ಜಗಳೂರು: ಬೆಲೆ ಕುಸಿತ, ಬೆಳೆ ಹಾನಿ ಮುಂತಾದ ಕಾರಣಗಳಿಂದಾಗಿ ಹೈರಾಣಾಗಿರುವ ಅತ್ಯಂತ ಹಿಂದುಳಿದ ತಾಲ್ಲೂಕಿನ ರೈತರು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇರುವ, ಕೈತುಂಬಾ ಹಣ ತರುವ ಪಪ್ಪಾಯಿ ಬೆಳೆಯತ್ತ ಆಕರ್ಷಿತರಾಗುತ್ತಿದ್ದಾರೆ.
ಯಾವುದೇ ನದಿ ಅಥವಾ ಜಲಾಶಯ ಮೂಲಗಳ ಸೌಲಭ್ಯ ಇಲ್ಲದೆ ಕೇವಲ ಅಂತರ್ಜಲವನ್ನು ಬಳಸಿಕೊಂಡು ತಾಲ್ಲೂಕಿನ ಹಲವೆಡೆ ನೀರಾವರಿಯ ಮೂಲಕ ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಇತರೆ ಬೆಳೆಗಳಿಗೆ ಹೋಲಿಸಿದರೆ ದುಬಾರಿ ಬೆಲೆಯ ಕೀಟನಾಶಕ, ಹೆಚ್ಚಿನ ನಿರ್ವಹಣೆಯ ಸಮಸ್ಯೆ ಇಲ್ಲದ ಪಪ್ಪಾಯಿ ಬೆಳೆಯುವ ಮೂಲಕ ಹಲವು ರೈತರು ಲಕಾಂ್ಷತರ ರೂ ಲಾಭ ಗಳಿಸುತ್ತಾ ಕೃಷಿಯಲ್ಲಿ ನೆಮ್ಮದಿಯನ್ನು ಕಾಣತೊಡಗಿದ್ದಾರೆ.
ತೈವಾನ್ ಮೂಲದ ಸುಧಾರಿತ ರೆಡ್‌ಲೇಡಿ ತಳಿಯಿಂದ ರೈತರು ಸಾಕಷ್ಟು ಸ್ಪೂರ್ತಿಗೊಂಡಿದ್ದಾರೆ. ತಾಲ್ಲೂಕಿನ ನೂರಾರು ಎಕರೆ ಪ್ರದೇಶದಲ್ಲಿ ಪ್ರಸ್ತುತ ಪಪ್ಪಾಯಿ ಬೆಳೆಯಲಾಗಿದೆ. 9 ತಿಂಗಳಿಗೆ ಕಟಾವಿಗೆ ಬರುವ `ರೆಡ್‌ಲೇಡಿ' ಹೆಚ್ಚು ಎತ್ತರ ಬೆಳೆಯುವುದಿಲ್ಲ, ಅಕ್ಕಪಕ್ಕ ರಂಬೆಕೊಂಬೆ ಹರಡುವುದಿಲ್ಲ. `ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು' ಎನ್ನುವಂತೆ ಸಮೃದ್ಧ ಹಣ್ಣುಗಳಿಂದ ತುಂಬಿರುತ್ತದೆ. ಗಿಡ್ಡವಾಗಿರುವುದರಿಂದ ಕಟಾವಿಗೂ ಅನುಕೂಲವಾಗುತ್ತದೆ. ಕಡಿಮೆ ಪ್ರದೇಶದಲ್ಲಿ ಹೆಚ್ಚು ಗಿಡಗಳನ್ನು ನಾಟಿ ಮಾಡಬಹುದಾಗಿದೆ.
ದೇಶದ ಪ್ರಮುಖ ಮಾರುಕಟ್ಟೆಗಳಾದ ದೆಹಲಿ ಮತ್ತು ಮುಂಬೈನಲ್ಲಿ ಈ ತಳಿಯ ಪಪ್ಪಾಯಿಗೆ ಭಾರಿ ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ಮುಂಬೈನಿಂದ ಖರೀದಿದಾರರೇ ನೇರವಾಗಿ ತೋಟಗಳಿಗೆ ಬಂದು ಹಣ್ಣು ಖರೀದಿಸುತ್ತಾರೆ.
