ADVERTISEMENT

ಪಾರದರ್ಶಕವಾಗಿ ಸಿಬ್ಬಂದಿ ನೇಮಕ ಶೀಘ್ರ

ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರಣಪ್ಪ ಹಲಸೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2018, 6:33 IST
Last Updated 19 ಜೂನ್ 2018, 6:33 IST
ಪ್ರೊ. ಶರಣಪ್ಪ ಹಲಸೆ
ಪ್ರೊ. ಶರಣಪ್ಪ ಹಲಸೆ   

ದಾವಣಗೆರೆ: ಎಲ್ಲಾ ವಿಭಾಗಗಳಿಗೆ ಅಗತ್ಯವಿರುವ ಬೋಧಕ–ಬೋಧಕೇತರ ಸಿಬ್ಬಂದಿ ನೇಮಕಾತಿಗೆ ಸರ್ಕಾರದಿಂದ ಅನುಮೋದನೆ ದೊರಕಿದೆ. ಈ ಬಾರಿ ಯಾವುದೇ ರೀತಿಯ ಗೊಂದಲಕ್ಕೆ ಎಡೆಮಾಡಿಕೊಡದೆ ಪಾರದರ್ಶಕವಾಗಿ ಶೀಘ್ರದಲ್ಲೇ ಸಿಬ್ಬಂದಿ ನೇಮಕ ಮಾಡಿ ಕೊಳ್ಳಲಾಗುವುದು ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಡಾ. ಶರಣಪ್ಪ ವಿ. ಹಲಸೆ ತಿಳಿಸಿದರು.

‘ಈಗಾಗಲೇ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ. ಜೂನ್‌ 30ರೊಳಗೆ ಪರೀಕ್ಷೆ ನಡೆಸಿ, ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಒಟ್ಟು 147 ಕಾಯಂ ಬೋಧಕ ಸಿಬ್ಬಂದಿ ಹುದ್ದೆಗಳಿಗೆ ಮಂಜೂ ರಾತಿ ಸಿಕ್ಕಿದ್ದು, 125 ಕಾಯಂ ಬೋಧಕ ಸಿಬ್ಬಂದಿ ನೇಮಕ ಮಾಡಿ ಕೊಳ್ಳಬೇಕಾಗಿದೆ. ಅದೇ ರೀತಿ 179 ಕಾಯಂ ಬೋಧಕೇತರ ಸಿಬ್ಬಂದಿ ಹುದ್ದೆ ಗಳು ಮಂಜೂರಾಗಿವೆ. ಸದ್ಯ 32 ಕಾಯಂ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದು, 20 ಕಾಯಂ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕಾಗಿದೆ’ ಎಂದು ತಿಳಿಸಿದರು.

ADVERTISEMENT

ಉಪನ್ಯಾಸಕರಿಗೆ ತರಬೇತಿ: ‘ರೂಸಾ’ ನಿಧಿಯಿಂದ ₹ 20 ಕೋಟಿ ಅನುದಾನ ಲಭಿಸಿತ್ತು. ಅದರಲ್ಲಿ ₹ 15 ಕೋಟಿ ಖರ್ಚಾಗಿದೆ. ಉಳಿದ ₹ 5 ಕೋಟಿ ವೆಚ್ಚದಲ್ಲಿ ವಿ.ವಿ. ವ್ಯಾಪ್ತಿಯ 124 ಕಾಲೇಜುಗಳ ಹೊಸ ಉಪನ್ಯಾಸಕರ ಬೋಧನಾ ಗುಣಮಟ್ಟ ಹೆಚ್ಚಿಸಲು ಅವರಿಗೆ ವಿಶೇಷ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಈ ಬಗ್ಗೆ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಶಾಶ್ವತ ಕುಡಿಯುವ ನೀರು: ವಿಶ್ವವಿದ್ಯಾಲಯವು 72 ಎಕರೆ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದೆ. ಹೀಗಾಗಿ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಸಲುವಾಗಿ ₹ 19 ಕೋಟಿ ವೆಚ್ಚದಲ್ಲಿ ಸಮೀಪದ ಭದ್ರಾ ಕಾಲುವೆಯಿಂದ ನೀರನ್ನು ತರುವ ಯೋಜನೆಯನ್ನು ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆಯು ರೂಪಿಸಿದೆ. ಶೀಘ್ರವೇ ಅದಕ್ಕೆ ಅನುಮೋದನೆ ಸಿಗಲಿದೆ ಎಂದು ತಿಳಿಸಿದರು.

