
ದಾವಣಗೆರೆ: ಸುತ್ತ ನಾಲ್ಕು ದಿಕ್ಕಿಗೂ ದೇವಸ್ಥಾನ, ಕಿರಿದಾದ ರಸ್ತೆ, ಸದಾ ಸಂಚಾರ ಒತ್ತಡ. ಮನೆ ಬಾಗಿಲಿಗೆ ಬಂದು ಕಸ ತೆಗೆದುಕೊಂಡು ಹೋಗುವ ಗಂಟೆ ಗಾಡಿಗಳಿವೆ. ಆದರೂ, ಅಲ್ಲಲ್ಲಿ ಕಸದ ರಾಶಿ ಇದೆ. ನೀರಿದ್ದರೂ ನಲ್ಲಿಯಲ್ಲಿ ಸಕಾಲಕ್ಕೆ ಬಾರದ ನೀರು.
ನಗರದ 11ನೇ ವಾರ್ಡಿನ ವಿಶೇಷತೆಗಳಿವು. ವಾರ್ಡ್ ವ್ಯಾಪ್ತಿಯಲ್ಲಿ 15ಕ್ಕೂ ಹೆಚ್ಚು ದೇವಸ್ಥಾನ, ಮಠ, ಮಸೀದಿಗಳಿವೆ. ಕಾಳಿಕಾದೇವಿ, ಆಂಜನೇಯ, ಚಂದ್ರಮೌಳೇಶ್ವರ, ಈರಣ್ಣ, ಗಣಪತಿ ಮತ್ತಿತರ ದೇವಸ್ಥಾನಗಳು ಹೆಸರುವಾಸಿಯಾಗಿವೆ. ನಗರ ದೇವತೆ ದುರ್ಗಾಂಬಿಕಾ ದೇವಸ್ಥಾನಕ್ಕೂ ಇದೇ ವಾರ್ಡ್ ಮೂಲಕ ಹಾದು ಹೋಗಬೇಕು.
ಇಲ್ಲಿಯ ಕಾಳಿಕಾಂಬಾ ದೇವಸ್ಥಾನದ ರಸ್ತೆಯಲ್ಲಿ ಬಿ.ಎಸ್.ಚನ್ನಬಸಪ್ಪ ಹೆಸರಾಂತ ಜವಳಿ ಮಳಿಗೆ ಇದೆ. ಈ ಸಾಲು ಸಾಲು ದೇವಸ್ಥಾನಗಳ
ದರ್ಶನಕ್ಕೆ ಹೊರ ಪ್ರದೇಶಗಳಿಂದ ಬರುವವರು, ಬಟ್ಟೆ ಅಂಗಡಿಗಳಿಗೆ ಭೇಟಿ ನೀಡುವವರ ಸಂಖ್ಯೆಯೂ ಇಷ್ಟೇ ದೊಡ್ಡದಿದೆ. ಹೀಗಾಗಿ ಈ ವಾರ್ಡ್ ಸದಾ ಜನನಿಬಿಡ.
ಈ ಪ್ರದೇಶದಲ್ಲಿ ವಾಸ ಮಾಡುವರ ದಿನದ ಅರ್ಧ ಭಾಗ ಈ ಸಂಚಾರ ದಟ್ಟಣೆಯಿಂದ ತಪ್ಪಿಸಿಕೊಳ್ಳುವುದರಲ್ಲೇ ಕಳೆದು ಹೋಗುತ್ತದೆ. ವಾರದಲ್ಲಿ ಕೆಲದಿನ ಈ ಭಾಗದಲ್ಲಿ ಏಕಮುಖ ಸಂಚಾರ ಮತ್ತಿತರ ಕ್ರಮಗಳನ್ನು ಪೊಲೀಸರು ಕೈಗೊಂಡರೂ ಈ ದಟ್ಟಣೆತಗ್ಗಿಸಲು ಸಾಧ್ಯವಾಗುತ್ತಿಲ್ಲ ಎಂಬ ಆಕ್ಷೇಪ, ಅಸಮಾಧಾನ ಇಲ್ಲಿನ ನಿವಾಸಿಗಳದ್ದು.
ಕಿರಿದಾದ ರಸ್ತೆಗಳಾದರೂ ಎಲ್ಲವೂ ಕಾಂಕ್ರೀಟ್‌ಮಯ. ಆದರೆ, ಸ್ವಚ್ಛತೆ ಮಾತ್ರ ಅಷ್ಟಕ್ಕಷ್ಟೆ. ಉಳಿದ ವಾರ್ಡ್‌ಗಳಿಗೆ ಹೋಲಿಸಿದರೆ ಇಲ್ಲಿ ಹಂದಿಗಳ ‘ದರ್ಬಾರ್’ ಕಡಿಮೆ.‘ಈ ಭಾಗದಲ್ಲಿ ಪ್ರತಿಷ್ಠಿತ ಬಟ್ಟೆ ಅಂಗಡಿಗಳಿವೆ. ಇಲ್ಲಿಗೆ ಬರುವ ಗ್ರಾಹಕರ ವಾಹನಗಳಿಗೆ ಮಾತ್ರ ಪಾರ್ಕಿಂಗ್ ವ್ಯವಸ್ಥೆ ಇಲ್ಲ.
