ADVERTISEMENT

ಬಸ್ ಸೌಲಭ್ಯಕ್ಕೆ ಆಗ್ರಹಿಸಿ ಗ್ರಾಮಸ್ಥರ ರಸ್ತೆತಡೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2011, 10:20 IST
Last Updated 3 ನವೆಂಬರ್ 2011, 10:20 IST
ಬಸ್ ಸೌಲಭ್ಯಕ್ಕೆ ಆಗ್ರಹಿಸಿ ಗ್ರಾಮಸ್ಥರ ರಸ್ತೆತಡೆ
ಬಸ್ ಸೌಲಭ್ಯಕ್ಕೆ ಆಗ್ರಹಿಸಿ ಗ್ರಾಮಸ್ಥರ ರಸ್ತೆತಡೆ   

ಮಲೇಬೆನ್ನೂರು: ಸಮೀಪದ ವಾಸನ ಗ್ರಾಮದಲ್ಲಿ ಸಾರಿಗೆ ಸಂಸ್ಥೆ ಬಸ್ ಗ್ರಾಮದೊಳಗೆ ಬರುತ್ತಿಲ್ಲ ಎಂದು ಮಂಗಳವಾರ ಗ್ರಾಮಸ್ಥರು ದಿಢೀರ್ ರಸ್ತೆತಡೆ ನಡೆಸಿದ ಘಟನೆ ನಡೆಯಿತು.

ಸರ್ಕಾರಿ ಆದೇಶವಿದ್ದರೂ ನಂದಿಗುಡಿ- ಉಕ್ಕಡಗಾತ್ರಿ- ತುಮ್ಮಿನಕಟ್ಟೆ ಮಾರ್ಗವಾಗಿ ಸಂಚರಿಸುವ ರಾಜ್ಯ ಸಾರಿಗೆ ಸಂಸ್ಥೆಗೆ ಸೇರಿದ ಬಸ್‌ಗಳು ಗ್ರಾಮದೊಳಗೆ ಬರುತ್ತಿಲ್ಲ. ಇದರಿಂದಾಗಿ ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ ಎಂದು ಚಾಲಕ ಹಾಗೂ ನಿರ್ವಾಹಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಪರಿಹರಿಸುವ ತನಕ ಬಸ್‌ಗಳಿಗೆ ತಡೆ ಒಡ್ಡಿದರು. ಇದರಿಂದಾಗಿ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು.
 

ಸ್ಥಳಕ್ಕೆ ಆಗಮಿಸಿದ ಹಿರಿಯ ಅಧಿಕಾರಿ ಬುಕ್ಕಪ್ಪಗೌಡ ಸಮಾಧಾನಪಡಿಸಿ ಗ್ರಾಮದೊಳಗೆ ಬಸ್ ಓಡಿಸದ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಹಾಗೂ ಒಬ್ಬ ಸಿಬ್ಬಂದಿ ನಿಯೋಜಿಸಿ ತಪಾಸಣೆ ಮಾಡಿಸುವುದಾಗಿ
ಭರವಸೆ ನೀಡಿದರು.

ನಂತರ ರಸ್ತೆತಡೆ ತೆರವುಗೊಳಿಸಲಾಯಿತು. ರೈತ ಸಂಘದ ಪದಾಧಿಕಾರಿಗಳಾದ ಓಂಕಾರಪ್ಪ, ಪ್ರಭುಗೌಡ, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸಂಭ್ರಮದ ಕನ್ನಡ ರಾಜ್ಯೋತ್ಸವ: ಇಲ್ಲಿನ ಗ್ರಾ.ಪಂ ಕಚೇರಿ, ಸರ್ಕಾರಿ ಕಚೇರಿ, ವಿವಿಧಶಾಲೆ ಕಾಲೇಜಿನಲ್ಲಿ 56ನೇ ಕನ್ನಡ ರಾಜ್ಯೋತ್ಸವವನ್ನು ಮಂಗಳವಾರ ಆಚರಿಸಲಾಯಿತು.

ಮುಖ್ಯವೃತ್ತ: ಇಲ್ಲಿನ ಗ್ರಾಮಾಡಳಿತದ ವತಿಯಿಂದ ಮುಖ್ಯವೃತ್ತ ಹಾಗೂ ಗ್ರಾ.ಪಂ. ಕಚೇರಿಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಸುನೀತಾ ಕನ್ನಡ ಧ್ವಜ ಹಾಗೂ ಉಪಾಧ್ಯಕ್ಷ ನಿಟ್ಟೂರು ಹೊನ್ನಪ್ಪ ತ್ರಿವರ್ಣ ಧ್ವಜಾರೋಹಣ ನೆರವೇರಿಸಿದರು. ಭುವನೇಶ್ವರಿ ಹಾಗೂ ಮಹಾತ್ಮಗಾಂಧಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ರಾಷ್ಟ್ರಗೀತೆ ಹಾಗೂ ನಾಡಗೀತೆ ಹಾಡಿದರು.

ಪಿಡಿಒ ಮೃತ್ಯುಂಜಯಪ್ಪ, ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಸಿಹಿ ವಿತರಿಸಲಾಯಿತು.
ತುಂಗಭದ್ರಾ ಕಲಾತಂಡದ ಸದಸ್ಯರು ಏಡ್ಸ್ ವಿರುದ್ಧ ಜನಜಾಗೃತಿ ಮೂಡಿಸಲು ಬೀದಿ ನಾಟಕ ಪ್ರದರ್ಶಿಸಿದರು. ನಾಡಗೀತೆ ಹಾಡಿ ರಂಜಿಸಿದರು.

ನಾಡಕಚೇರಿ: ಉಪ ತಹಶೀಲ್ದಾರ್ ರೆಹಾನ್‌ಪಾಷಾ ಧ್ವಜಾರೋಹಣ ನೆರವೇರಿಸಿದರು. ಕಂದಾಯ ನಿರೀಕ್ಷಕ ಹಾಲೇಶಪ್ಪ, ಗ್ರಾಮ ಲೆಕ್ಕಾಧಿಕಾರಿ ಭಕ್ತವತ್ಸಲ ಹಾಗೂ ವಿವಿಧ ಗ್ರಾಮಗಳ ಕಂದಾಯ ಇಲಾಖಾ ಸಿಬ್ಬಂದಿ ಹಾಜರಿದ್ದರು.

ಕರ್ನಾಟಕ ನೀರಾವರಿ ನಿಗಮ: ಪ್ರಭಾರ ಕಾರ್ಯಪಾಲಕ ಎಂಜಿನಿಯರ್ ಜೆ. ಮಂಜುನಾಥ ಧ್ವಜಾರೋಹಣ ನೆರವೇರಿಸಿದರು. ಕಿರಿಯ, ಸಹಾಯಕ ಎಂಜಿನಿಯರ್‌ಗಳು, ಕಚೇರಿ ಲೆಕ್ಕ ಅಧೀಕ್ಷಕ ಕೊಟ್ರಪ್ಪ, ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT