ADVERTISEMENT

ಪರ–ವಿರೋಧದ ನಡುವೆ ಇಂದು ಬಂದ್‌

ರೈತರ ಸಾಲ ಮನ್ನಾಕ್ಕೆ ಬಿಜೆಪಿ ಒತ್ತಾಯ; ಕಾಲಾವಕಾಶಕ್ಕೆ ಜೆಡಿಎಸ್‌– ಕಾಂಗ್ರೆಸ್‌ ಮನವಿ

​ಪ್ರಜಾವಾಣಿ ವಾರ್ತೆ
Published 28 ಮೇ 2018, 6:39 IST
Last Updated 28 ಮೇ 2018, 6:39 IST

ದಾವಣಗೆರೆ: ರೈತರ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ಸೋಮವಾರ ಬಿಜೆಪಿ ಕರೆ ನೀಡಿರುವ ‘ಕರ್ನಾಟಕ ಬಂದ್‌’ಗೆ ಪರ– ವಿರೋಧ ವ್ಯಕ್ತವಾಗಿದೆ.

ಸಂಕಷ್ಟದಲ್ಲಿರುವ ರೈತರ ಸಮಸ್ಯೆ ಪರಿಹರಿಸಲು ಬಂದ್‌ಗೆ ಬೆಂಬಲ ನೀಡುವಂತೆ ಬಿಜೆಪಿ ಕರೆ ನೀಡಿದ್ದರೆ, ಬಂದ್‌ಗೆ ಬೆಂಬಲ ನೀಡದಂತೆ ಕಾಂಗ್ರೆಸ್‌– ಜೆಡಿಎಸ್‌ ಮನವಿ ಮಾಡಿದೆ. ಇನ್ನೊಂದೆಡೆ ರೈತ ಸಂಘಟನೆಗಳು ನೇರವಾಗಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿಲ್ಲ.

ಬಿಜೆಪಿ ಪ್ರತಿಭಟನೆ ನಡೆಸಲಿರುವುದರಿಂದ ಬಸ್‌ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

ADVERTISEMENT

ಕಾಂಗ್ರೆಸ್ ಮನವಿ: ಬಿಜೆಪಿ ಕರೆ ನೀಡಿದಿರುವ ಕರ್ನಾಟಕ ಬಂದ್‌ಗೆ ಜಿಲ್ಲೆಯ ಜನ ಸ್ಪಂದಿಸಬಾರದು ಎಂದು ಕಾಂಗ್ರೆಸ್‌ ಮನವಿ ಮಾಡಿದೆ.

ರೈತರ ಹೆಸರಿನಲ್ಲಿ ಬಿಜೆಪಿ ಕರೆದಿರುವ ಬಂದ್‍ ಅರ್ಥಹೀನ. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿರುವ ರೈತರ ಸಾಲವನ್ನು ಮೊದಲು ಮನ್ನಾ ಮಾಡಲಿ ಎಂದು ಆಗ್ರಹಿಸಿದೆ.

ಬಂದ್‌ನಿಂದಾಗಿ ದಾವಣಗೆರೆಯ ವ್ಯವಹಾರದಲ್ಲಿ ನಷ್ಟ ಉಂಟಾಗುವ ಸಾಧ್ಯತೆ ಇದ್ದು, ಈ ನಷ್ಟವನ್ನು ಬಿಜೆಪಿ ಮುಖಂಡರಿಂದ ವಸೂಲಿ ಮಾಡಬೇಕು ಎಂದು ಒತ್ತಾಯಿಸಿದೆ.

ದಾವಣಗೆರೆಯಲ್ಲಿ ಈ ಹಿಂದೆ ಕೋಮುಗಲಭೆ ನಡೆದಾಗ ಇಲ್ಲಿನ ವ್ಯವಹಾರ–ವಹಿವಾಟು ಚಿತ್ರದುರ್ಗ, ರಾಣೆಬೆನ್ನೂರಿನ ಪಾಲಾಗಿತ್ತು. ಈಚೆಗೆ ದಾವಣಗೆರೆ ಸಾಕಷ್ಟು ಅಭಿವೃದ್ಧಿಯಾಗಿದ್ದು, ವ್ಯಾಪಾರ ವಹಿವಾಟುಗಳು ವೃದ್ಧಿಯಾಗುತ್ತಿವೆ. ಈಗ ಬಂದ್‌ಗಳು ಆರಂಭವಾದರೆ ದಾವಣಗೆರೆಗೆ ಮೊದಲಿನ ಸ್ಥಿತಿ ಬಂದೊದಗುವ ಅಪಾಯವಿದೆ ಎಂದು ಕಾಂಗ್ರೆಸ್‌ ಆತಂಕ ವ್ಯಕ್ತಪಡಿಸಿದೆ.

