ADVERTISEMENT

ಪುಟಾಣಿಗಳಿಗೆ ಪೊಲೀಯೊ ಲಸಿಕೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2012, 5:25 IST
Last Updated 16 ಏಪ್ರಿಲ್ 2012, 5:25 IST

ದಾವಣಗೆರೆ: ಜಿಲ್ಲೆಯಾದ್ಯಂತ ಭಾನುವಾರ ಪೋಲಿಯೊ ಲಸಿಕೆ ಹಾಕುವ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. 5ವರ್ಷದ ಒಳಗಿನ 2.43 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು. ಭಾನುವಾರ ನಿಗದಿತ ಗುರಿಯ ಶೇ. 86 ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಹೊನ್ನಾಳಿ ತಾಲ್ಲೂಕಿನಲ್ಲಿ ಅತಿಹೆಚ್ಚು ಅಂದರೆ ಶೇ. 92ರಷ್ಟು ಗುರಿ ಸಾಧಿಸಲಾಗಿದೆ.

ಜಿಲ್ಲೆಯಲ್ಲಿ ಭಾನುವಾರದ ಲಸಿಕಾ ಕಾರ್ಯದಲ್ಲಿ 2,548 ಮಂದಿ ಪಾಲ್ಗೊಂಡಿದ್ದರು. 247 ಮೇಲ್ವಿಚಾರಕರು ಉಸ್ತುವಾರಿ ವಹಿಸಿದ್ದರು. ಮುಂದಿನ ಮೂರು ದಿನ ಸ್ವಯಂ ಸೇವಕರು ಮನೆ ಮನೆಗೆ ತೆರಳಿ ಉಳಿದ ಮಕ್ಕಳಿಗೆ ಲಸಿಕೆ ಹಾಕುವರು. ಶೇ. 100 ಗುರಿ ತಲುಪಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸುಮಿತ್ರಾದೇವಿ ತಿಳಿಸಿದ್ದಾರೆ.

ಚನ್ನಗಿರಿ ವರದಿ
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಎರಡನೇ ಹಂತದ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಹಿರಿಯ ಸಮಾಜಸೇವಾ ಕಾರ್ಯಕರ್ತ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಎ. ಬಸವಣ್ಣಯ್ಯ ಮಗುವಿಗೆ ಎರಡು ಹನಿ ಪೋಲಿಯೊ ಲಸಿಕೆ ಹಾಕುವ ಮೂಲಕ ಭಾನುವಾರ ಚಾಲನೆ ನೀಡಿದರು.

ಏ. 15ರಿಂದ 18ರವರೆಗೆ ಈ ಕಾರ್ಯಕ್ರಮ ನಡೆಯಲಿದ್ದು, ತಾಲ್ಲೂಕಿನ 0-5 ವರ್ಷದೊಳಗಿನ 30,779 ಮಕ್ಕಳಿಗೆ ಲಸಿಕೆ ಹಾಕುವ ಗುರಿಯನ್ನು ಹೊಂದಲಾಗಿದೆ. 194 ಲಸಿಕೆ ಕೇಂದ್ರಗಳು, 10 ಸ್ಥಿರ ತಂಡಗಳು ಹಾಗೂ 1 ಸಂಚಾರಿ ತಂಡವನ್ನು ರಚಿಸಲಾಗಿದೆ. ಆದ್ದರಿಂದ, ತಪ್ಪದೇ 2 ಹನಿ ಲಸಿಕೆಯನ್ನು ಮಕ್ಕಳಿಗೆ ಹಾಕಿಸಿಕೊಳ್ಳಬೇಕೆಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಮಂಜುನಾಥ್ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಪ.ಪಂ. ಅಧ್ಯಕ್ಷೆ ಪುಷ್ಪಲತಾ, ಡಾ.ರಾಜಪ್ಪ, ಡಾ.ಗಾಯತ್ರಿದೇವಿ, ಡಾ.ಅಶೋಕ್ ಮುಂತಾದವರು ಉಪಸ್ಥಿತರಿದ್ದರು.

ನ್ಯಾಮತಿ ವರದಿ
 ರಾಷ್ಟ್ರೀಯ ಪಲ್ಸ್ ಪೋಲಿಯೊ  ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ನ್ಯಾಮತಿ ಸಮುದಾಯ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ಶ್ರಮಿಸಿದರು.

ಏ. 15 ಪಲ್ಸ್ ಪೋಲಿಯೊ ದಿನಾಚರಣೆ ಆಗಿದ್ದು, ಪುಟಾಣಿಗಳಿಗೆ ಲಸಿಕೆ ಹಾಕುವ ಬಗ್ಗೆ ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ನೆರವಿನೊಂದಿಗೆ ಗ್ರಾಮದ ಪುಟಾಣಿಗಳಿಗೆ ಮತ್ತು ಮದುವೆ ಮನೆ, ಕಲ್ಯಾಣ ಮಂದಿರ ಹಾಗೂ ಬಸ್‌ನಿಲ್ದಾಣಗಳಲ್ಲಿ ಲಸಿಕೆ ಹಾಕುವುದನ್ನು ಕಂಡು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.