ADVERTISEMENT

ದೇಗುಲ ತೆರವು: ಕರವೇ ವಿರೋಧ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2011, 6:50 IST
Last Updated 15 ಫೆಬ್ರುವರಿ 2011, 6:50 IST

ಹರಿಹರ: ನಗರದ ಇಂದಿರಾನಗರ- ವಿದ್ಯಾನಗರ ನಗರಸಭೆ ಉದ್ಯಾನದಲ್ಲಿ ಇರುವ ಆಂಜನೇಯ ದೇಗುಲವನ್ನು ತೆರವುಗೊಳಿಸಲು ಸೋಮವಾರ ಬೆಳಿಗ್ಗೆ ಆಗಮಿಸಿದ ನಗರಸಭೆ ಸಿಬ್ಬಂದಿ ವಿರುದ್ಧ ತಾಲ್ಲೂಕು ಕರವೇ ಕಾರ್ಯಕರ್ತರು, ಸ್ಥಳೀಯರು ಪ್ರತಿಭಟನೆ ನಡೆಸಿದರು.ತಾಲ್ಲೂಕು ಕರವೇ ಅಧ್ಯಕ್ಷ ನಾಗರಾಜ ಮೆಹರ್ವಾಡೆ ಮಾತನಾಡಿ, ಆಂಜನೇಯ ದೇವಸ್ಥಾನವನ್ನು ತೆರವುಗೊಳಿಸುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಅಧಿಕಾರಿಗೆ ಎಲ್ಲರಿಗೂ ಒಂದೇ ಕಾನೂನನ್ನು ಪಾಲಿಸುತ್ತಿಲ್ಲ. ಇದೇ ಉದ್ಯಾನವನದಲ್ಲಿ ಊರಮ್ಮನ ದೇವಸ್ಥಾನ, ನಗರಸಭೆ (ಯುಐಡಿಎಸ್‌ಎಸ್‌ಎಂಟಿ) ಮಳಿಗೆಗಳು, ಮದ್ರಸಾ ಹಾಗೂ ಖಾಸಗಿ ಶಾಲೆ ಇವೆ.

ನ್ಯಾಯಾಲಯದ ಆದೇಶದಂತೆ ನಗರಸಭೆ ಉದ್ಯಾನದಲ್ಲಿರುವ ಎಲ್ಲಾ ರೀತಿಯ ಕಟ್ಟಡಗಳನ್ನು ತೆರವುಗೊಳಿಸಿ ಪುನಃ ಉದ್ಯಾನ ನಿರ್ಮಿಸುವುದಾದರೆ ನಾವು ಬೆಂಬಲ ನೀಡುತ್ತೇವೆ. ದೇವಸ್ಥಾನಕ್ಕೆ ಒಂದು ಕಾನೂನು ಹಾಗೂ ಇತರ ಅಕ್ರಮ ಕಟ್ಟಡಗಳಿಗೆ ಒಂದು ಕಾನೂನು ಎಂದು ಪರಿಗಣಿಸಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.ನಗರಸಭೆ ಪೌರಾಯುಕ್ತ ಎಂ.ಕೆ. ನಲವಡಿ ಮಾತನಾಡಿ, ಆಂಜನೇಯ ದೇಗುಲದ ಮೂರ್ತಿಗಳನ್ನು ತೆರವುಗೊಳಿಸುವಂತೆ ಈಗಾಗಲೇ ನೋಟಿಸ್ ನೀಡಿದ್ದೇವೆ. ನೋಟಿಸ್ ಅವಧಿ ಮುಗಿದ ಕಾರಣ ದೇವಸ್ಥಾನ ತೆರವುಗೊಳಿಸಲು ಬಂದಿದ್ದೇವೆ. ಇನ್ನು ಎರಡು ದಿನಗಳ ಸಮಯ ನೀಡುತ್ತೇವೆ.

ಉದ್ಯಾನದಲ್ಲಿರುವ ಇತರ ಕಟ್ಟಡಗಳ ತಕರಾರು ಇದ್ದರೂ, ಜಿಲ್ಲಾಧಿಕಾರಿಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.ನಗರಸಭೆಯ ಕಂದಾಯ ಅಧಿಕಾರಿ ಮೋಹನ್, ನಗರಸಭೆ ಎಇ ದಳವಾಯಿ, ಮಂಜಪ್ಪ, ಕರವೇ ಕಾರ್ಯಕರ್ತರಾದ ಎನ್.ಇ. ಸುರೇಶ್, ತಿಮ್ಮಣ್ಣ, ಯಡೆಹಳ್ಳಿ ಮಂಜುನಾಥ, ಮಂಜು, ಗಣೇಶ್, ಹಾಲಪ್ಪ, ಹನುಮಂತಪ್ಪ ಹಳ್ಳಳ್ಳಿ, ಕೃಷ್ಣಾಸಾ ಕಠಾರೆ, ವಿದ್ಯಾನಗರ, ಇಂದಿರಾನಗರ ನಿವಾಸಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.