾತಿ ದೊರೆತಿದೆ. ಎಕರೆಗೆ 400 ಕೋಕೋ ಗಿಡಗಳನ್ನು ಹಾಕಬಹುದು.

ಇದರಿಂದ ಕನಿಷ್ಠ 15 ಕೆಜಿ ಕೋಕೋ ತೆಗೆಯಬಹುದು. ಮಾರುಕಟ್ಟೆಯಲ್ಲಿ ಕೆಜಿ ಕೋಕೋಗೆ ರೂ. 60ರಿಂದ 70 ಇದೆ. ಅಡಿಕೆ ಮಧ್ಯೆ ಕೋಕೋ ಬೆಳೆದರೆ, ಎಕರೆಗೆ ಒಂದೂವರೆಯಿಂದ ಎರಡು ಲಕ್ಷ ಹಣ ಗಳಿಸಬಹುದು. ಸಹಾಯಧನವೂ ಸಿಗುತ್ತದೆ ಎಂದ ಅವರು, ತಾವೂ ಬೆಳೆಯುತ್ತಿರುವುದಾಗಿ ಉದಾಹರಿಸಿದರು.

ರೈತರು ಪರ್ಯಾಯ ಬೆಳೆಗಳತ್ತ ಮನಸ್ಸು ಮಾಡಿದರೆ, ತೋಟಗಾರಿಕೆ ಅಭಿವೃದ್ಧಿಯಲ್ಲಿ ದಾವಣಗೆರೆ ಜಿಲ್ಲೆ ಮುಂಚೂಣಿಯಲ್ಲಿ ನಿಲ್ಲುತ್ತದೆ. ಹಿಂದೆ ತೆಂಗು ಕಾಮಧೇನು ಆಗಿತ್ತು. ನುಸಿರೋಗ ತಗಲಿರುವುದರಿಂದ ಕಣ್ಣೀರು ಹಾಕುವಂತಾಗಿದೆ. ಈ ಸಂಗತಿಗಳನ್ನು ರೈತರು ಅರಿಯಬೇಕು ಎಂದು ತಿಳಿಸಿದರು.

ರಾಷ್ಟ್ರೀಯ ತೋಟಗಾರಿಕಾ ಮಿಷನ್ ಅಡಿ 2008-09ರಲ್ಲಿ ರೂ. 1.40 ಕೋಟಿ, 2009-10ರಲ್ಲಿ ರೂ. 3.10, 2010-11 ರಲ್ಲಿ ರೂ. 3.10 ಕೋಟಿ ಅನುದಾನ ಬಂದಿತ್ತು. ಈ ಸಾಲಿನಲ್ಲಿ ಇನ್ನೂ ಹೆಚ್ಚು ದೊರೆಯುವ ವಿಶ್ವಾಸವಿದೆ ಎಂದರು.

ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಅನುಷ್ಠಾನ ಆಗುತ್ತಿದೆಯೋ ಇಲ್ಲವೋ. ಕತ್ತರಿಯಂತೂ ಬೀಳುತ್ತಿದೆ ಎಂದು ಮಾರ್ಮಿಕವಾಗಿ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರವೀಂದ್ರನಾಥ್ ಮಾತನಾಡಿ, ಸರ್ಕಾರ ಸಬ್ಸಿಡಿ ನೀಡುವುದು ಒಂದು ಭಾಗ. ರೈತರ ಪ್ರಯತ್ನ ಹಾಗೂ ಸದ್ಬಳಕೆ ಪ್ರಮುಖವಾಗಿದೆ. ಎಲ್ಲವನ್ನೂ ಸರ್ಕಾರವೇ ಮಾಡಬೇಕು ಎಂಬುದನ್ನು ಬಿಡಬೇಕು ಎಂದು ತಿಳಿಸಿದರು.

ಕರ್ನಾಟಕ ಬಂಜಾರ ತಾಂಡ ಅಭಿವೃದ್ಧಿ ನಿಗಮ ಅಧ್ಯಕ್ಷ ಎಂ. ಬಸವರಾಜ ನಾಯಕ ಮಾತನಾಡಿ, ಇಂದಿನ ಕೃಷಿ ಪದ್ಧತಿಯಿಂದ ಭೂಮಿ ಸತ್ವ ಕಳೆದುಕೊಂಡಿದೆ. ಇದರಿಂದಾಗಿ ನಾವು ನಿತ್ಯವೂ ವಿಷ ಸೇವಿಸುತ್ತಿದ್ದೇವೆ ಎಂದು ವಿಷಾದಿಸಿದರು.

ಜಿ.ಪಂ. ಪ್ರಭಾರ ಅಧ್ಯಕ್ಷೆ ಜಯಲಕ್ಷ್ಮೀ ಮಹೇಶ್, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಡಿ.ಆರ್.ಅಂಬಿಕಾ ರಾಜಪ್ಪ, ತಾ.ಪಂ. ಅಧ್ಯಕ್ಷೆ ಪ್ರತಿಭಾ ಮಲ್ಲಿಕಾರ್ಜುನ್, ಉಪಾಧ್ಯಕ್ಷ ಶಿವರುದ್ರಪ್ಪ, ಜಿ.ಪಂ. ಸದಸ್ಯೆ ಸಹನಾ ರವಿ, ಚಿದಾನಂದಪ್ಪ, ರೈತ ಮಂಜಣ್ಣ ಮಾತನಾಡಿದರು.

ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಯಶವಂತರಾವ್ ಜಾದವ್, ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಜಿ. ಹನುಮಂತಪ್ಪ, ಜಿಲ್ಲಾ ತೋಟಗಾರಿಕೆ ಸಂಘ ಉಪಾಧ್ಯಕ್ಷ ಮುರುಗೇಂದ್ರಪ್ಪ, ತೋಟಗಾರಿಕೆ ಇಲಾಖೆ ನಿರ್ದೇಶಕಿ ಪಿ. ಹೇಮಲತಾ, ಜಿ.ಪಂ. ಸಿಇಒ ಗುತ್ತಿ ಜಂಬುನಾಥ್, ಕೆಎಚ್‌ಎಫ್ ವ್ಯವಸ್ಥಾಪಕ ನಿರ್ದೇಶಕ ಎಸ್.ಕೆ. ಶ್ರೀಕಾಂತ್, ತೋಟಗಾರಿಕೆ ಅಪರ ನಿರ್ದೇಶಕ ಡಾ.ಡಿ.ಎಲ್. ಮಹೇಶ್ವರ್, ಉಪ ನಿರ್ದೇಶಕ ಕದಿರೇಗೌಡ ಉಪಸ್ಥಿತರಿದ್ದರು. ಕಾರ್ಯಾಗಾರದ ಅಂಗವಾಗಿ ತೋಟಗಾರಿಕೆ ಬೆಳೆಗಳ ಪ್ರದರ್ಶನ ಗಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.