ADVERTISEMENT

ದಾವಣಗೆರೆ ಖಾರಕ್ಕೆ ವಿದೇಶದಲ್ಲಿ ಬೇಡಿಕೆ

ರುಚಿ ತಣಿಸಲು ವಿಮಾನದಲ್ಲಿ ಹೋಗುತ್ತೆ ತಾಜಾ ತಿಂಡಿ, ಸಚಿವರ ಮನೆ ಕಾರ್ಯಕ್ರಮಗಳಿಗೂ ಪೂರೈಕೆ

ಪ್ರಕಾಶ ಕುಗ್ವೆ
Published 19 ಜೂನ್ 2017, 4:57 IST
Last Updated 19 ಜೂನ್ 2017, 4:57 IST
ದಾವಣಗೆರೆ ಖಾರಕ್ಕೆ ವಿದೇಶದಲ್ಲಿ ಬೇಡಿಕೆ
ದಾವಣಗೆರೆ ಖಾರಕ್ಕೆ ವಿದೇಶದಲ್ಲಿ ಬೇಡಿಕೆ   

ದಾವಣಗೆರೆ: ದಾವಣಗೆರೆ ಖಾರ ಈಗ ವಿದೇಶಗಳಲ್ಲೂ ಹೆಸರುವಾಸಿ. ಗರಿಗರಿಯಾಗಿದ್ದು ನೋಡುತ್ತಲೇ ಬಾಯಲ್ಲಿ ನೀರು ಬರಿಸುವ ಸ್ವಾದಿಷ್ಟ ಖಾರಕ್ಕೆ ದೇಶ–ವಿದೇಶಿಗರೂ ಈಗ ಬಾಯಿ ಚಪ್ಪರಿಸುತ್ತಿದ್ದಾರೆ. 

ವಾಣಿಜ್ಯ ನಗರಿ ದಾವಣಗೆರೆ ಕೇವಲ ಬೆಣ್ಣೆದೋಸೆ, ಮೆಣಸಿನಕಾಯಿ ಬಜ್ಜಿಗಷ್ಟೇ ಜನಪ್ರಿಯವಲ್ಲ, ರುಚಿ, ರುಚಿಯಾದ ಖಾರಕ್ಕೂ ಪ್ರಸಿದ್ಧಿ. ಹಾಗಾಗಿ, ಇಲ್ಲಿನ ಖಾರಕ್ಕೆ ಎಲ್ಲಿಲ್ಲಿದ ಬೇಡಿಕೆ.

ದಾವಣಗೆರೆ ಮೂಲದ ಸಾಕಷ್ಟು ಜನ ವಿದೇಶಗಳಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ. ಅವರ ಯೋಗಕ್ಷೇಮ ವಿಚಾರಿಸಲು ದಾವಣಗೆರೆ
ಯಿಂದ ತೆರಳುವ ಪ್ರತಿಯೊಬ್ಬರ ಕೈಯಲ್ಲೂ ಮೂರ್ನಾಲ್ಕು ಕೆ.ಜಿ. ಖಾರ ಇದ್ದೇ ಇರುತ್ತೆ. ಮಕ್ಕಳಿಗೆ, ಮೊಮ್ಮಕ್ಕಳಿಗೆ ಪ್ರೀತಿಯ ತಿಂಡಿಯನ್ನು ಅಪ್ಪ–ಅಮ್ಮ, ಅಜ್ಜ–ಅಜ್ಜಿಯಂದಿರು ಇಲ್ಲಿಂದ ಕಟ್ಟಿಸಿಕೊಂಡು ಹೋಗುತ್ತಾರೆ.