ನಿರಂತರ ವಿದ್ಯುತ್‌: ಈ ಮೊದಲು ಎರಡು– ಮೂರು ಗಂಟೆಗಳಿಗೆ ಒಮ್ಮೆ ವಿದ್ಯುತ್‌ ಕಡಿತಗೊಳ್ಳುತ್ತಿತ್ತು. ಹೀಗಾಗಿ ಹಿಂದಿನ ಕುಲಪತಿ ‘ಎಕ್ಸ್‌ಪ್ರೆಸ್‌ ಲೈನ್‌’ ಹಾಕಲು ಬೆಸ್ಕಾಂಗೆ ₹ 7.5 ಲಕ್ಷ ಪಾವತಿಸಿದ್ದರು. ಈಗ ವಿಶ್ವವಿದ್ಯಾಲಯಕ್ಕೆ ನಿರಂತರ ವಿದ್ಯುತ್‌ ಪೂರೈಕೆಯಾಗುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗಿದೆ ಎಂದು ಹೇಳಿದರು.

ಹೆಚ್ಚುವರಿ ಜಮೀನು ಮಂಜೂರು: ರಾಷ್ಟ್ರೀಯ ಹೆದ್ದಾರಿ ಪಕ್ಕದ ಹುಳುಪಿನ ಕಟ್ಟೆ ಬಳಿ 78 ಎಕರೆ ಜಮೀನನ್ನು ಅರಣ್ಯ ಇಲಾಖೆಯು ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸುವ ಬಗ್ಗೆ ಸರ್ಕಾರಕ್ಕೆ ಶಿಫಾರಸು ಕಳುಹಿಸಲಾಗಿದೆ. ಈ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಅಧಿಕೃತ ಅಧಿಸೂಚನೆ ಬಂದ ನಂತರ ಅಲ್ಲಿ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕುಲಪತಿ ವಿವರ ನೀಡಿದರು.

ಜಗಜೀವನರಾಂ ಅಧ್ಯಯನ ಕೇಂದ್ರ: ಬಾಬೂ ಜಗಜೀವನರಾಂ ಅಧ್ಯಯನ ಕೇಂದ್ರ ಆರಂಭಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಇದಕ್ಕೆ ₹ 2 ಕೋಟಿ ಅನುದಾನವನ್ನು ನೀಡಿದ್ದು, ಅವರಿಂದ ಬಂದ ಬಡ್ಡಿ ಹಣದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು. ಡಾ. ಡಿ.ಎಂ. ನಂಜುಂಡಪ್ಪ ಅಧ್ಯಯನ ಪೀಠ ಆರಂಭಿಸಲು ಪ್ರಸ್ತಾವ ಸಲ್ಲಿಸಲಾಗಿದ್ದು, ಅದಕ್ಕೆ ಇನ್ನೂ ಅನುದಾನ ಲಭಿಸಿಲ್ಲ ಎಂದರು.

ಕ್ಯಾಂಪಸ್‌ ಸಂದರ್ಶನ: ವಿಶ್ವವಿದ್ಯಾಲಯದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ 680 ಕಂಪನಿಗಳೊಂದಿಗೆ ಬಾಂಧವ್ಯ ಹೊಂದಿರುವ ಖಾಸಗಿ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದೆ. ಅದರ ಮೂಲಕ ಪ್ರತಿವರ್ಷ ಕ್ಯಾಂಪಸ್‌ ಸಂದರ್ಶನವನ್ನು ಏರ್ಪಡಿಸ ಲಾಗುವುದು. ಸಂದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಅಗತ್ಯ ತರಬೇತಿಯನ್ನೂ ನೀಡಲಾಗುವುದು ಎಂದು ತಿಳಿಸಿದರು.

