ADVERTISEMENT

ನಾಗರಪಂಚಮಿ ಮಕ್ಕಳ ಹಬ್ಬವಾಗಲಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2012, 8:30 IST
Last Updated 21 ಜುಲೈ 2012, 8:30 IST

ದಾವಣಗೆರೆ: ನಾಗರ ಪಂಚಮಿಯಂದು ಸರ್ಕಾರ ಮಕ್ಕಳಿಗೆ ಹಾಲು ನೀಡುವ ಮೂಲಕ ಸಾರ್ವತ್ರಿಕವಾಗಿ ಮಕ್ಕಳ ಪಂಚಮಿಯನ್ನಾಗಿ ಆಚರಿಸಲಿ ಎಂದು ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದರು.

ನಗರದ ಕೊಂಡಜ್ಜಿ ರಸ್ತೆಯ ಬಿಜೆಎಂ ಶಾಲೆಯಲ್ಲಿ ಶುಕ್ರವಾರ `ಕಲ್ಲು ನಾಗರ ಹಾಲು; ಮಕ್ಕಳ ಪಾಲು~ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಹಾಲು ವಿತರಿಸಿ ಅವರು ಮಾತನಾಡಿದರು.

ನಾಗರ ಪಂಚಮಿಯಂದು ಕಲ್ಲಿನ ನಾಗರಕ್ಕೆ ಹಾಲು ಸುರಿಯುವ ಮೂಲಕ ಪೌಷ್ಟಿಕಾಂಶವುಳ್ಳ ಆಹಾರವನ್ನು ವ್ಯರ್ಥ ಮಾಡಲಾಗುತ್ತದೆ. ವಾಸ್ತವವಾಗಿ ನಾಗರ ಹಾವು ಹಾಲು ಕುಡಿಯುವುದಿಲ್ಲ. ಆದ್ದರಿಂದ ಅದೇ ನಾಗರ ದೇವರ ಹೆಸರಿನಲ್ಲಿ ಮಕ್ಕಳಿಗೆ ಹಾಲು ವಿತರಿಸಬೇಕು. ಈ ರೀತಿ ಸರ್ಕಾರ ಶಾಲೆಗಳಲ್ಲಿ ಹಾಲು ವಿತರಿಸಿದರೆ ಬೇಧ ಭಾವ ಇಲ್ಲದೇ ಎಲ್ಲ ಮಕ್ಕಳಿಗೂ ಹಾಲು ನೀಡಿದರೆ ಭಾವೈಕ್ಯ ಮೂಡಿಸಬಹುದು ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ಬರಗಾಲದಿಂದ ತತ್ತರಿಸಿದೆ. ಮುಂದೆ ಆಹಾರಕ್ಕಾಗಿಯೇ ಬದುಕುವ ದಿನ ಬರಬಹುದು. ನೀರು, ಭೂಮಿ ಎಲ್ಲವೂ ಖಾಸಗೀಕರಣವಾಗುತ್ತಿದೆ. ಆದ್ದರಿಂದ ಆಹಾರದ ದುಂದುವೆಚ್ಚ ಸಲ್ಲದು. ದೇವರ ಹೆಸರಿನ್ಲ್ಲಲಿ ಹೋಮ ಹವನಕ್ಕೆ ಬಟ್ಟೆ, ಆಹಾರ ವಸ್ತುಗಳನ್ನು ಸುರಿಯುವುದೂ ನಿಲ್ಲಬೇಕು. ದೇಶದಲ್ಲಿ 20 ದಶಲಕ್ಷ ಮಕ್ಕಳು  ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿದ್ದಾರೆ. ದೇವರ ಹೆಸರಿನಲ್ಲಿ 10 ದಶಲಕ್ಷ ಲೀಟರ್ ಹಾಲು ವ್ಯರ್ಥವಾಗುತ್ತಿದೆ. ಪಂಚಮಿ ಹಬ್ಬದಂದು ಶಾಲೆಯ, ಅಕ್ಕಪಕ್ಕದ ಮಕ್ಕಳಿಗೆ ನಾಗರಿಕರು ಹಾಲು ನೀಡಬೇಕು ಎಂದು ಮನವಿ ಮಾಡಿದರು.

`ದಾರಿದೀಪ~ ಉದ್ಘಾಟನೆ
ಇದೇ ಸಂದರ್ಭ ಶಾಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ಆರಂಭಿಸಲಾದ `ದಾರಿದೀಪ~ ಬೀದಿಮಕ್ಕಳ ತಂಗುದಾಣವನ್ನು ಮೇಯರ್ ಸುಧಾ ಜಯರುದ್ರೇಶ್ ಉದ್ಘಾಟಿಸಿದರು.

ದಾರಿದೀಪ ಬಗ್ಗೆ ಮಾಹಿತಿ ನೀಡಿದ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಕೆ.ಸಿ. ಬಸವರಾಜಯ್ಯ ಅವರು, ಕಳೆದ 3 ತಿಂಗಳಿಂದ ಜಿಲ್ಲೆಯಲ್ಲಿ ಈ ಕಾರ್ಯಕ್ರಮ ಅನುಷ್ಠಾನಕ್ಕೆ ಬಂದಿದೆ. ಮಕ್ಕಳ ಹಕ್ಕು ಕಾಯ್ದೆಗೆ ಪೂರಕವಾದ ವ್ಯವಸ್ಥೆಯಿದು.

ಅನಾಥ, ಬೀದಿಪಾಲಾದ ಮಕ್ಕಳನ್ನು ರಕ್ಷಿಸಿ ಶಿಕ್ಷಣ ಸೌಲಭ್ಯ ಹಾಗೂ ಒಳ್ಳೆಯ ಬದುಕಿಗೆ ಪೂರಕ ವಾತಾವರಣ ನಿರ್ಮಿಸುವುದು ಈ ಯೋಜನೆಯ ಗುರಿ. ಆದ್ದರಿಂದ ಯಾವುದೇ ಮಗುವನ್ನು ಬೀದಿಪಾಲಾಗಲು ಬಿಡದೇ ಇಂಥ ಕೇಂದ್ರಗಳಿಗೆ ಸೇರಿಸಲು ಸಹಕರಿಸಬೇಕು ಎಂದು ಕೋರಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ವಿ. ವಾಸುದೇವ್, ಪಾಲಿಕೆ ಉಪ ಆಯುಕ್ತ ರವೀಂದ್ರ ಮಲ್ಲಾಪುರ, ಚನ್ನಬಸವ ಸ್ವಾಮೀಜಿ, ಉದ್ಯಮಿ ಚಿಂದೋಡಿ ಚಂದ್ರಧರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.