ADVERTISEMENT

ನೀರಾವರಿ ಇಲಾಖೆಗೆ ಬೀಗ ಜಡಿದು ಪ್ರತಿಭಟನೆ

22 ಕೆರೆಗಳಿಗೆ ಬಾರದ ನೀರು; ಏತ ನೀರಾವರಿ ಹೋರಾಟ ಸಮಿತಿ ಸದಸ್ಯರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 19 ಜೂನ್ 2018, 6:30 IST
Last Updated 19 ಜೂನ್ 2018, 6:30 IST
22 ಕೆರೆಗಳಿಗೆ ನೀರು ಹಾಯಿಸಬೇಕು ಎಂದು ಒತ್ತಾಯಿಸಿ ಏತ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ದಾವಣಗೆರೆಯ ಜಲಸಂಪನ್ಮೂಲ ಕಚೇರಿ ಎದುರು ಪ್ರತಿಭಟನೆ ನಡೆಯಿತು
22 ಕೆರೆಗಳಿಗೆ ನೀರು ಹಾಯಿಸಬೇಕು ಎಂದು ಒತ್ತಾಯಿಸಿ ಏತ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ದಾವಣಗೆರೆಯ ಜಲಸಂಪನ್ಮೂಲ ಕಚೇರಿ ಎದುರು ಪ್ರತಿಭಟನೆ ನಡೆಯಿತು   

ದಾವಣಗೆರೆ: 22 ಕೆರೆಗಳಿಗೆ ನೀರು ತುಂಬಿಸಲು ಕ್ರಮ ಕೈಗೊಳ್ಳುವುದನ್ನು ಬಿಟ್ಟು ನೆಪ ಹೇಳಿ ಜಲ ಸಂಪನ್ಮೂಲ ಇಲಾಖೆ ಮುಂದೂಡುತ್ತಿದೆ ಎಂದು ಆರೋಪಿಸಿದ ಏತ ನೀರಾವರಿ ಹೋರಾಟ ಸಮಿತಿಯು ಇಲಾಖೆ ಕಚೇರಿಗೆ ಸೋಮವಾರ ಬೀಗ ಜಡಿಯಿತು. ಕೆರೆಗಳಿಗೆ ನೀರು ಬರುವವರೆಗೆ ಕಚೇರಿಯನ್ನೂ ಬಂದ್‌ ಮಾಡಿ ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, ಇಲಾಖೆಯ ಎಲ್ಲ ಅಧಿಕಾರಿಗಳು, ಸಿಬ್ಬಂದಿಯನ್ನು ಹೊರಗೆ ಕಳುಹಿಸಿ ಬೀಗ ಹಾಕಿ ಅಲ್ಲೇ ಕುಳಿತು ಧರಣಿ ಮಾಡಿದರು.

ಈ ಬಾರಿ ಚೆನ್ನಾಗಿ ಮಳೆ ಬಂದಿದೆ. 22 ಕೆರೆ ತುಂಬಿಸುವ ಯೋಜನೆ ಸರಿಯಾಗಿ ಅನುಷ್ಠಾನಗೊಂಡಿಲ್ಲ. ಅದಕ್ಕಾಗಿ ಜೂನ್‌ 9ರಂದು ಮಾಯಕೊಂಡ ಶಾಸಕ ಎನ್‌. ಲಿಂಗಣ್ಣ, ದಾವಣಗೆರೆ ಉತ್ತರದ ಶಾಸಕ ಎಸ್‌.ಎ. ರವೀಂದ್ರನಾಥ್‌ ಅವರನ್ನು ಸಮಿತಿಯು ಭೇಟಿ ಮಾಡಿತ್ತು. ಶಾಸಕರು ಅಧಿಕಾರಿಗಳ ಜತೆ ಮಾತನಾಡಿದ್ದರು. ಮೂರು ಮೋಟರ್ ಪಂಪ್‌ಗಳಲ್ಲಿ ಎರಡು ಹಾಳಾಗಿವೆ. ಅವನ್ನು ಸರಿಪಡಿಸಿ ಒಂದು ವಾರದ ಒಳಗೆ ನೀರು ಹಾಯಿಸುವುದಾಗಿ ಅಧಿಕಾರಿಗಳು ಆಗ ಭರವಸೆ ನೀಡಿದ್ದರು. ಆದರೆ ನೀರು ಹಾಯಿಸಿಲ್ಲ. ಇವತ್ತು ಮತ್ತದೇ ಕತೆ ಹೇಳುತ್ತಿದ್ದಾರೆ ಎಂದು ಏತ ನೀರಾವರಿ ಹೋರಾಟ ಸಮಿತಿ ಕಾರ್ಯದರ್ಶಿ ಚಂದ್ರನಾಯ್ಕ ಹಾಲೆಕಲ್ಲು ಆರೋಪಿಸಿದರು.