ಹರಪನಹಳ್ಳಿ ವರದಿ

ಪ್ರಣಾಳಿಕೆಯಲ್ಲಿ ರೈತರ ಸಾಲಮನ್ನಾ ಮಾಡುವುದಾಗಿ ಘೋಷಿಸಿ ಹಿಂದೇಟು ಹಾಕುತ್ತಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಡೆ ಖಂಡಿಸಿ ಬಿಜೆಪಿ ರಾಜ್ಯ ಘಟಕ ಕರೆ ನೀಡಿರುವ ಕರ್ನಾಟಕ ಬಂದ್ ಬೆಂಬಲಿಸಿ ಮೇ 28ರಂದು ಹರಪನಹಳ್ಳಿ ಬಂದ್ ಆಚರಿಸಲಾಗುತ್ತಿದೆ ಎಂದು ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಕೆ.ಲಕ್ಷ್ಮಣ ತಿಳಿಸಿದ್ದಾರೆ.

ಸೋಮವಾರ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಬಿಜೆಪಿಯು ವಿವಿಧ ಸಂಘಟನೆಗಳ ಜೊತೆಗೂಡಿ ಹರಪನಹಳ್ಳಿ ಬಂದ್ ಕರೆ ನೀಡಿದೆ. ತಾಲ್ಲೂಕಿನ ಎಲ್ಲ ಸಂಘಟನೆಗಳು, ರೈತರು, ವರ್ತಕರು, ಆಟೊ ಚಾಲಕರು, ಕಾರ್ಮಿಕರು, ನಾಗರಿಕರು ಹಾಗೂ ಬಿಜೆಪಿ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬಂದ್ ಯಶಸ್ವಿಗೊಳಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಹರಿಹರ ವರದಿ

ನೂತನ ಮುಖ್ಯಮಂತ್ರಿ ಎಚ್‍.ಡಿ. ಕುಮಾರಸ್ವಾಮಿ ರೈತರ ಸಾಲಮನ್ನಾ ಮಾಡದ ಹಿನ್ನೆಲೆಯಲ್ಲಿ ಮೇ 28ರಂದು ರಾಜ್ಯದ ವರಿಷ್ಠರ ಆದೇಶದ ಮೇರೆಗೆ ತಾಲ್ಲೂಕು ಬಿಜೆಪಿ ಘಟಕ ನಗರದಲ್ಲಿ ಬಂದ್‍ಗೆ ಕರೆ ನೀಡಿದೆ.

ರೈತರ ಹಿತರಕ್ಷಣೆಗಾಗಿ ಪಕ್ಷ ನೀಡಿರುವ ಬಂದ್‍ ಕರೆಗೆ ರೈತರು, ವ್ಯಾಪಾರಸ್ಥರು, ವರ್ತಕರು ಹಾಗೂ ಎಲ್ಲಾ ಸಂಘ ಸಂಸ್ಥೆಗಳು ಸ್ವಇಚ್ಚೆಯಿಂದ ಬಂದ್‍ಗೆ ಕೈ ಜೋಡಿಸಿ, ರೈತರಿಗೆ ಬೆಂಬಲ ನೀಡಬೇಕು ಎಂದು ಪಕ್ಷದ ಕಾರ್ಯದರ್ಶಿ ತುಳಜಪ್ಪ ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಜಗಳೂರು ವರದಿ

ರೈತರ ಸಾಲ ಮನ್ನಾಕ್ಕೆ ಒತ್ತಾಯಿಸಿ ಬಿಜೆಪಿ ಕರೆ ನೀಡಿರುವ ರಾಜ್ಯ ಬಂದ್‌ ಹಿನ್ನೆಲೆಯಲ್ಲಿ ಪಟ್ಟಣದಲ್ಲೂ ಸೋಮವಾರ ಬಂದ್‌ ಆಚರಿಸಲಾಗುವುದು ಎಂದು ಶಾಸಕ ಎಸ್‌.ವಿ. ರಾಮಚಂದ್ರ ಹೇಳಿದರು.

ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಸಾಲ ಮನ್ನಾ ಮಾಡುವುದಾಗಿ ನುಡಿದಂತೆ ಕ್ರಮ ಕೈಗೊಳ್ಳಬೇಕಾಗಿತ್ತು. ಸಾಲ ಮನ್ನಾ ಮಾಡದಿದ್ದರೆ ರಾಜ್ಯದಾದ್ಯಂತ ತೀವ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸೋಮವಾರ ಬೆಳಿಗ್ಗೆಯಿಂದ ಸಂಜೆವರೆಗೂ ಪಟ್ಟಣ ಹಾಗೂ ತಾಲ್ಲೂಕಿನ ಎಲ್ಲಾ ಪ್ರದೇಶಗಳಲ್ಲಿ ಬಂದ್‌ ಆಚರಿಸಲಾಗುವುದು. ವರ್ತಕರು ಮತ್ತು ವಿವಿಧ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಶಾಸಕರು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಸ್‌.ಕೆ. ಮಂಜುನಾಥ್‌, ಶಾಂತಕುಮಾರಿ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಬಸವರಾಜ್‌, ಸಿದ್ದೇಶ್‌, ಬಿಜೆಪಿ ತಾಲ್ಲೂಕು ಅಧ್ಯಕ್ಷ ಡಿ.ವಿ. ನಾಗಪ್ಪ, ಬಿ.ಆರ್‌. ಅಂಜಿನಪ್ಪ, ಬಡಯ್ಯ, ಶ್ರೀನಿವಾಸ್‌ ಸೋಮನಹಳ್ಳಿ ಇದ್ದರು.

ರೈತ ಸಂಘದ ಬೆಂಬಲ ಇಲ್ಲ: ಬಿಜೆಪಿ ಕರೆ ನೀಡಿರುವ ಬಂದ್‌ಗೆ ರಾಜ್ಯ ರೈತ ಸಂಘ ಬೆಂಬಲ ನೀಡುವುದಿಲ್ಲ ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಅಣಬೂರು ಮಠದ ಕೊಟ್ರೇಶ್ ತಿಳಿಸಿದ್ದಾರೆ.

ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದು ಮೂರು ದಿನಗಳಾಗಿವೆ. ಸಂಪುಟ ವಿಸ್ತರಣೆಯಾಗಿಲ್ಲ. ಕಾರ್ಯಕ್ರಮಗಳನ್ನು ಘೋಷಿಸಿಲ್ಲ. ಸ್ವಲ್ಪ ಕಾಲ ಕಾದು ನೋಡಿ ನಂತರ ಮುಂದಿನ ನಿರ್ಧಾರ ಕೈಗೊಳ್ಳಲು ಸಂಘ ನಿರ್ಧರಿಸಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಬಂದ್‌ ಬೇಡ: ಕಾಲಾವಕಾಶ ಕೊಡಿ’

ರೈತರು ಹಾಗೂ ರೈತ ಸಂಘಟನೆಗಳು ಬಿಜೆಪಿ ಪ್ರೇರಿತ ಕರ್ನಾಟಕ ಬಂದ್‌ಗೆ ಬೆಂಬಲ ನೀಡಬಾರದು. ಸಾಲ ಮನ್ನಾ ಮಾಡಲು ಸರ್ಕಾರಕ್ಕೆ ಕಾಲಾವಕಾಶ ಕೊಡಬೇಕು ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಚಿದಾನಂದಪ್ಪ ಮನವಿ ಮಾಡಿದ್ದಾರೆ.

