ADVERTISEMENT

ನನ್ನ ವಿರುದ್ಧ ಪಿತೂರಿ: ಎಸ್‌ವಿಆರ್ ಆರೋಪ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2011, 8:55 IST
Last Updated 14 ಮಾರ್ಚ್ 2011, 8:55 IST

ದಾವಣಗೆರೆ: ತಾವು ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಹೊಂದಿರುವುದು ಕೆಲವರಿಗೆ ಅಸಹನೀಯವಾಗಿದ್ದು ತಮ್ಮ ವಿರುದ್ಧ ಪಿತೂರಿ ನಡೆಸಿದ್ದಾರೆ ಎಂದು ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಎಸ್.ವಿ. ರಾಮಚಂದ್ರ ಆರೋಪಿಸಿದರು.

ನಾಯಕ ವಿದ್ಯಾರ್ಥಿನಿಲಯದ ಆಡಳಿತ ಮಂಡಳಿ, ತಾಲ್ಲೂಕು ನಾಯಕ ಸಮಾಜ ಸಂಘ ಮತ್ತು ವಾಲ್ಮೀಕಿ ನಾಯಕ ವಧು-ವರರ ಅನ್ವೇಷಣಾ ಕೇಂದ್ರ ಸಮಿತಿ ಆಶ್ರಯದಲ್ಲಿ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ, ನಾಯಕ ಸಮಾಜದ ಜನಪ್ರತಿನಿಧಿಗಳು, ಉನ್ನತ ಅಧಿಕಾರಿಗಳಿಗೆ ಸನ್ಮಾನ ಹಾಗೂ ನಾಯಕ ವಿದ್ಯಾರ್ಥಿನಿಲಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.

ತಾವು ರಾಜಕೀಯವಾಗಿ ಬೆಳೆಯಲು ಸಮಾಜ ಕಾರಣವಾಗಿದ್ದು, ತಾವು ಅಧ್ಯಕ್ಷರಾಗಿರುವ ಹಟ್ಟಿ ಚಿನ್ನದ ಗಣಿ ಪ್ರತಿ ವರ್ಷ 150ರಿಂದ 170 ಕೋಟಿ ರೂ ಲಾಭ ಮಾಡುತ್ತಿದೆ ಎಂದು ತಿಳಿಸಿದರು.ತಾವು ಯಾರಿಗೂ ಹೆದರುವುದಿಲ್ಲ. ಮುಂದಿನ ಉಪ ಚುನಾವಣೆಯಲ್ಲಿ ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸ ತಮಗಿದೆ. ಅಲ್ಲಿನ ಜನರ ಪ್ರೀತಿಯನ್ನು ಸಂಪಾದಿಸಿದ್ದು ಅವರು ತಮ್ಮ ಕೈಬಿಡುವುದಿಲ್ಲ. ನಾಯಕ ಸಮಾಜವೂ ತಮ್ಮ ಜತೆಗಿದೆ ಎಂದರು.

ನಾಯಕ ಸಮಾಜದ ವಿದ್ಯಾರ್ಥಿನಿಲಯ ಅಭಿವೃದ್ಧಿಗೆ ಶ್ರಮಿಸಲಾಗುವುದು. ಮುಂದಿನ ದಿನಗಳಲ್ಲಿ ಸಮಾಜದ ಪ್ರತಿಭಾವಂತರನ್ನು ರಾಜ್ಯಮಟ್ಟದಲ್ಲಿ ಗೌರವಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ವಾಲ್ಮೀಕಿ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ನಗರಸಭೆ ಮಾಜಿ ಅಧ್ಯಕ್ಷ ಎಚ್.ಕೆ. ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ವಾಲ್ಮೀಕಿ ಗಿರಿಜನ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ. ರಂಗಪ್ಪ, ನಗರಸಭೆ ಮಾಜಿ ಅಧ್ಯಕ್ಷ ಬಿ. ವೀರಣ್ಣ, ಜಯದೇವಪ್ಪ, ಕೃಷ್ಣಪ್ಪ ಹಾಜರಿದ್ದರು.

ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರ ಎಸ್. ಕರನಿಂಗ್, ಲೋಕಾಯುಕ್ತದ ವೈದ್ಯಕೀಯ ವಿಚಕ್ಷಣಾ ಸಮಿತಿಯ ಸದಸ್ಯ ಡಾ.ಸಿ.ಎಸ್. ಹನುಮಂತಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಯೋಜನಾ ನಿರ್ವಹಣಾಧಿಕಾರಿ ಕೆ. ನಟರಾಜ, ಪರಿಶಿಷ್ಟ ವರ್ಗ ನಿಗಮದ ಜಿಲ್ಲಾ ಅಧಿಕಾರಿ ಬಿ. ಆನಂದ, ಮಹಾನಗರ ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿ ಟಿ. ಆಂಜನೇಯ, ಜಿ.ಪಂ. ಉಪಾಧ್ಯಕ್ಷ ಟಿ. ಮುಕುಂದ, ಜಿ.ಪಂ. ಸದಸ್ಯರಾದ ಕೆ.ಪಿ. ಪಾಲಯ್ಯ, ಯಶೋದಮ್ಮ ಹಾಲೇಶಪ್ಪ, ಪ್ರೇಮಾ ಸಿದ್ದೇಶ್, ಜಿ. ಮಂಜುಳಾ, ಮಾಜಿ ಉಪ ಮೇಯರ್‌ಗಳಾದ ಪುಷ್ಪಾ ದುರುಗೇಶ್, ಟಿ. ಹಾಲಮ್ಮ ಅವರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.