ಸಾಲದ್ದಕ್ಕೆ ಆಟೊಗಳ ಹಾವಳಿ ವಿಪರೀತ. ಕಂಡ, ಕಂಡಲ್ಲಿ ಆಟೊ ನಿಲ್ಲಿಸಿ, ಇನ್ನಷ್ಟು ಸಮಸ್ಯೆ ಸೃಷ್ಟಿಸುವ ಆಟೊಗಳಿಗೆ ಕಡಿವಾಣ ಹಾಕುವವರೇ ಇಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಕಾಳಿಕಾದೇವಿ ರಸ್ತೆಯ ಕಿರಾಣಿ ಅಂಗಡಿಯೊಂದರ ಮಾಲೀಕ ಮಾಲತೇಶ.
‘ನಲ್ಲಿ ನೀರು ಬಿಡಲು ಇಲ್ಲಿ ನಿಗದಿತ ಸಮಯವೇ ಇಲ್ಲ. ರಾತ್ರಿ ಸರಿಹೊತ್ತಿಗೆ ನೀರು ಬಿಡುತ್ತಾರೆ; ಅದೂ ಒಂದೇ ಗಂಟೆ ಅವಧಿ. ಅಷ್ಟರೊಳಗೆ ನೀರು ಹಿಡಿದುಕೊಂಡರೆ ಸರಿ, ಇಲ್ಲದಿದ್ದರೆ ವಾರಪೂರ್ತಿ ಹನಿ ನೀರು ಸಿಗಲ್ಲ’ ಎನ್ನುತ್ತಾರೆ ಸುಲ್ತಾನ್‌ಪೇಟೆಯ ಕಸಾಯಿಗಲ್ಲಿಯ ಹಿರಿಯ ನಾಗರಿಕ ಜಾಬಿರ್.
‘ಮನೆ ಬಾಗಿಲಿಗೆ ಕಸದ ಗಾಡಿ ಬರುತ್ತೆ; ಆದರೆ, ಪ್ರತಿ ದಿವಸ ದುಡ್ಡು ಕೇಳ್ತಾರೆ. ಹಿಂದೆ ಹೀಗಿರಲಿಲ್ಲ. ಪ್ರತಿ ದಿವಸ ದುಡ್ಡು ಕೊಟ್ಟು ಕಸ ಕೊಡಲು ನಮ್ಮಿಂದಾಗುವುದಿಲ್ಲ’ ಎನ್ನುವ ಆಕ್ಷೇಪ ಸುಲ್ತಾನ್‌ಪೇಟೆಯ ರೇಣುಕಮ್ಮ ಅವರದ್ದು.
‘ಸಿಹಿ ನೀರು ಕುಡಿಯುವ ಭಾಗ್ಯ ನಮಗಿಲ್ಲ. ಕೊನೆಪಕ್ಷ ಬೋರ್‌ವೆಲ್ ನೀರು ಕುಡಿಯೋಣ ಎಂದರೂ ಅದೂ ವಾಸನೆ’ ಎನ್ನುವ ದೂರು ಇದೇ ಪ್ರದೇಶದ ನಿವಾಸಿ ಭೀಮಪ್ಪ ಅವರದ್ದು.
‘ಮೊದಲು ಈ ವಾರ್ಡಿನಲ್ಲಿ ಸಮಸ್ಯೆಗಳಿದ್ದವು. ಈಗ ಹಂತ, ಹಂತವಾಗಿ ಸಮಸ್ಯೆಗಳು ಬಗೆಹರಿದಿವೆ. ಸಿಮೆಂಟ್ ರಸ್ತೆ, ಒಳಚರಂಡಿ ವ್ಯವಸ್ಥೆ ಆಗಿದೆ. ನೀರಿನ ಸಮಸ್ಯೆಯೂ
ಅಷ್ಟಾಗಿ ಇಲ್ಲ. ರಸ್ತೆ ಕಿರಿದಾಗಿರುವುದರಿಂದ ಸಂಚಾರ ಒತ್ತಡ ಮಾತ್ರ ಹೆಚ್ಚಿದೆ’ ಎನ್ನುವ ಅಭಿಪ್ರಾಯ ಗಣೇಶಪೇಟೆ ನಿವಾಸಿ ಕೆ.ಎಸ್.ಮಂಜುನಾಥ್ ಅವರದ್ದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.