ADVERTISEMENT

ಭಕ್ತಿ ಪರಾಕಾಷ್ಠೆಯ ಲಕ್ಕಮ್ಮನ ಜಾತ್ರೋತ್ಸವ

​ಪ್ರಜಾವಾಣಿ ವಾರ್ತೆ
Published 13 ಜನವರಿ 2011, 6:35 IST
Last Updated 13 ಜನವರಿ 2011, 6:35 IST

ಹರಪನಹಳ್ಳಿ: ಸುತ್ತಲೂ ಕಣ್ಣು ಹಾಯಿಸಿದಷ್ಟು ಭಕ್ತರ ದಂಡು. ಕೈಯಲ್ಲಿ ಹಣ್ಣು-ಕಾಯಿ, ಊದುಬತ್ತಿ ಹಿಡಿದು ದೇವಿಯ ದರ್ಶನಕ್ಕಾಗಿ ಸಾಲುಗಟ್ಟಿ ನಿಂತ ಭಕ್ತರು. ಒಂದೆಡೆ ಬೇವಿನ ಉಡುಗೆ, ದೀಡು ನಮಸ್ಕಾರ ಸೇರಿದಂತೆ ವಿವಿಧ ಹರಕೆ ತೀರಿಸಲು ‘ಲಕ್ಕಮ್ಮ ನಿನ್ನಾಲ್ಕು ಉಧೋ...ಉಧೋ...’ ಎಂಬ ಭಕ್ತಿಯ ಪರಾಕಾಷ್ಠೆಯಲ್ಲಿ ಮಿಂದೆದ್ದ ಭಕ್ತಗಣ.

-ಇದು ತಾಲ್ಲೂಕಿನ ಹುಲಿಕಟ್ಟೆ ಸಮೀಪದ ಅರಣ್ಯದಲ್ಲಿರುವ ಗುಳೇದ ಲಕ್ಕಮ್ಮದೇವಿ ಸನ್ನಿಧಿಯಲ್ಲಿ ಬುಧವಾರ ಬೆಳಗಿನ ಜಾವದಿಂದ ಸಂಜೆಯವರೆಗೂ ಕಂಡುಬಂದ ಭಕ್ತರ ಸಂಭ್ರಮ.

ಮಂಗಳವಾರ ಹುಲಿಕಟ್ಟೆ ಗ್ರಾಮದೊಳಗಿನ ದೇವಸ್ಥಾನದಿಂದ ಪಕ್ಕದ ಕೆರೆಯಲ್ಲಿ ಗಂಗೆಪೂಜೆ ಸಲ್ಲಿಸಿದ ನಂತರ ಅಲಂಕೃತ ಲಕ್ಕಮ್ಮದೇವಿಯ ಮೂರ್ತಿಯನ್ನು ಸಕಲ ವಾದ್ಯಗಳೊಂದಿಗೆ ಭರ್ಜರಿ ಮೆರವಣಿಗೆ ಮೂಲಕ ದೇವಿಯ ಮೂಲಸ್ಥಾನಕ್ಕೆ ಬಂದಾಗ ಮಧ್ಯರಾತ್ರಿ 2ಗಂಟೆ. ಮೂಲಸ್ಥಾನದಲ್ಲಿ ದೇವಿ ಪ್ರತಿಷ್ಠಾಪನೆಗೊಳ್ಳುತ್ತಿದ್ದಂತೆಯೇ ಭಕ್ತರ ಜಯಘೋಷ ಎಲ್ಲೆ ಮೀರಿತ್ತು.

ದಾವಣಗೆರೆ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲದೇ ನೆರೆಯ ಚಿತ್ರದುರ್ಗ, ಬಳ್ಳಾರಿ, ಹಾವೇರಿ ಹಾಗೂ ಗದಗ ಜಿಲ್ಲೆಗಳಿಂದ ಟ್ರ್ಯಾಕ್ಟರ್, ಎತ್ತಿನಗಾಡಿ, ವಿವಿಧ ವಾಹನಗಳ ಮೂಲಕ ಲಕ್ಷಾಂತರ ಜನ ಭಕ್ತರು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಲು ಶ್ರದ್ಧಾಭಕ್ತಿಯಿಂದ ವಿವಿಧ ಬಗೆಯ ಹರಕೆ ಸಲ್ಲಿಸಿ ಪುನೀತರಾದರು.

ಇಷ್ಟಾರ್ಥ ಸಿದ್ಧಿಗಾಗಿ ಒಂಬತ್ತು ದಿನಗಳ ಕಠಿಣ ಪರಿಶ್ರಮದ ನಿಷ್ಕಲ್ಮಶ ಭಕ್ತಿಯಿಂದ ಗೋಧಿ ಸಸಿಯನ್ನು ಬಿದರಿನ ಬುಟ್ಟಿಯಲ್ಲಿ ಬೆಳೆದು, ಬಣ್ಣದ ಕಾಗದ ಹಾಗೂ ಅವರದೇ ಆದ ವಿಶಿಷ್ಟ ಶೈಲಿಯಲ್ಲಿ ಅಲಂಕರಿಸಿದ ಪುಟ್ಟಿಯನ್ನು ತಲೆಯ ಮೇಲೆಟ್ಟಿಕೊಂಡು ಅಮ್ಮನ ಅಡಿದಾವರೆಗೆ ಅರ್ಪಿಸಿದ ಬಂಜಾರ ಸಮುದಾಯದ ಯುವತಿಯರ ದೃಶ್ಯ ಜಾತ್ರೆಯುದ್ದಕ್ಕೂ ಸಾಮಾನ್ಯವಾಗಿತ್ತು.ತಾತ್ಕಾಲಿಕ ಟೆಂಟ್‌ಗಳಲ್ಲಿ ಸಾವಿರಾರು ಕುರಿ-ಕೋಳಿಗಳನ್ನು ದೇವಿಗೆ ಬಲಿಕೊಟ್ಟು ನೈವೇದ್ಯ ಅರ್ಪಿಸಿದ ನಂತರ ಮಾಂಸಹಾರದ ಊಟ ಎಲ್ಲೆಲ್ಲೋ ಗೋಚರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.