ADVERTISEMENT

ನೀರು ಪೂರೈಕೆ, ಸ್ವಚ್ಛತೆ ಅಸ್ತವ್ಯಸ್ತ

ಎಸ್‌ಎಸ್‌ಎಂಗೆ ಸೋಲು; ಕಾಂಗ್ರೆಸ್ ಸದಸ್ಯರು ನಿಷ್ಕ್ರಿಯ: ಬಿಜೆಪಿ

​ಪ್ರಜಾವಾಣಿ ವಾರ್ತೆ
Published 15 ಜೂನ್ 2018, 11:35 IST
Last Updated 15 ಜೂನ್ 2018, 11:35 IST

ದಾವಣಗೆರೆ: ಎಸ್‌.ಎಸ್‌. ಮಲ್ಲಿಕಾರ್ಜುನ ಸೋಲನುಭವಿಸಿದ ನಂತರ ಪಾಲಿಕೆಯ ಕಾಂಗ್ರೆಸ್‌ ಸದಸ್ಯರು ನಿಷ್ಕ್ರಿಯರಾಗಿದ್ದು, ನಗರದ ನೀರು ಸರಬರಾಜು ಮತ್ತು ಸ್ವಚ್ಛತೆ ವ್ಯವಸ್ಥೆ ಅಸ್ತವ್ಯಸ್ತವಾಗಿದೆ ಎಂದು ಬಿಜೆಪಿ ಉತ್ತರ ವಿಧಾನಸಭಾ ಕ್ಷೇತ್ರ ಘಟಕದ ಅಧ್ಯಕ್ಷ ಮುಕುಂದಪ್ಪ ಆರೋಪಿಸಿದರು.

ನೀರು ಸರಬರಾಜು ಮಾಡುವಂತೆ, ಸ್ವಚ್ಛತಾ ಕಾರ್ಯ ನಡೆಸುವಂತೆ ನಾಗರಿಕರು ಕೇಳಿದರೆ, ‘ನೀವೆಲ್ಲಾ ಬಿಜೆಪಿಗೆ ಮತ ಹಾಕಿದ್ದೀರಿ. ಬಿಜೆಪಿ ಶಾಸಕರನ್ನೇ ಕೇಳಿ, ನೀರು ಬಿಡಿಸಿಕೊಳ್ಳಿ’ ಎಂದು ಪಾಲಿಕೆ ಸದಸ್ಯರು ಉಡಾಫೆಯ ಉತ್ತರ ನೀಡುತ್ತಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಜನರಿಂದ ಆಯ್ಕೆ ಆಗಿ ಬಂದಿರುವ ಕಾಂಗ್ರೆಸ್‌ ಸದಸ್ಯರು ಜನಸೇವೆ ಮಾಡಲಿ. ಕೆಲಸ ಮಾಡಲು ಆಗದಿದ್ದರೆ ರಾಜೀನಾಮೆ ನೀಡಲಿ. ಹೀಗೆ, ಪ್ರತಿಕಾರದ ಮನೋಭಾವದಿಂದ ಜನರಿಗೆ ತೊಂದರೆ ನೀಡಬಾರದು. ಸದಸ್ಯರು, ಅಧಿಕಾರಿಗಳು ಮೂಲಸೌಕರ್ಯ ಒದಗಿಸಲು ಕ್ರಮ
ಕೈಗೊಳ್ಳದಿದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ADVERTISEMENT

‘ರಾಜೀನಾಮೆ ನೀಡುವ ನಾಟಕವಾಡುತ್ತಿರುವ ಪಾಲಿಕೆ ಸದಸ್ಯರು, ನಗರವನ್ನು ಅನಾಥ ಮಾಡಿದ್ದಾರೆ. ಪಾಲಿಕೆ ನಿಷ್ಕ್ರಿಯವಾಗಿದ್ದು, ಜನರು ತೊಂದರೆ ಅನುಭವಿಸುವಂತಾಗಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಚ್‌.ಎನ್‌. ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ಪಾಲಿಕೆಯ ಬಿಜೆಪಿ ಸದಸ್ಯ ಡಿ.ಕೆ. ಕುಮಾರ್, ‘ರಾಜೀನಾಮೆ ನೀಡಲು ಅರ್ಧ ಗಂಟೆ ಸಾಕು. ಆದರೆ, ಮೂರು ದಿನಗಳಿಂದ ಬೆಂಗಳೂರಿನಲ್ಲಿ ಬೀಡು ಬಿಟ್ಟಿರುವ ಪಾಲಿಕೆ ಕಾಂಗ್ರೆಸ್‌ ಸದಸ್ಯರು, ಕೆಪಿಸಿಸಿ ಅಧ್ಯಕ್ಷರಿಗೆ ರಾಜೀನಾಮೆ ನೀಡಿರುವುದೇ ನಾಟಕ. ಅವರು ಹೋಗಿರುವುದು ರಾಜೀನಾಮೆ ಕೊಡುವುದಕ್ಕಲ್ಲ; ಪ್ರವಾಸ ಮಾಡಲಿಕ್ಕೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.