ಹೆಬ್ಬಾಳು, ಹಾಲವರ್ತಿ, ಹಾಲೇಕಲ್ಲು, ಬಿಳಿಚೋಡು, ನರಗನಹಳ್ಳಿ, ತುಪ್ಪದಹಳ್ಳಿ, ಕಬ್ಬೂರು ಕೆರೆಗಳಿಗೆ ನೀರೇ ಬಂದಿಲ್ಲ. ದೊಡ್ಡರಂಗವ್ವನಹಳ್ಳಿ, ಐಗೂರು, ಕೊಡಗನೂರು ಸೇರಿ ನಾಲ್ಕೈದು ಕೆರೆಗಳಿಗೆ ಶೇ 15ರಷ್ಟು ಮಾತ್ರ ನೀರು ಹರಿದಿದೆ. ಆರೇಳು ಕೆರೆಗಳಿಗೆ ಶೇ 40ರಷ್ಟು ಮತ್ತು ಉಳಿದ ಕೆರೆಗಳಿಗೆ ಶೇ 70ರಷ್ಟು ನೀರು ಬಂದಿದೆ. ಆದರೆ ಎಲ್ಲ ಕೆರೆಗಳಿಗೂ ನೀರು ಹರಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ ಎಂದರು.

ADVERTISEMENT

ಶಾಸಕ ಎನ್‌. ಲಿಂಗಣ್ಣ ಮಾತನಾಡಿ, ‘ಮಳೆ ಬಂದಿದೆ. ನೀರು ಹರಿದು ಹೋಗುತ್ತಿದೆ. ಅದನ್ನು ಕೆರೆಗಳಿಗೆ ತುಂಬಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದೆ. ಅವರು ವಾರದಲ್ಲಿ ನೀರು ತುಂಬಿಸುವ ಭರವಸೆ ನೀಡಿದ್ದರು. ಮಾತಿಗೆ ತಪ್ಪಿದರೆ ರೈತರು ಗಲಾಟೆ ಮಾಡುತ್ತಾರೆ ಎಂದು ಎಚ್ಚರಿಕೆ ನೀಡಿದ್ದೆ. ಆದರೆ ನೀರಾವರಿ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರು. ಹಾಗಾಗಿ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

ಇಂದಿನಿಂದ ನೀರು ಹಾಯಿಸುವ ಭರವಸೆ: ಇರುವ ಒಂದು ಪಂಪ್‌ ಮೂಲಕ ಜೂನ್‌ 19ರಿಂದಲೇ ನೀರು ಹಾಯಿಸುವುದು, ರಿಪೇರಿಗಾಗಿ ಕೊಲ್ಲಾಪುರಕ್ಕೆ ಕಳುಹಿಸಿರುವ ಪಂಪ್‌ ತರಿಸಿ ಜೂನ್‌ 23ರಿಂದ ಅದನ್ನೂ ಚಾಲನೆ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು.

ಏತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಡಾ. ಜಿ. ಮಂಜುನಾಥ ಗೌಡ, ಜಗಳೂರು ಶಾಸಕ ಎಸ್‌.ವಿ. ರಾಮಚಂದ್ರ, ಸಮಿತಿಯ ಕೊಟ್ರೇಶ್‌ ನಾಯ್ಕ, ಶಿವಕುಮಾರ್‌ ಮಾಸ್ತರ್‌, ಸ್ವಾಮಿ ನೇರ್ಲಿಗೆ, ಬಾಬು ಗೌಡ ಹೆಬ್ಬಾಳು, ಆನಗೋಡು ತಿಪ್ಪಣ್ಣ, ಮಲ್ಲಣ್ಣ, ವಸಂತ, ಬಸವರಾಹ್‌, ನಾಗರಾಜ್‌, ಪಾಂಡುರಂಗ, ರವಿಕುಮಾರ್‌, ಶಾಂತನಗೌಡ ಸಿದ್ದನೂರು, ರೈತರು ಭಾಗವಹಿಸಿದ್ದರು.

