ADVERTISEMENT

ಬಂಡವಾಳ ಹೂಡಿಕೆ ಸಮಾವೇಶ ರೈತ ವಿರೋಧಿ

​ಪ್ರಜಾವಾಣಿ ವಾರ್ತೆ
Published 3 ಜುಲೈ 2012, 5:50 IST
Last Updated 3 ಜುಲೈ 2012, 5:50 IST

ದಾವಣಗೆರೆ: ಬೆಂಗಳೂರಿನಲ್ಲಿ ಜೂನ್ 7ಮತ್ತು 8ರಂದು ನಡೆಯಲಿರುವ ಬಂಡವಾಳ ಹೂಡಿಕೆ ಸಮಾವೇಶ ರೈತ ವಿರೋಧಿ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ದೂರಿದರು.

ರಾಜಕಾರಣಿಗಳ ಅಕ್ರಮ ಆಸ್ತಿ ಸಂಪಾದನೆ ಈ ಸಮಾವೇಶದಲ್ಲಿ ಹಿಂಬಾಗಿಲ ಮೂಲಕ ಹೂಡಿಕೆ ಆಗಲಿದೆ. ಅಲ್ಲದೇ, ಈ ಸಮಾವೇಶ ಜನವಿರೋಧಿಯಾಗಿದೆ ಎಂದು ಶನಿವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ರೈತರಿಗೆ, ಬಡವರಿಗೆ ರಿಯಾಯಿತಿ ನೀಡಲು, ಸೌಲಭ್ಯ ನೀಡಲು ಹಿಂದೇಟು ಹಾಕುವ ಸರ್ಕಾರ ಬಂಡವಾಳ ಹೂಡಿಕೆದಾರರಿಗೆ, ಶ್ರೀಮಂತ ಕಂಪೆನಿಗಳಿಗೆ ನೀರು, ವಿದ್ಯುತ್, ಭೂಮಿ ಮತ್ತಿತರರ ಮೂಲಸೌಲಭ್ಯಗಳನ್ನು ಉಚಿತವಾಗಿ ಇಲ್ಲವೇ ಕಡಿಮೆ ದರದಲ್ಲಿ ನೀಡುತ್ತಿದೆ. ಬಡ ರೈತರಿಂದ ಬಲವಂತವಾಗಿ ಸ್ವಾಧೀನಪಡಿಸಿಕೊಂಡ ಭೂಮಿ ಕಸಿದು ನಡೆಸುತ್ತಿರುವ ಈ ಸಮಾವೇಶ ಕುತಂತ್ರದ ಸಮಾವೇಶವಾಗಿದೆ. ಹಾಗಾಗಿ, ರೈತ ಸಂಘ ಈ ಸಮಾವೇಶವನ್ನು ವಿರೋಧಿಸುತ್ತದೆ. 7ಮತ್ತು 8ರಂದು ಸಾವಿರಾರು ರೈತರು ಸಮಾವೇಶಕ್ಕೆ ಬಂಡವಾಳ ಹೂಡಿಕೆದಾರರು ತೆರಳದಂತೆ ಪ್ರತಿಭಟನೆ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.

ADVERTISEMENT

ರಾಜ್ಯದಲ್ಲಿ ಬರಗಾಲ ಬಂದಿದ್ದು, ಸುಮಾರು ರೂ. 4,352 ಕೋಟಿಯಷ್ಟು ಬೆಳೆನಷ್ಟ ಉಂಟಾಗಿದೆ. ಕನಿಷ್ಠ ಈಗಿರುವ ಸಾಲವನ್ನು ಮನ್ನಾ ಮಾಡಿ, ಹೊಸ ಸಾಲವನ್ನಾದರೂ ನೀಡುವ ಚಿಂತನೆಯನ್ನು ಸರ್ಕಾರ ಮಾಡಬೇಕು. ಬರದ ಸ್ಥಿತಿಯಲ್ಲೂ ಸಾಲ ವಸೂಲಿ ಮಾಡಲು ಬರುವ ಅಧಿಕಾರಿಗಳನ್ನು ಕಂಬಕ್ಕೆ ಕಟ್ಟಿ ಹೊಡೆಯಬೇಕು ಎಂದು ಸಂಘ ಕರೆ ನೀಡುತ್ತದೆ. ಸರ್ಕಾರಕ್ಕೆ ತಾಕತ್ತಿದ್ದರೆ ರೈತರನ್ನು ಬಂಧಿಸಲಿ ಎಂದು ಸವಾಲೆಸೆದರು.

ಏ. 25ರಂದು ರೈತರ ವಿವಿಧ ಬೇಡಿಕೆ ಈಡೇರಿಕೆಗಾಗಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿದ್ದಾಗ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಸಿಎಂ ಸೌಜನ್ಯಕ್ಕೂ ಮಾತನಾಡಲು ಕರೆದಿಲ್ಲ. ಇಷ್ಟೇ ಅಲ್ಲ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಹಾಲಿನ ದರ ಕಡಿಮೆ, ಬಗರ್‌ಹುಕುಂ ರೈತರ ಒಕ್ಕಲೆಬ್ಬಿಸುವಿಕೆ, ಗೋರಖ್ ಸಿಂಗ್ ವರದಿ ನಿರ್ಲಕ್ಷ್ಯ ಸೇರಿದಂತೆ ಇನ್ನು ಹಲವು ಬೇಡಿಕೆ ಇಟ್ಟುಕೊಂಡು ಜೂನ್ 18ರಂದು ರಾಜ್ಯಾದ್ಯಂತ ರೈತ ಸಂಘ ಪ್ರತಿಭಟನೆ ನಡೆಸಲಿದೆ. ರಾಜ್ಯದಲ್ಲಿ 11 ತಿಂಗಳಿಂದ ಉಪ ಲೋಕಾಯುಕ್ತರನ್ನು ನೇಮಿಸಿಲ್ಲ. ಸರ್ಕಾರ ಈ ಕುರಿತು ತಕ್ಷಣ ಗಮನಹರಿಸಬೇಕು ಎಂದು ಅವರು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ  ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಮುನಿಯಪ್ಪ, ಪದಾಧಿಕಾರಿಗಳಾದ ಆವರಗೆರೆ ಬಸವರಾಜಪ್ಪ, ಪಾಮೇನಹಳ್ಳಿ ನಿಂಗಪ್ಪ, ನಾಗರಕಟ್ಟೆ ಬಸವರಾಜ್, ಎಚ್.ಜಿ. ಮಲ್ಲಿಕಾರ್ಜುನ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.