ADVERTISEMENT

ಎಲ್ಲೆಲ್ಲಿ ಖಾರ ಸಿಗುತ್ತೆ?: ದಾವಣಗೆರೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಖಾರ ತಯಾರಿಸುವ ಅಂಗಡಿಗಳಿವೆ. ಆದರೆ, ವಿದೇಶಗಳಲ್ಲೂ ಬೇಡಿಕೆ ಸೃಷ್ಟಿಸಿಕೊಂಡಿರುವವು ಬೆರಳಣಿಕೆಯಷ್ಟು. ಹಳೇ ದಾವಣಗೆರೆ ಭಾಗದಲ್ಲಿ ಹಳೇ ಬಿ.ಎಸ್‌.ಚನ್ನಬಸಪ್ಪ ಅಂಗಡಿ ಸಮೀಪದ ಗಡಿಯಾರ ಕಂಬದ ಕೆಳ ರಸ್ತೆಯಲ್ಲಿ ಹೊಟ್ಟೆ ನಂಜಪ್ಪ ಅವರ ಖಾರದ ಅಂಗಡಿ, ಬಾಪೂಜಿ ಹೈಸ್ಕೂಲ್ ಹತ್ತಿರದ ಬಿಐಟಿಇ ಕಾಲೇಜು ರಸ್ತೆಯ ಅಜ್ಜಿ ಖಾರ ಮಂಡಕ್ಕಿ ಅಂಗಡಿ, ಆರ್ಎಂಸಿ ಯಾರ್ಡ್‌ ರಸ್ತೆಯ ಗಣೇಶ ಭವನ, ಹದಡಿ ರಸ್ತೆಯ ಶಿವಬಾರ್ ಪಕ್ಕದಲ್ಲಿ, ಮೋತಿ ಕಾಂಪೌಂಡ್‌ ಸಮೀಪದ ಅಂಗಡಿಗಳು ಸೇರಿವೆ.

‘ನಾವು ತಯಾರಿಸಿದ ಖಾರ ನ್ಯೂಜಿಲೆಂಡ್, ಅಮೆರಿಕಾ, ದುಬೈ, ಕತಾರ್, ಶಾರ್ಜಾ, ಆಸ್ಟ್ರೇಲಿಯಾ ಕಂಡಿದೆ. ಅಲ್ಲಿಗೆ ಹೋಗುವ ಪ್ರತಿಯೊಬ್ಬರಿಗೂ ನಮ್ಮ ಅಂಗಡಿಯ ಖಾರವೇ ಬೇಕು. ಕವರ್‌ನಲ್ಲಿ ವಿಶೇಷವಾಗಿ ಪ್ಯಾಕ್‌ ಮಾಡಿಕೊಡಲಾಗುತ್ತದೆ. ಬಹುದಿನಗಳವರೆಗೆ ಗರಿಗರಿಯಾಗಿ ತಾಜಾವಾಗಿರುತ್ತದೆ’ ಎಂದು ಹೇಳುತ್ತಾರೆ ಬಾಪೂಜಿ ಹೈಸ್ಕೂಲ್ ಸಮೀಪದ ಅಜ್ಜಿ ಖಾರ ಮಂಡಕ್ಕಿ ಅಂಗಡಿಯ ಎ.ರಾಜು.

ಸಚಿವರ ಮನೆಗೂ ಖಾರ!: ಇವರ ಅಂಗಡಿಯ ಖಾರ ಶಾಸಕ ಶಾಮನೂರು ಶಿವಶಂಕರಪ್ಪ, ಸಚಿವ ಎಸ್‌.ಎಸ್.ಮಲ್ಲಿಕಾರ್ಜುನ ಅವರ ಇಡೀ ಕುಟುಂಬಕ್ಕೂ ಅಚ್ಚುಮೆಚ್ಚು. ಅವರ ಮನೆಯ ಎಲ್ಲಾ ಕಾರ್ಯಕ್ರಮಗಳಿಗೆ, ಅವರ ಮನೆಗೆ ನೆಂಟರಿಷ್ಟರು ಬಂದರೆ ಇವರ ಅಂಗಡಿಯ ಖಾರವೇ ಅಲ್ಲಿಗೆ ಹೋಗುತ್ತದೆ.
ಶಾಮನೂರು ಕುಟುಂಬದ ಶಿಫಾರಸಿನ ಮೇಲೆಯೇ ನವದೆಹಲಿಯ ಹಲವು ರಾಜಕಾರಣಿಗಳ ಕುಟುಂಬಗಳಿಗೂ ಇವರ ಅಂಗಡಿಯ ಖಾರ ಪರಿಚಿತವಾಗಿದೆ. ಖಾರದ ರುಚಿಗೆ ಮನಸೋತ ಅವರಿಂದ ಆಗಾಗ್ಗೆ ಬೇಡಿಕೆ ಬರುತ್ತಲೇ ಇರುತ್ತದೆ ಎನ್ನುತ್ತಾರೆ ರಾಜು.

ರಾಜು ಅವರು ಇದೇ ಸ್ಥಳದಲ್ಲಿ ಅಮ್ಮ ನಂದಾ ಅವರ ಜತೆ ಕಳೆದ 7 ವರ್ಷಗಳಿಂದ ಅಂಗಡಿ ನಡೆಸುತ್ತಿದ್ದಾರೆ. ಇದಕ್ಕೂ ಮೊದಲು ಅವರ ಮಾವ ಪದ್ಮರಾಜ್ ಅಂಗಡಿ ನೋಡಿಕೊಳ್ಳುತ್ತಿದ್ದರು.