ಲ್ಯಾಪ್‌ಟಾಪ್‌ ವಿತರಣೆ: ವಿಶ್ವವಿದ್ಯಾಲಯದಲ್ಲಿ ಶೇ 70ರಷ್ಟು ಎಸ್‌.ಸಿ– ಎಸ್‌.ಟಿ ವಿದ್ಯಾರ್ಥಿಗಳಿದ್ದಾರೆ. 2017–18ನೇ ಶೈಕ್ಷಣಿಕ ಸಾಲಿನಲ್ಲಿ ₹ 3 ಕೋಟಿ ಅನುದಾನದಲ್ಲಿ ಒಟ್ಟು 680 ಎಸ್‌.ಸಿ– ಎಸ್‌.ಟಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್‌ ವಿತರಿಸಲಾಗಿದೆ. ಎಸ್‌.ಸಿ.– ಎಸ್‌.ಟಿ ವಿದ್ಯಾರ್ಥಿಗಳ ವಸತಿನಿಲಯದ ಮೆಸ್‌ ಬಿಲ್‌ನ ಹಣವನ್ನು ವಿಶ್ವವಿದ್ಯಾಲಯದಿಂದಲೇ ನೇರವಾಗಿ ಪಾವತಿಸಲಾಗಿದೆ ಎಂದು ತಿಳಿಸಿದರು.

ಪ್ರಭಾರ ಕುಲಸಚಿವ (ಆಡಳಿತ) ಪ್ರೊ. ಪಿ. ಲಕ್ಷ್ಮಣ್‌, ಕುಲಸಚಿವ (ಪರೀಕ್ಷಾಂಗ) ಪ್ರೊ. ಗಂಗಾನಾಯ್ಕ, ಹಣಕಾಸು ಅಧಿಕಾರಿ
ಪ್ರೊ. ಎಚ್‌.ಎಸ್‌. ಅನಿತಾ, ಕಲಾ ನಿಕಾಯದ ಡೀನ್‌ ಪ್ರೊ.ಬಿ.ಪಿ. ವೀರಭದ್ರಪ್ಪ, ವಿಜ್ಞಾನ ನಿಕಾಯದ ಡೀನ್‌ ಪ್ರೊ. ಗಾಯತ್ರಿ ದೇವರಾಜ್‌, ಪ್ರೊ. ಅನಂತರಾಮ್‌ ಹಾಜರಿದ್ದರು.

ಯುಪಿಎಸ್‌ಸಿ ತರಬೇತಿ ಕೇಂದ್ರ

ದಾವಣಗೆರೆಯ ದೃಶ್ಯಕಲಾ ಕಾಲೇಜಿನ ಆವರಣದಲ್ಲಿ ಒಟ್ಟು ₹ 7 ಕೋಟಿ ವೆಚ್ಚದಲ್ಲಿ ಬುಡಕಟ್ಟು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗಾಗಿ ತಲಾ ಒಂದು ವಸತಿನಿಲಯ ಮತ್ತು ಯುಪಿಎಸ್‌ಸಿ ತರಬೇತಿ ಕೇಂದ್ರವನ್ನು ತೆರೆಯಲು ಉದ್ದೇಶಿಸಲಾಗಿದೆ ಎಂದು ಪ್ರೊ. ಹಲಸೆ ತಿಳಿಸಿದರು.

ಗ್ರಾಮೀಣ ಭಾಗಗಳಿಂದ ಬಂದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯ ತರಬೇತಿ ನೀಡಲು ಒಂದು ಕೇಂದ್ರದ ಅಗತ್ಯವಿದೆ. ಇಲ್ಲಿ ತರಬೇತಿ ಕೇಂದ್ರ ಆರಂಭಿಸಿ ನಿತ್ಯ ಸಂಜೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದರು.

