ನ್ಯಾಮತಿ: ಸಸಿ ನೆಡುವ ವಿಚಾರಕ್ಕೆ ಸಂಬಂಧಿಸಿದಂತೆ ಬಗರ್‌ಹುಕುಂ ಸಾಗುವಳಿದಾರರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಮಾತಿನ ಚಕಮಕಿ ಹಾಗೂ ಘರ್ಷಣೆಯಾದ ಘಟನೆ ಸಮೀಪದ ಹಳೇಜೋಗ ಗ್ರಾಮದಲ್ಲಿ ಭಾನುವಾರ ನಡೆದಿದೆ. ಈ ಸಂಬಂಧ, ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ.
ಘಟನೆಯ ವಿವರ: ಹಳೇಜೋಗದ ಸರ್ವೇ ನಂ. 113ರಲ್ಲಿ ಅರಣ್ಯ ಇಲಾಖೆಗೆ ಸೇರಿದ ಭೂಮಿಯಲ್ಲಿ ಪರಿಶಿಷ್ಟ ಜಾತಿಯ ಸುಮಾರು 50-60 ಮಂದಿ 15 ವರ್ಷದಿಂದ ಸಾಗುವಳಿ ಮಾಡುತ್ತಿದ್ದಾರೆ. ಅರಣ್ಯ ಇಲಾಖೆ ಈ ಭೂಮಿಯಲ್ಲಿ ಸಸಿ ನಡೆಲು ಮುಂದಾಗಿದೆ. ಈ ವೇಳೆ ಬಗರ್‌ಹುಕುಂ ಸಾಗುವಳಿದಾರರು ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾಘವೇಂದ್ರ, ರೇಂಜ್ ಫಾರೆಸ್ಟರ್ ದೇವರಾಜ್ ಅವರ ನಡುವೆ ಮಾತಿನ ಚಕಮಕಿ ನಡೆದಿದೆ.
ಯಾವುದೇ ಕಾರಣಕ್ಕೂ ಈ ಜಾಗದಲ್ಲಿ ಸಸಿ ನೆಡಲು ಅವಕಾಶ ನೀಡುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ. ಈ ಸಂದರ್ಭದಲ್ಲಿ ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಇದರಿಂದ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿತ್ತು.
ಘರ್ಷಣೆ ನಡೆದ ಸಂದರ್ಭದಲ್ಲಿ ಸಾಗುವಳಿ ರೈತರಿಗೂ ಮತ್ತು ಪೊಲೀಸರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ದಾಖಲಾಗಿದ್ದು, ಕೆಲ ಪೊಲೀಸರು ಹೊರರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ.
ಬಂಧನ: ಅರಣ್ಯ ಇಲಾಖೆಯ ಜಾಗದಲ್ಲಿ ಕರ್ತವ್ಯ ನಿರ್ವಹಿಸಲು ಅರಣ್ಯ ಇಲಾಖೆ ಸಿಬ್ಬಂದಿಗೆ ಕೆಲವರು ಅಡ್ಡಿಪಡಿಸಿದ್ದಾರೆ. ಈ ಸಂಬಂಧ ಹಳೇಜೋಗದ ದಾಕ್ಷಾಯಣಮ್ಮ, ಮಂಜಮ್ಮ, ಸವಿತಾ, ಓಂಕಾರಪ್ಪ, ನಾಗರಾಜ್, ಶಿವಾನಂದ, ಶೇಖರಪ್ಪ, ಸೋಮಪ್ಪ ಹಾಗೂ ರಾಜಪ್ಪ ಎನ್ನುವವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ. ಚವಾಣ್ `ಪ್ರಜಾವಾಣಿ~ ಗೆ ತಿಳಿಸಿದರು.
ಖಂಡನೆ: ಬಗರ್‌ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸದಂತೆ ಅರಣ್ಯ ಇಲಾಖೆಯ ಜತೆ, ಮಾತುಕತೆ ನಡೆಸಲು ದಸಂಸ ಮುಖಂಡರಾದ ಮಂಜಪ್ಪ ಮಾರಿಕೊಪ್ಪ, ಸುರಹೊನ್ನೆ ಮಂಜುನಾಥ್, `ಅಹಿಂದ~ ಮುಖಂಡರಾದ ಎಂ. ಸಿದ್ದಪ್ಪ, ಎಂ. ರಮೇಶ್, ದಸಂಸ (ಅಂಬೇಡ್ಕರ್ ವಾದ) ಜಿಲ್ಲಾ ಸಂಚಾಲಕ ಎ.ಡಿ. ಯಶವಂತ್ ಪ್ರಯತ್ನಿಸುತ್ತಿದ್ದರು. ಹೀಗಿರುವಾಗಲೇ, ದಲಿತರ ಮೇಲೆ ಲಾಠಿ ಪ್ರಹಾರ ನಡೆಸಿರುವುದು ಖಂಡನೀಯ ಎಂದು ಮುಖಂಡ ಸುರಹೊನ್ನೆ ಮಂಜುನಾಥ್ ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.