ಜೆಡಿಎಸ್‌ ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ಹಿಡಿದರೆ ರೈತರ ಎಲ್ಲಾ ಸಾಲವನ್ನು ಮನ್ನಾ ಮಾಡುವುದಾಗಿ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದು, ನಿಜ. ಆದರೆ, ಪಕ್ಷಕಕ್ಕೆ ಪೂರ್ಣ ಜನಬೆಂಬಲ ಸಿಕ್ಕಿಲ್ಲ. ಹೀಗಾಗಿ, ಸಾಲ ಮನ್ನಾ ಮಾಡಲು ಸಂಕಷ್ಟ ಎದುರಾಗಿದೆ. ಕಾಲಾವಕಾಶ ಸಿಕ್ಕರೆ ಕಾಂಗ್ರೆಸ್‌ನ ವಿಶ್ವಾಸ ಪಡೆದು ಸಾಲ ಮನ್ನಾ ಮಾಡಲಾಗುವುದು. ಇದಕ್ಕೆ ರೈತರು ಅವಕಾಶ ಮಾಡಿಕೊಡಬೇಕು ಎಂದು ಅವರು ಪ್ರಕಟಣೆಯಲ್ಲಿ ಕೇಳಿಕೊಂಡಿದ್ದಾರೆ.

ಶಾಲಾ–ಕಾಲೇಜು ರಜೆಯಿಲ್ಲ

ಜಿಲ್ಲೆಯಲ್ಲಿ ಶಾಲಾ–ಕಾಲೇಜುಗಳಿಗೆ ರಜೆ ನೀಡಲಾಗಿಲ್ಲ. ಎಲ್ಲಾ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಪ್ರಾಥಮಿಕ ಮತ್ತು ಪ್ರೌಢಾಲೆಗಳ ಪ್ರಾರಂಭೋತ್ಸವವೂ ಸೋಮವಾರ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್‌ ತಿಳಿಸಿದ್ದಾರೆ.

ಪರಿಸ್ಥಿತಿ ಆಧರಿಸಿ ನಿರ್ಧಾರ

ಕೆಎಸ್‌ಆರ್‌ಟಿಸಿ ಬಸ್‌ಗಳು ಸೋಮವಾರ ಎಂದಿನಂತೆ ರಸ್ತೆಗಿಳಿಯಲಿವೆ. ಆದರೆ, ಪರಿಸ್ಥಿತಿ ನೋಡಿಕೊಂಡು ಪೊಲೀಸರ ಸಲಹೆಯಂತೆ ಸಾರಿಗೆ ಸೇವೆಯನ್ನು ಮುಂದುವರಿಸಲು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಕೆಎಸ್‌ಆರ್‌ಟಿಸಿ ದಾವಣಗೆರೆ ವಿಭಾಗದ ನಿಯಂತ್ರಣಾಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ರೈತರಿಗಾಗಿ ಬಂದ್‌ಗೆ ಬೆಂಬಲಿಸಿ

ಮುಖ್ಯಮಂತ್ರಿ ಕುಮಾರಸ್ವಾಮಿ 24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡದೆ ನುಡಿದಂತೆ ನಡೆಯದೇ ಇರುವುದರಿಂದ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ರೈತರ ಸಂಕಷ್ಟ ಪರಿಹರಿಸಲು ಬಂದ್‌ಗೆ ಬೆಂಬಲ ನೀಡಬೇಕು ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಮನವಿ ಮಾಡಿದ್ದಾರೆ.

ಸೋಮವಾರ ಬೆಳಿಗ್ಗೆ 7 ಗಂಟೆಗೆ ಜಿಲ್ಲಾ ಬಿಜೆಪಿ ಕಚೇರಿಯಿಂದ ಕಾರ್ಯಕರ್ತರು ಮೆರವಣಿಗೆಯಲ್ಲಿ ಹೊರಟು, ನಗರದ ವಿವಿಧೆಡೆ ಸಂಚರಿಸಿ ಅಂಗಡಿ, ಹೋಟೆಲ್‌, ಶಾಲಾ– ಕಾಲೇಜುಗಳನ್ನು ತೆರೆಯದಂತೆ ಮನವಿ ಮಾಡಲಾಗುವುದು. ಅಂತೆಯೇ ಆಟೊ– ಬಸ್‌ ಸಂಚಾರವನ್ನೂ ಸ್ಥಗಿತಗೊಳಿಸುವಂತೆ ಕೋರಲಾಗುವುದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.