ADVERTISEMENT

ಬಿಎಸ್‌ವೈ-ರೆಡ್ಡಿ ವಿರುದ್ಧವೂ ಬಿಎಸ್‌ಆರ್ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 24 ಮೇ 2012, 8:55 IST
Last Updated 24 ಮೇ 2012, 8:55 IST

ಹರಪನಹಳ್ಳಿ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ತಮ್ಮ ಆಪ್ತಬಳಗದಿಂದ ದೂರ ಸರಿದಿರುವ ಮಾಜಿ ಸಚಿವ, ಹರಪನಹಳ್ಳಿ ಕ್ಷೇತ್ರದ ಶಾಸಕ ಜಿ. ಕರುಣಾಕರರೆಡ್ಡಿ ಅವರ ವಿರುದ್ಧವೂ ಸೇರಿದಂತೆ ರಾಜ್ಯದ 224 ಕ್ಷೇತ್ರಗಳಲ್ಲಿಯೂ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುತ್ತಾರೆ ಎಂದು ಬಿಎಸ್‌ಆರ್ ಪಕ್ಷದ ಸಂಸ್ಥಾಪಕ, ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ. ಶ್ರೀರಾಮುಲು ಹೇಳಿದರು.

ಬೀದರ್‌ನಿಂದ ಬೆಂಗಳೂರುವರೆಗೆ ಆರಂಭವಾಗಿರುವ ಪಕ್ಷದ ಪಾದಯಾತ್ರೆ ನೇತೃತ್ವ ವಹಿಸಿರುವ ಅವರು, ತಾಲ್ಲೂಕಿನ ಬೆಣ್ಣಿಹಳ್ಳಿ ಗ್ರಾಮಕ್ಕೆ ಬುಧವಾರ ಆಗಮಿಸಿದ ಪಾದಯಾತ್ರೆ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಾದೇಶಿಕ ಪಕ್ಷದ ರಚನೆ, ಪಾದಯಾತ್ರೆ ಸೇರಿದಂತೆ ತಮ್ಮ ಆಪ್ತಮಿತ್ರ ಜಿ. ಜನಾರ್ದನರೆಡ್ಡಿ ಕುಟುಂಬದ ಪೈಕಿ, ಕರುಣಾಕರರೆಡ್ಡಿ ಅವರನ್ನು ಹೊರತುಪಡಿಸಿ, ಉಳಿದೆಲ್ಲರೂ ಒಂದೇ ಕುಟುಂಬದ ಸದಸ್ಯರಂತೆ ಒಟ್ಟಿಗೆ ಇದ್ದೇವೆ. ನಾನು ಪಕ್ಷ ತೊರೆದಾಗಿನಿಂದ ಹಿಡಿದು, ಈವರೆಗೂ ಕರುಣಾಕರರೆಡ್ಡಿ ನಮ್ಮಂದಿಗೆ ಸಂಪರ್ಕದಲ್ಲಿ ಇಲ್ಲ. ಅವರನ್ನು ಪಕ್ಷಕ್ಕೆ ಕರೆತರುವ ಹುಚ್ಚು ಸಾಹಸಕ್ಕೆ ಕೈಹಾಕಲಾರೆ. ಈಗಾಗಲೇ ನಮ್ಮಿಂದ ಅವರು ಬಹುದೂರ ಹೋಗಿದ್ದಾರೆ. ಅಂಥವರ ಬಗ್ಗೆ ಯೋಚಿಸಲಾರೆ. ಅವರ ಚುನಾವಣೆಯಲ್ಲಿ ನಾನು ಹಾಕಿದ ಶ್ರಮ, ನನ್ನ ಸೇವೆ ಅವರು ಸ್ಮರಿಸಬೇಕಿತ್ತು. ಅವರ ಸಹಕಾರಕ್ಕಿಂತ ಜನರ ಪ್ರೀತಿ-ಸಹಕಾರ ನನಗೆ ಮುಖ್ಯ. ಹೀಗಾಗಿ, ಅವರ ವಿರುದ್ಧವೂ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯುತ್ತಾರೆ ಎಂದರು.

ADVERTISEMENT

ಯಡಿಯೂರಪ್ಪ ಅವರ ಮೇಲೆ ಸಿಬಿಐ ತನಿಖೆಗೆ ಆದೇಶ ಹೊರಬಿದ್ದಾಕ್ಷಣ ಅವರ ಬಗ್ಗೆ ಅನುಕಂಪ, ಸಹನುಭೂತಿಯ ಮಾತು ಹೇಳಲು ಕಾರಣ ಏನು? ಎಂಬ ಪ್ರಶ್ನೆಗೆ, ಯಡಿಯೂರಪ್ಪ ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿದ್ದಲೂ ಅವರ ಸಂಪುಟದಲ್ಲಿ ಸಚಿವನಾಗಿ ಕಾರ್ಯ ನಿರ್ವಹಿಸಿದ್ದೇನೆ. ಮಾನಸಿಕವಾಗಿ ಜರ್ಜರಿತವಾದ ಸಂದರ್ಭದಲ್ಲಿ ಅವರ ಬಗ್ಗೆ ಅನುಕಂಪ, ಸಹಾನುಭೂತಿ ವ್ಯಕ್ತಪಡಿಸಿ ಹೇಳಿಕೆ ನೀಡಿದ್ದು, ಮಾನವೀಯತೆಯ ದೃಷ್ಟಿಯಿಂದ ಹೊರತು, ಯಡಿಯೂರಪ್ಪ ಕುರಿತಂತೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರು ಅವರ ಸ್ಥಿತಿ ನಮಗೆ ಬಂದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆವು  ಎಂಬ ರಾಜಕೀಯ ಉದ್ದೇಶದಿಂದಲ್ಲ ಎಂದು ಸ್ಪಷ್ಟಪಡಿಸಿದರು.

ಸಂಸತ್ ಸದಸ್ಯೆ ಜೆ. ಶಾಂತಾ, ವಿಧಾನ ಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ, ಚಿತ್ರನಟಿ, ಪಕ್ಷದ ನಾಯಕಿ ರಕ್ಷಿತಾ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.