ADVERTISEMENT

ಬರ ಪರಿಸ್ಥಿತಿ ಸಮರ್ಥ ನಿರ್ವಹಣೆ,

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2012, 4:30 IST
Last Updated 27 ಏಪ್ರಿಲ್ 2012, 4:30 IST

ಹೊನ್ನಾಳಿ: ಬರ ಪರಿಸ್ಥಿತಿಯನ್ನು ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತಿದೆ ಎಂದು ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು. ತಾಲ್ಲೂಕಿನ ಬೇಲಿಮಲ್ಲೂರಿನಲ್ಲಿ ಈಚೆಗೆ ನಡೆದ ಬಸವ ಆಶ್ರಯ ವಸತಿ ಫಲಾನುಭವಿಗಳ ಆಯ್ಕೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈಗಾಗಲೇ ರಾಜ್ಯಾದ್ಯಂತ ಎಲ್ಲಾ ಬರಪೀಡಿತ ತಾಲ್ಲೂಕುಗಳಿಗೂ ಹಿರಿಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದೆ. ತಂಡದ ಶಿಫಾರಸುಗಳನ್ನು ತಕ್ಷಣ ಅನುಷ್ಠಾನಗೊಳಿಸಲಾಗುವುದು ಎಂದು ಅವರು ತಿಳಿಸಿದರು.

ಬೇಲಿಮಲ್ಲೂರು ಜಿಲ್ಲಾ ಪಂಚಾಯ್ತಿ ಕ್ಷೇತ್ರದ ವ್ಯಾಪ್ತಿಯ ಬೇಲಿಮಲ್ಲೂರು, ಕೋಟೆಮಲ್ಲೂರು, ಹಿರೇಗೋಣಿಗೆರೆ, ಚಿಕ್ಕಗೋಣಿಗೆರೆ, ಕೋಣನತಲೆ, ಹರಗನಹಳ್ಳಿ, ಹೊನ್ನೂರು ವಡ್ಡರಹಟ್ಟಿ ಇತರ ಗ್ರಾಮಗಳಿಗೆ ತುಂಗಭದ್ರಾ ನದಿಯಿಂದ ಶುದ್ಧ ಕುಡಿಯುವ ನೀರು ಶಾಶ್ವತ ಯೋಜನೆ ಅನುಷ್ಠಾನಗೊಳಿಸಲು ರೂ 7.50 ಕೋಟಿ ಅಂದಾಜು ವೆಚ್ಚದ ಕ್ರಿಯಾ ಯೋಜನೆ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದು ಮಂಜೂರಾತಿ ಹಂತದಲ್ಲಿದ್ದು, ಶೀಘ್ರವೇ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.

ಸಮಾಜ ಸುಧಾರಕ ಬಸವಣ್ಣನವರ ಸಾಮಾಜಿಕ ನ್ಯಾಯ ಪರಿಕಲ್ಪನೆಯಡಿ ಸರ್ವರಿಗೂ ಸಮಬಾಳು-ಸರ್ವರಿಗೂ ಸಮಪಾಲು ಎಂಬ ತತ್ವದಡಿ ಕ್ಷೇತ್ರದ ಎಲ್ಲಾ ಜನತೆಗೆ ಎಲ್ಲಾ ಮೂಲಸೌಲಭ್ಯಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ.

ತಾಲ್ಲೂಕನ್ನು ಗುಡಿಸಲು ರಹಿತವಾಗಿಸಬೇಕು ಮತ್ತು ಎಲ್ಲಾ ಬಡವರಿಗೂ ಆಶ್ರಯ ಮನೆಗಳು ಸಿಗಬೇಕು ಎಂಬ ಉದ್ದೇಶದಿಂದ ತಾಲ್ಲೂಕಿಗೆ 14 ಸಾವಿರ ಆಶ್ರಯ ಮನೆಗಳನ್ನು ಮಂಜೂರು ಮಾಡಿಸಲಾಗಿದೆ. ಯಾವುದೇ ಮಧ್ಯವರ್ತಿಗಳ ಹಾವಳಿಗೆ ಅವಕಾಶವಿಲ್ಲದಂತೆ ನೈಜ ಫಲಾನುಭವಿಗಳಿಗೆ ವಸತಿ ಸೌಲಭ್ಯ ನೀಡಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎ.ಬಿ. ಹನುಮಂತಪ್ಪ, ಎಪಿಎಂಸಿ ಉಪಾಧ್ಯಕ್ಷೆ ರೇವಮ್ಮ, ತಾಲ್ಲೂಕು ಪಂಚಾಯ್ತಿ ಸದಸ್ಯ ರಮೇಶ್ ದಾಸಳ್ಳಿ, ಬೇಲಿಮಲ್ಲೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಹಳದಪ್ಪ, ಉಪಾಧ್ಯಕ್ಷ ಸದಾಶಿವಪ್ಪ, ಹಿರೇಗೋಣಿಗೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ರಂಗಪ್ಪ, ಮಾಸಡಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರತ್ನಮ್ಮ, ಅರಕೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರೇಣುಕಮ್ಮ, ಹರಿಯಾಣ ಮಂಜುನಾಥ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.