ADVERTISEMENT

ನೀರಿಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2011, 10:40 IST
Last Updated 17 ಜನವರಿ 2011, 10:40 IST

ದಾವಣಗೆರೆ: ಕುಡಿಯುವ ನೀರು ಸಮರ್ಪಕ ಪೂರೈಕೆಯೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ 4ನೇ ವಾರ್ಡ್ ನಾಗರಿಕರು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ನೇತೃತ್ವದಲ್ಲಿ ಭಾನುವಾರ ಪಾಲಿಕೆ ಸದಸ್ಯ ಎನ್.ಕೆ. ಇಸ್ಮಾಯಿಲ್ ಅವರ ಮುನೆಯ ಮುಂದೆ ಪ್ರತಿಭಟನೆ ನಡೆಸಿದರು.

10 ದಿನಗಳಿಂದ ಕುಡಿಯುವ ನೀರು ಪೂರೈಸಿಲ್ಲ. ಹನಿ ನೀರಿಲ್ಲದೇ ಜನರು ಪರಿತಪಿಸುವಂತಾಗಿದೆ. ಕುಡಿಯಲು ನೀರಿಲ್ಲದೇ ಜೀವನ ಸಾಗಿಸುವುದು ಕಷ್ಟಕರವಾಗಿದೆ ಎಂದು ಖಾಲಿ ಕೊಡ ಪ್ರದರ್ಶಿಸಿ, ಆಕ್ರೋಶ ವ್ಯಕ್ತಪಡಿಸಿದರು.ಎರಡು ಅಥವಾ ಮೂರು ದಿನಕ್ಕೊಮ್ಮೆ ನೀರು ಪೂರೈಸಬೇಕು. ಶುದ್ಧ ಕುಡಿಯುವ ನೀರಿಗೆ ಆದ್ಯತೆ ನೀಡಬೇಕು. ಇಂದು ಕೂಡಲೇ ನೀರು ಪೂರೈಸುವ ಮೂಲಕ ನೀರಿನ ಸಮಸ್ಯೆಗೆ ತೆರೆ ಎಳೆಯಬೇಕು ಎಂದು ಆಗ್ರಹಿಸಿದರು.

ವಾರ್ಡ್‌ನಲ್ಲಿ ಕಸದ ಸಮರ್ಪಕ ವಿಲೇವಾರಿ ನಡೆಯದೇ ಎಲ್ಲೆಂದರಲ್ಲಿ ಕಸ ಹರಡಿದೆ. ಸ್ವಚ್ಛತೆ ಇಲ್ಲದೇ ಪರಿತಪಿಸುವಂತಾಗಿದೆ. ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಬೀದಿಗಳಲ್ಲಿ ಹಂದಿ, ಬೀದಿನಾಯಿಗಳ ಕಾಟ ಮಿತಿ ಮೀರಿದೆ. ಚರಂಡಿ ಸ್ವಚ್ಛಗೊಳಿಸಿಲ್ಲ ಎಂದು ದೂರಿದರು.

ಕಸ ವಿಲೇವಾರಿಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಚರಂಡಿಗಳಲ್ಲಿ ತುಂಬಿರುವ ಕಲ್ಮಶ ತೆಗೆಸಬೇಕು ಎಂದು ಒತ್ತಾಯಿಸಿದರು. ಸ್ಥಳಕ್ಕೆ ಆಗಮಿಸಿದ ವಾರ್ಡ್‌ನ ಪಾಲಿಕೆ ಸದಸ್ಯ ಎನ್.ಕೆ. ಇಸ್ಮಾಯಿಲ್ ಮಾತನಾಡಿ, ಶೀಘ್ರದಲ್ಲೇ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ಸ್ಥಳಕ್ಕೆ ನೀರಗಂಟಿಯನ್ನು ಕರೆಸಿ, ನೀರು ಪೂರೈಕೆಗೆ ಸೂಚಿಸಿದರು.

ಕರವೇ ಜಿಲ್ಲಾ ಅಧ್ಯಕ್ಷ ಕೆ.ಜಿ. ಯಲ್ಲಪ್ಪ, ಸೈಯದ್ ನೌಷದ್, ಬಿ.ವಿ. ತಿಪ್ಪೇಸ್ವಾಮಿ, ಅಂಜದ್ ಆಲಿ, ನೂರ್ ಆಹಮದ್, ಸಲೀಂ ಖಾನ್, ರುದ್ರೇಶ್, ಸಿಕಂದರ್, ದಾದಾಪೀರ್, ಡಿ.ಎಲ್. ಜಯರಾಜ ನಾಯ್ಕಾ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.