ADVERTISEMENT

ಬೆಳೆ ಹಾನಿ ರೈತರ ಸಮಸ್ಯೆ ಆಲಿಸದ ಸಚಿವರು

ಬೆಳೆ ಹಾನಿ ಪ್ರದೇಶಗಳಿಗೆ ಭೇಟಿಕೊಟ್ಟ ಬಳಿಕ ಬಿಜೆಪಿ ಮುಖಂಡ ಎಸ್‌.ಎ.ರವೀಂದ್ರನಾಥ ಆರೋಪ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2017, 7:26 IST
Last Updated 3 ಅಕ್ಟೋಬರ್ 2017, 7:26 IST

ದಾವಣಗೆರೆ: ರಾಜ್ಯ ಸರ್ಕಾರ ರೈತರ ಬಗ್ಗೆ ಕಾಳಜಿ ತೋರಿಸುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ರೈತರನ್ನು ಸಂಪೂರ್ಣ ವಾಗಿ ಕಡೆಗಣಿಸಿದ್ದಾರೆ ಎಂದು ಬಿಜೆಪಿ ಮುಖಂಡ ಎಸ್‌.ಎ.ರವೀಂದ್ರನಾಥ ವಾಗ್ದಾಳಿ ನಡೆಸಿದರು.

ತಾಲ್ಲೂಕಿನ ಕಕ್ಕರಗೊಳ್ಳ, ಆವರಗೊಳ್ಳ, ಗಂಗನರಸಿ, ದೊಡ್ಡಬಾತಿ, ಹಳೆ ಬಾತಿ ಭಾಗದಲ್ಲಿನ ಬೆಳೆ ಹಾನಿ ಪ್ರದೇಶಗಳಿಗೆ ಸೋಮವಾರ ಭೇಟಿ ನೀಡಿ, ರೈತರಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಈಚೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ಸಾಕಷ್ಟು ಬೆಳೆ ಹಾನಿಯಾಗಿದೆ. ಕಕ್ಕರಗೊಳ್ಳ, ಆವರಗೊಳ್ಳ, ಗಂಗನರಸಿ ಭಾಗದಲ್ಲಿ ರೈತರು ಹೆಚ್ಚು ನಷ್ಟಕ್ಕೆ ತುತ್ತಾಗಿದ್ದಾರೆ. ಭದ್ರಾ ನಾಲೆಯ ನೀರು ಕೂಡ ಸಕಾಲಕ್ಕೆ ಅವರಿಗೆ ಸಿಕ್ಕಿಲ್ಲ. ತೆನೆಕಟ್ಟುವ ಹಂತದಲ್ಲಿದ್ದ ಬೆಳೆಯು ಸಂಪೂರ್ಣವಾಗಿ ನೆಲಕಚ್ಚಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಕೆಲವೆಡೆ ಫಲಕ್ಕೆ ಬಂದಿದ್ದ ಬೆಳೆಗೆ ವಿಚಿತ್ರ ಹುಳುಬಾಧೆ ಕಾಡಿದ್ದರಿಂದಾಗಿ ಆ ಬೆಳೆಯು ನಷ್ಟವಾಗಿದೆ. ಕಕ್ಕರಗೊಳ್ಳ ಭಾಗದಲ್ಲಿ ಎದೆಮಟ್ಟಕ್ಕೆ ಬೆಳೆದು ನಿಂತ ಮೆಕ್ಕೆಜೋಳ ಹುಳುಕಾಟದಿಂದ ನಾಶವಾಗಿದೆ. ಹೀಗಿದ್ದರೂ ಸಚಿವರು ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ಕೃಷಿ ಇಲಾಖೆಯ ಅಧಿಕಾರಿಗಳು ಕೂಡ ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ದೂರಿದರು.

ಕೂಡಲೇ ಸಚಿವರು ಹಾಗೂ ಜಿಲ್ಲಾಧಿಕಾರಿ ಬೆಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ, ನೆರವಿನ ಹಸ್ತ ಚಾಚಬೇಕು ಎಂದು ಒತ್ತಾಯಿಸಿದರು.

ರೈತರಾದ ಬಣಕಾರ್ ಶಿವಣ್ಣ, ಷಣ್ಮುಖಯ್ಯ, ಬಿಜೆಪಿ ಮುಖಂಡರಾದ ಜಗದೀಶ್‌, ಧನಂಜಯ ಕಡ್ಲೇಬಾಳು ಮಾತನಾಡಿ, ನೆರೆ ಹಾವಳಿ ಪ್ರದೇಶಗಳಿಗೆ ಸಚಿವರು ಭೇಟಿ ನೀಡಿ, ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಮುಖಂಡರಾದ ಎಚ್.ಎಸ್.ನಾಗರಾಜ್, ಶಿವರಾಜ್ ಪಾಟೀಲ್, ಕೆ.ಪಿ. ಕಲ್ಲಿಂಗಪ್ಪ, ಗವಳಿ ಲಿಂಗರಾಜ, ರುದ್ರಮುನಿ ಸ್ವಾಮಿ, ಸಂತೋಷ್‌ ಹಾಗೂ ರೈತ ಮುಖಂಡರು
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.