ADVERTISEMENT

ನಿವೇಶನಕ್ಕೆ ಆಗ್ರಹಿಸಿ ನಾಗರಿಕರ ಧರಣಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2011, 9:50 IST
Last Updated 15 ಫೆಬ್ರುವರಿ 2011, 9:50 IST

ಮಲೇಬೆನ್ನೂರು: ಇಲ್ಲಿನ ನಿವೇಶನ ರಹಿತ ಕುಟುಂಬದ ನಾಗರಿಕರು ನವಗ್ರಾಮದಲ್ಲಿ ನಿವೇಶನ ನೀಡುವಂತೆ ಆಗ್ರಹಿಸಿ ಸೋಮವಾರ ಗ್ರಾ.ಪಂ. ಕಚೇರಿ ಎದುರು ಧರಣಿ ನಡೆಸಿದರು.
ನೀರಾವರಿ ಇಲಾಖೆ ಆವರಣದಿಂದ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು, ನವಗ್ರಾಮದ ಪಕ್ಕದ ಗೋಮಾಳದ ಸರ್ವೆ ಮಾಡಿಸಿ ನಿವೇಶನ ನಿರ್ಮಿಸಿ ಬಡ ಜನತೆಗೆ ವಿತರಿಸಬೇಕು ಎಂದು ಒತ್ತಾಯಿಸಿದರು.

ಗ್ರಾ.ಪಂ ಅಧ್ಯಕ್ಷೆ ಸುನಿತಾ, ಸಮಸ್ಯೆ ಬಗೆಹರಿಸಲು ಕಾಲಾವಕಾಶ ಕೇಳಿದರು. ಇದಕ್ಕೆ ಧರಣಿ ನಿರತರು ಒಪ್ಪಲಿಲ್ಲ. ಕಡೆಗೆ ನಾಲ್ಕು ದಿನ ಸಮಯ ನೀಡಿ ಸಮಸ್ಯೆ ಪರಿಹರಿಸುತ್ತೇವೆ ಎಂದಾಗ, 4 ತಿಂಗಳ ಹಿಂದೆ ಸಮಸ್ಯೆ ಬಗೆಹರಿಸುವುದಾಗಿ ಆಶ್ವಾಸನೆ ನೀಡಿದ್ದು, ಈವರೆಗೂ ಬೇಡಿಕೆ ಈಡೇರಿಸಿಲ್ಲ ಎಂದು ವಾಗ್ವಾದ ನಡೆಯಿತು. ಸಮಸ್ಯೆ ಬಗೆಹರಿಯುವವರೆಗೆ ಪ್ರತಿಭಟನೆ ನಡೆಸುವುದಾಗ ಘೋಷಿಸಿದರು.

ಇದೇ ವೇಳೆ ಗ್ರಾ.ಪಂ ಭಾನುವಳ್ಳಿ ಸುರೇಶ್ ಆಗಮಿಸಿ, ಈ ಸಮಸ್ಯೆ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಒಮ್ಮೆಯೂ ಚರ್ಚೆಗೆ ಬಂದಿಲ್ಲ ಎಂದು ಧರಣಿ ನಿರತರನ್ನು ಬೆಂಬಲಿಸಿದರು.
ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ನಾಗರಾಜ್ ಪಾಳೇಗಾರ್ ಧರಣಿ ನೇತೃತ್ವ ವಹಿಸಿದ್ದರು.  ಚೌಡಪ್ಪ, ಸುರೇಶ್, ಮುಬೀನಾ, ಕೌಸರ್, ತೌಸೀಫ್ ಅಹ್ಮದ್, ಅಬ್ದುಲ್ ರೆಹ್ಮಾನ್, ಅಮೀನಾಬಿ, ರಂಗಮ್ಮ, ನೀಲಮ್ಮ, ಸಯ್ಯದಾಬಾನು, ದಾದಿಯಾ, ಹುಸೇನ್ ಬೀ  ಮತ್ತಿತರರು ಉಪಸ್ಥಿತರಿದ್ದರು. 

ಅಧ್ಯಕ್ಷೆ ಸ್ಪಷ್ಟನೆ: ಆಶ್ರಯ ಬಡಾವಣೆ ಗೋಮಾಳದ ಸರ್ವೇ ಮಾಡುವಂತೆ ಕೋರಲಾಗಿದೆ. ಜಮೀನಿನಲ್ಲಿ ಬೆಳೆ ಇದ್ದ ಕಾರಣ ನಡೆದಿಲ್ಲ. ಜತೆಗೆ, ರೈತರ ಪ್ರತಿರೋಧವಿದೆ ಎಂದು ಗ್ರಾ.ಪಂ. ಅಧ್ಯಕ್ಷೆ ಸುನಿತಾ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.ಈಗಾಗಲೆ 625ಕ್ಕೂ ಹೆಚ್ಚು ನಿವೇಶನ ನಿರ್ಮಿಸಿ ಹಂಚಿದ್ದು, 200ಕ್ಕೂ ಹೆಚ್ಚು ಜನ ಖಾತೆ ಮಾಡಿಸಿ ಕೊಂಡಿಲ್ಲ. ಅವರಿಗೆ ಖಾತೆ ಮಾಡಿಸಿಕೊಳ್ಳುವಂತೆ ಸೂಚನೆ ನೀಡಲಾಗುವುದು. ಬರದಿದ್ದಲ್ಲಿ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿ ಆ ನಿವೇಶನ ಮುಟ್ಟುಗೋಲು ಹಾಕಿಕೊಂಡು ನಿವೇಶನ ರಹಿತರಿಗೆ ಹಂಚಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.