ನೀರು ಹರಿಸದಿದ್ದರೂ ನಿರಾಕ್ಷೇಪಣಾ ಪತ್ರ

ಪ್ರತಿಭಟನೆಯ ಸಂದರ್ಭದಲ್ಲಿ ಹೋರಾಟ ಸಮಿತಿಯವರು ನೀರಾವರಿ ಇಲಾಖೆಯ ಮೇಲಧಿಕಾರಿಗೆ ಕರೆ ಮಾಡಿ ಸಮಸ್ಯೆ ತಿಳಿಸಿದರು. 22 ಕೆರೆಗಳಿಗೆ ಸಮರ್ಪಕವಾಗಿ ನೀರು ಹರಿಯುತ್ತಿರುವುದಾಗಿ ಜಿಲ್ಲಾಮಟ್ಟದ ಅಧಿಕಾರಿಗಳು ವರದಿ ನೀಡಿರುವುದರಿಂದ ಗುತ್ತಿಗೆದಾರರಿಗೆ ಕಾಮಗಾರಿ ವೆಚ್ಚ ನೀಡಲು ನಿರಾಕ್ಷೇಪಣಾ ಪತ್ರ ನೀಡಿರುವುದಾಗಿ ಮೇಲಧಿಕಾರಿ ತಿಳಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಪ್ರತಿಭಟನಾಕಾರರು ‘ನೀರು ಹರಿಯುವ ಮೊದಲೇ ಹೇಗೆ ವರದಿ ನೀಡಿದ್ದೀರಿ? ಲಂಚ ಪಡೆದು ಇಂಥ ಕೆಲಸ ಮಾಡಿದ್ದೀರಿ’ ಎಂದು ಪ್ರಭಾರ ಎಕ್ಸಿಕ್ಯುಟಿವ್ ಎಂಜಿನಿಯರ್‌ ಕೊಟ್ರೇಶ್‌ ಅವರನ್ನು ತರಾಟೆಗೆ ತೆಗೆದುಕೊಂಡರು.

23ಕ್ಕೆ ಸಿರಿಗೆರೆ ಸ್ವಾಮೀಜಿ ನೇತೃತ್ವದಲ್ಲಿ ಸಭೆ

ಒಬ್ಬರು ಇನ್ನೊಬ್ಬರ ಮೇಲೆ ಆರೋಪ ಮಾಡುವುದನ್ನು ಬಿಟ್ಟು, ಎಲ್ಲರೂ ಒಟ್ಟಿಗೆ ಕುಳಿತು ಸಮಸ್ಯೆ ಪರಿಹರಿಸಬೇಕು. ಅದಕ್ಕಾಗಿ ಜೂನ್‌ 23ರಂದು ಸಿರಿಗೆರೆ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಸಂಸದರು, ಮಾಯಕೊಂಡ ಮತ್ತು ಜಗಳೂರು ಶಾಸಕರ ಉಪಸ್ಥಿತಿಯಲ್ಲಿ ಅಧಿಕಾರಿಗಳು, ಗುತ್ತಿಗೆದಾರರು, ರೈತರ ಸಭೆ ನಡೆಸಲು ನಿರ್ಧರಿಸಲಾಗಿದೆ. ನೀರಾವರಿ ಇಲಾಖೆಯ ಮುಖ್ಯ ಎಂಜಿನಿಯರ್‌, ಗುತ್ತಿಗೆ ಪಡೆದಿರುವ ಎಲ್‌ ಆ್ಯಂಡ್‌ ಟಿ ಕಂಪನಿಯವರು ಆ ಸಭೆಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಚಂದ್ರನಾಯ್ಕ ಹಾಲೇಕಲ್‌ ತಿಳಿಸಿದ್ದಾರೆ.

‘ಎಲ್ಲ ಕೆರೆಗಳಿಗೆ ನೀರು ಹರಿಸಲಾಗಿದೆ. ಆದರೆ ಆನಗೋಡು ಮತ್ತಿತರ ಪ್ರದೇಶಗಳಲ್ಲಿ ರೈತರೇ ಪೈಪ್‌ ಒಡೆದು ಹಾಕಿದ್ದರಿಂದ ನೀರು ಸರಾಗವಾಗಿ ಹರಿದಿಲ್ಲ. ಅದನ್ನು ಸರಿ ಮಾಡಿದ್ದೇವೆ. ಈಗ ಪಂಪ್‌ ಕೆಟ್ಟಿದೆ. ಒಂದು ವಾರದಲ್ಲಿ ಸರಿಪಡಿಸಿ ನೀರು ಹರಿಸಲಾಗುವುದು’ ಎಂದು ಕೊಟ್ರೇಶ್‌ ಭರವಸೆ ನೀಡಿದರು.

