ADVERTISEMENT

ಬ್ಯಾಡ್ಮಿಂಟನ್ ಟೂರ್ನಿ ಸಮಾರೋಪ

​ಪ್ರಜಾವಾಣಿ ವಾರ್ತೆ
Published 10 ಜೂನ್ 2013, 10:01 IST
Last Updated 10 ಜೂನ್ 2013, 10:01 IST

ದಾವಣಗೆರೆ: ಬೆಂಗಳೂರು, ಮೈಸೂರು, ಮಂಗಳೂರು ಮೊದಲಾದ ನಗರಗಳಿಗೆ ಸೀಮಿತವಾಗಿದ್ದ ಬ್ಯಾಡ್ಮಿಂಟನ್‌ನಂತಹ ಕ್ರೀಡಾಕೂಟಗಳು ನಗರದಲ್ಲಿಯೂ ನಡೆಯುತ್ತಿರುವುದು ಉತ್ತಮ ಬೆಳವಣಿಗೆ ಎಂದು ನಗರಪಾಲಿಕೆ ಸದಸ್ಯ ಶಿವನಹಳ್ಳಿ ರಮೇಶ್ ಹೇಳಿದರು.

ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆಯು, ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆ ಸಹಯೋಗದಲ್ಲಿ ನಗರದ ನೇತಾಜಿ ಸುಭಾಷ್‌ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಲಿ-ನಿಂಗ್ 5 ಸ್ಟಾರ್ ರಾಜ್ಯ ರ‌್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆಯು ಆಗಾಗ ಟೂರ್ನಿ ನಡೆಸುವ ಮೂಲಕ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸುತ್ತಿದೆ. ರಾಷ್ಟ್ರಮಟ್ಟದ ಕ್ರೀಡಾಕೂಟಗಳು ಹೆಚ್ಚು ಹೆಚ್ಚಾಗಿ ಇಲ್ಲಿ ನಡೆಯುವಂತಾಗಲಿ ಎಂದು ಆಶಿಸಿದರು.

ಶಾಸಕರಾಗಿರುವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಹಿಂದೆ ಸಚಿವರಾಗಿದ್ದ ಸಂದರ್ಭದಲ್ಲಿ ಒಳಾಂಗಣ ಕ್ರೀಡಾಂಗಣ ಸೇರಿದಂತೆ ಅನೇಕ ಸೌಲಭ್ಯ ಕಲ್ಪಿಸಿದ್ದರು. ಇವು ಇಲ್ಲಿನ ಕ್ರೀಡಾಕ್ಷೇತ್ರದ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು.

ನಗರಪಾಲಿಕೆ ಸದಸ್ಯ ದಿನೇಶ್ ಕೆ.ಶೆಟ್ಟಿ ಮಾತನಾಡಿ, ದಾವಣಗೆರೆಯಲ್ಲಿ ಹಿಂದಿನಿಂದಲೂ ಕ್ರೀಡಾ ಚಟುವಟಿಕೆಗಳಿಗೆ ಉತ್ತಮ ಪ್ರೋತ್ಸಾಹ ಹಾಗೂ ಸೌಲಭ್ಯ ದೊರೆಯುತ್ತಿದೆ. ಅದನ್ನು ಬಳಸಿಕೊಳ್ಳಬೇಕು. ನಗರದಲ್ಲಿ ಅಂತರರಾಷ್ಟ್ರೀಯ ಮಟ್ಟದ ಟೂರ್ನಿಗಳು ನಡೆಯಲಿ ಎಂದು ಆಶಿಸಿದರು.

ನಗರಪಾಲಿಕೆ ಸದಸ್ಯ ಎನ್.ತಿಪ್ಪಣ್ಣ, ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ಅಧ್ಯಕ್ಷ ಜಿ.ಜಯರಾಜ್, ಕಾರ್ಯದರ್ಶಿ ಎನ್.ಸಿ.ಸುಧೀರ್, ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆ ಅಧ್ಯಕ್ಷ ಎಂ.ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಜೆ.ಬಿ.ಉಮೇಶ್,  ಕಿವಿ, ಗಂಟಲು ಮತ್ತು ಮೂಗು ತಜ್ಞ ಡಾ.ಮಂಜುನಾಥ್, ಮುಖ್ಯ ರೆಫ್ರಿ ಸುರೇಶ್‌ಕುಮಾರ್ ಪಾಲ್ಗೊಂಡಿದ್ದರು.ಸಂಸ್ಥೆಯ ನಿರ್ದೇಶಕ ವಾಸುದೇವ ವಿ.ರಾಯ್ಕರ್ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.