‘ಟೇಸ್ಟಿಂಗ್‌ ಪೌಡರ್‌ ಹಾಕಲ್ಲ, ಗುಣಮಟ್ಟದ ಕಡ್ಲೆಬೇಳೆ, ಎಣ್ಣೆ, ಜತೆಗೆ ರುಚಿಗೆ ಕರಿಬೇವು, ಬೆಳ್ಳುಳ್ಳಿ ಹಾಕಿ ನೀಡುತ್ತೇವೆ. ಹಾಗಾಗಿ, ಜನ ಹುಡುಕಿಕೊಂಡು ಅಂಗಡಿಗೆ ಬರುತ್ತಾರೆ. ದಿನಕ್ಕೆ ಕನಿಷ್ಠ 50 ಕೆ.ಜಿ. ಖಾರ ತಯಾರಿಸುತ್ತೇವೆ. ಖಾರ ತಯಾರಿಕೆಗೆ ಮೂರು ವರ್ಷದ ಹಿಂದೆ ಯಂತ್ರ ತಂದಿದ್ದೇವೆ; ಆದರೆ, ರುಚಿ ಬದಲಾಗಲಿಲ್ಲ. ಕಾಲು ಕೆ.ಜಿಗೆ ₹ 50 ಬೆಲೆ ನಿಗದಿ ಮಾಡಿದ್ದೇವೆ’ ಎನ್ನುತ್ತಾರೆ ರಾಜು.

‘ವಿದೇಶದಲ್ಲಿ ನಮ್ಮ ಖಾರ ತಿಂದವರು ದಾವಣಗೆರೆಗೆ ಬಂದಾಗ ನಮ್ಮ ಅಂಗಡಿ ಹುಡುಕಿಕೊಂಡು ಬಂದು ನಿಮ್ಮ ಅಂಗಡಿ ಖಾರ ತುಂಬಾ ಚೆನ್ನಾಗಿತ್ತು ಎಂದು ಹೇಳಿ ಹೋಗುತ್ತಾರೆ. ಅವಾಗ ಖುಷಿಯಾಗುತ್ತೆ’ ಎಂದರು.   

‘ಬೆಂಗಳೂರಿನಿಂದ ಹೆಚ್ಚಿನ ಬೇಡಿಕೆ ಬಂದಿದ್ದರಿಂದ ಅಲ್ಲಿ ಒಂದು ಅಂಗಡಿ ಆರಂಭಿಸಲು ಪ್ರಯತ್ನಿಸಿದೆವು. ಆದರೆ, ಕೆಲಸಗಾರರ ಕೊರತೆ
ಯಿಂದ ಸಾಧ್ಯವಾಗಲಿಲ್ಲ’ ಎಂಬ ಮಾತನ್ನೂ ಸೇರಿಸುತ್ತಾರೆ ಅವರು.

***

ರಾಜ್ಯಾದ್ಯಂತ ಬೇಡಿಕೆ
ದಾವಣಗೆರೆ ಖಾರದ ವಿಶಿಷ್ಟ ರುಚಿಗೆ ಗ್ರಾಹಕರು ಮನಸೋತಿದ್ದಾರೆ. ಬೆಂಗಳೂರು, ಶಿವಮೊಗ್ಗ, ಬೆಳಗಾವಿ, ರಾಣೇಬೆನ್ನೂರು, ಹಾವೇರಿ, ಹುಬ್ಬಳ್ಳಿಯಿಂದಲೂ ಇಲ್ಲಿಗೆ ಬಂದು ಖಾರ ಖರೀದಿಸುತ್ತಿದ್ದಾರೆ.

***

ಬೇರೆ, ಬೇರೆ ಸ್ಥಳಗಳಲ್ಲಿ ತಿರುಗಾಡಿದ್ದೇನೆ. ಅಲ್ಲಿಯೂ ಖಾರದ ರುಚಿ ನೋಡಿದ್ದೇನೆ. ಆದರೆ, ದಾವಣಗೆರೆ ಖಾರದ ರುಚಿಗೆ ಯಾವುದೂ ಸಾಟಿ ಇಲ್ಲ.
ಸಿದ್ದೇಶ್, ಗ್ರಾಹಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.