ಕಂಪ್ಯೂಟರ್‌, ಇಂಗ್ಲಿಷ್‌ ಕಲಿಕಾ ಕೇಂದ್ರ

ವಿ.ವಿ.ಗೆ ಬರುವ ವಿದ್ಯಾರ್ಥಿಗಳಲ್ಲಿ ಶೇ 80ರಷ್ಟು ಹಳ್ಳಿಯವರಾಗಿದ್ದಾರೆ. ಸ್ನಾತಕೋತ್ತರ ಪದವಿ ಪೂರೈಸಿದ ಬಳಿಕ ಉದ್ಯೋಗ ಪಡೆಯಲು ವಿದ್ಯಾರ್ಥಿಗಳಿಗೆ ಕಂಪ್ಯೂಟರ್‌ ಮತ್ತು ಇಂಗ್ಲಿಷ್‌ ಜ್ಞಾನದ ಅಗತ್ಯವಿದೆ. ಹೀಗಾಗಿ ‘ರೂಸಾ’ ಅನುದಾನದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕಂಪ್ಯೂಟರ್‌ ಕಲಿಕಾ ಕೇಂದ್ರ ಮತ್ತು ಇಂಗ್ಲಿಷ್‌ ಭಾಷಾ ಪ್ರಯೋಗಾಲಯವನ್ನು ಆರಂಭಿಸಲಾಗುವುದು ಎಂದು ಕುಲಪತಿ ಮಾಹಿತಿ ನೀಡಿದರು. ಜೊತೆಗೆ 200 ಕಂಪ್ಯೂಟರ್‌ಗಳನ್ನು ಹಾಕಿ ಡಿಜಿಟಲ್‌ ಲೈಬ್ರರಿಯನ್ನೂ ಈ ವರ್ಷ ಆರಂಭಿಸಲಾಗುವುದು ಎಂದರು.

ತ್ವರಿತ ಫಲಿತಾಂಶಕ್ಕೆ ನೂತನ ತಂತ್ರಾಂಶ

ಪರೀಕ್ಷೆಗಳನ್ನು ಏರ್ಪಡಿಸುವ, ಮೌಲ್ಯಮಾಪನ ಹಾಗೂ ಫಲಿತಾಂಶಗಳನ್ನು ತ್ವರಿತವಾಗಿ ಪ್ರಕಟಿಸುವ ಸಲುವಾಗಿ ಪರೀಕ್ಷಾಂಗ ವಿಭಾಗಕ್ಕೆ ನೂತನ ತಂತ್ರಾಂಶ ಅಳವಡಿಸಿಕೊಳ್ಳಲಾಗುವುದು ಎಂದು ಪ್ರೊ. ಹಲಸೆ ತಿಳಿಸಿದರು. ಪರೀಕ್ಷಾ ಸುಧಾರಣಾ ಸಮಿತಿಯು ಕುವೆಂಪು ವಿ.ವಿ, ಬಳ್ಳಾರಿಯ ವಿ.ಎಸ್‌.ಕೆ. ವಿಶ್ವವಿದ್ಯಾಲಯ ಹಾಗೂ ತುಮಕೂರು ವಿಶ್ವವಿದ್ಯಾಲಯಕ್ಕೆ ತೆರಳಿ ಅಧ್ಯಯನ ಮಾಡಿತ್ತು. ಹೊಸ ತಂತ್ರಾಂಶ ಅಳವಡಿಸಿಕೊಳ್ಳಲು ಅದು ಶಿಫಾರಸು ಮಾಡಿತ್ತು. ಅದರಂತೆ ಮುಂದಿನ ನವೆಂಬರ್‌, ಡಿಸೆಂಬರ್‌ನಲ್ಲಿ ಪರೀಕ್ಷೆ ನಡೆಯುವ ವೇಳೆಗೆ ಹೊಸ ತಂತ್ರಾಂಶದೊಂದಿಗೆ ಕಾರ್ಯನಿರ್ವಹಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ಕಂಪ್ಯೂಟರ್‌ ಹಾಗೂ ಇಂಗ್ಲಿಷ್‌ ಭಾಷೆ ಕಲಿಸಲು ವ್ಯವಸ್ಥೆ ಮಾಡಲಾಗುತ್ತಿದೆ
ಡಾ. ಶರಣಪ್ಪ ಹಲಸೆ, ಕುಲಪತಿ, ದಾವಣಗೆರೆ ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.