ಹಳೇ ಗುತ್ತಿಗೆದಾರರೇ ಸರಿಪಡಿಸಲಿದ್ದಾರೆ

ಹಳೇ ಗುತ್ತಿಗೆದಾರರ ನಿರ್ವಹಣಾ ಸಮಯದ ಅವಧಿ ಮುಗಿದಿದೆ. ನಿರ್ವಹಣೆಗೆ ಟೆಂಡರ್ ಕರೆಯಲು 9 ತಿಂಗಳ ಹಿಂದೆಯೇ ಪ್ರಸ್ತಾವ ಸಲ್ಲಿಸಲಾಗಿತ್ತು. ಅದಕ್ಕಿನ್ನೂ ಒಪ್ಪಿಗೆ ಸಿಕ್ಕಿಲ್ಲ. ಇದರಿಂದ ನಿರ್ವಹಣಾ ವೆಚ್ಚವೂ ಬರುತ್ತಿಲ್ಲ. ವಿದ್ಯುತ್‌ ಬಿಲ್‌ ಕೂಡ ₹ 5 ಕೋಟಿಯಷ್ಟು ಬಾಕಿ ಇದೆ. ಎಂ.ಡಿ. ಕಚೇರಿಯಲ್ಲಿ ಈ ಕಡತ ಇದ್ದು, ಎಂ.ಡಿ. ಸಹಿ ಆಗಬೇಕು ಎಂದು ಪ್ರಭಾರ ಎಕ್ಸಿಕ್ಯುಟಿವ್‌ ಎಂಜಿನಿಯರ್‌ ಕೊಟ್ರೇಶ್‌ ಮತ್ತು ಸಹಾಯಕ ಎಂಜಿನಿಯರ್‌ ಜಿ.ಪಿ. ವಿಕಾಸ್‌ ತಿಳಿಸಿದರು.

ಹಳೇ ಗುತ್ತಿಗೆದಾರರಾದ ಎಲ್‌ ಆ್ಯಂಡ್‌ ಟಿ ಕಂಪನಿಯವರ ಜತೆಗೆ  ಮಾತನಾಡಿ ಮುಂದಿನ ಟೆಂಡರ್‌ ಆಗುವವರೆಗೆ ನಿರ್ವಹಣೆ ಮಾಡುವಂತೆ ಮನವಿ ಮಾಡಲಾಯಿತು. ಅದಕ್ಕೆ ಅವರೂ ಒಪ್ಪಿಕೊಂಡಿದ್ದಾರೆ ಎಂದು ಕೊಟ್ರೇಶ್‌ ತಿಳಿಸಿದರು.

22 ಕೆರೆಗಳು

ಜೂನ್‌ನಲ್ಲಿ ಉತ್ತಮ ಮಳೆಯಾಗಿದ್ದು, ನೀರು ಸಮರ್ಪಕವಾಗಿ ಹರಿದರೆ ಹೊನ್ನೂರು, ಕೊಗ್ಗನೂರು, ಸಿದ್ದನೂರು, ಆನಗೋಡು, ಹಾಲವರ್ತಿ, ಹೆಬ್ಬಾಳು, ಕಂದನಕೋವಿ, ಅಗಸನಕಟ್ಟೆ, ಐಗೂರು, ತುಂಬಿಗೆರೆ, ಬೋರಗೊಂಡನಹಳ್ಳಿ, ಆಲೂರು, ಅಣಜಿ, ಹಾಲೇಕಲ್ಲು, ನೇರ್ಲಿಗೆ, ಸುಲ್ತಾನಿಪುರ, ಕೊಡಗನೂರು, ನರಗನಹಳ್ಳಿ, ತುಪ್ಪದಹಳ್ಳಿ, ಬಿಳಿಚೋಡು,  ಕಬ್ಬೂರು, ದೊಡ್ಡರಂಗವ್ವನಹಳ್ಳಿ ಕೆರೆಗಳು ತುಂಬಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.