` ನಾಲ್ಕು ಎಕರೆಯಲ್ಲಿ ಪಪ್ಪಾಯಿ ಬೆಳೆದಿದ್ದೇನೆ. ಇದುವರೆಗೆ 4 ಬಾರಿ ಕಟಾವು ಮಾಡಿದ್ದು, ರೂ3ಲಕ್ಷ ಆದಾಯ ಬಂದಿದೆ. ರೂ2ಲಕ್ಷ ಖರ್ಚಾಗಿದೆ. ಇನ್ನೂ 5 ಹಂತದಲ್ಲಿ ಕಟಾವು ಮಾಡಲಿದ್ದು ಕನಿಷ್ಟ ನಾಲ್ಕೈದು ಲಕ್ಷ ರೂ ಲಾಭ ಬರುವ ನಿರೀಕ್ಷೆ ಇದೆ. ತೋಟಗಾರಿಕಾ ಇಲಾಖೆಯಿಂದ ಸಸಿ ಮತ್ತು ಹನಿ ನೀರಾವರಿ ಉಪಕರಣ ಖರೀದಿಗಾಗಿ ್ಙ 1ಲಕ್ಷ ಸಹಾಯಧನ ಸಿಕ್ಕಿದ್ದು ಸಾಕಷ್ಟು ಅನುಕೂಲವಾಗಿದೆ' ಎಂದು ಸ್ನಾತಕೋತ್ತರ ಪದವಿ ಪಡೆದು ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ತಾಲ್ಲೂಕಿನ ಹೊಸಕೆರೆ ಗ್ರಾಮದ ಯುವರೈತ ಜೆ.ಎಂ. ವಸಂತ್ `ಪ್ರಜಾವಾಣಿ'ಯೊಂದಿಗೆ ತಮ್ಮ ಅನುಭವ ಹಂಚಿಕೊಂಡರು.
1 ಟನ್ ಪಪ್ಪಾಯಿಗೆ ್ಙ 12 ಸಾವಿರ ಬೆಲೆ ಇದ್ದು, ಈಚೆಗೆ ಮಳೆಗಾಲದ ಕಾರಣ ಬೆಲೆಯಲ್ಲಿ ಸ್ವಲ್ಪ ಏರಿಳಿತ ವಾಗುತ್ತಿದೆ. ಆದರೆ ತೀರಾ ಕನಿಷ್ಟ ಬೆಲೆಗೆ ಕುಸಿಯುವ ಅಪಾಯ ಇಲ್ಲ. ಖರೀದಿದಾರರು ತೋಟಕ್ಕೆ ಬಂದು ಖರೀದಿಸುವುದರಿಂದ ಮಾರುಕಟ್ಟೆಯ ಆತಂಕ ಇಲ್ಲ. ಒಮ್ಮೆ ಗಿಡಗಳನ್ನು ನಾಟಿ ಮಾಡಿದರೆ 9ರಿಂದ 10 ಬಾರಿ ಹಣ್ಣುಗಳನ್ನು ಕಟಾವು ಮಾಡಿಕೊಳ್ಳಬಹುದು ಎಂದು ಅವರು ಹೇಳುತ್ತಾರೆ.
ಸಮಗ್ರ ತೋಟಗಾರಿಕಾ ಯೋಜನೆ (ಸಿಎಚ್‌ಡಿ) 1 ಹೆಕ್ಟೇರ್ ಪಪ್ಪಾಯಿ ಬೆಳೆಗೆ ರೂ1.10 ಲಕ್ಷದವರೆಗೆ ಸಹಯಧನ ನೀಡಲಾಗುತ್ತದೆ. ಪ್ರಾರಂಭದಲ್ಲಿ ರೋಗಮುಕ್ತ ಗಿಡಗಳನ್ನು ನಾಟಿ ಮಾಡುವ ಬಗ್ಗೆ ರೈತರು ಜಾಗ್ರತೆ ವಹಿಸಬೇಕು. ಮಧ್ಯೆ ಉಂಗುರಚುಕ್ಕೆ ನಂಜುರೋಗ ಬಾಧೆ ಕಾಣಿಸಿಕೊಂಡಾಗ ಸೂಚಿತ ಕೀಟನಾಶಕಗಳನ್ನು ಬಳಸಿದಲ್ಲಿ ಉತ್ತಮ ಬೆಳೆ ಬರುತ್ತದೆ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿಗಳಾದ ಶಶಿಧರ ಸ್ವಾಮಿ ಹಾಗೂ ಕಿರಣ್‌ಕುಮಾರ್ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.