ADVERTISEMENT

ಭದ್ರಾ ನೀರು ಹರಿಸದಿದ್ದರೆ ಪ್ರತಿಭಟನೆ

ಮಾಜಿ ಶಾಸಕ ರೇಣುಕಾಚಾರ್ಯ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2015, 9:37 IST
Last Updated 7 ಡಿಸೆಂಬರ್ 2015, 9:37 IST

ಹೊನ್ನಾಳಿ: ತಾಲ್ಲೂಕಿನ ಭದ್ರಾ ಭಾಗದ ರೈತರಿಗೆ  ಬೇಸಿಗೆ ಬೆಳೆಗೆ ಅಗತ್ಯವಿರು ವಷ್ಟು ನೀರನ್ನು ಸತತವಾಗಿ ನಾಲೆಯಲ್ಲಿ ಹರಿಸದಿದ್ದರೆ ರೈತರೊಂದಿಗೆ ಸೇರಿ ಹೋರಾಟ ಮಾಡಲು ಸಿದ್ಧ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು. ಭಾನುವಾರ ಪಟ್ಟಣದಲ್ಲಿ ಭದ್ರಾ ಭಾಗದ ರೈತರೊಂದಿಗೆ ಸಭೆ ನಡೆಸಿದ ಸಂದರ್ಭದಲ್ಲಿ  ಮಾತನಾಡಿದರು.

ರೈತರು ಮಳೆ ಇಲ್ಲದೇ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಅದೇ ರೀತಿಯಲ್ಲಿ ಬೇಸಿಗೆ ಬೆಳೆಗೆ ಯಾವುದೇ ಷರತ್ತು  ಹಾಕದೇ ನೀರು ಹರಿಸಬೇಕು. ನಿರ್ಲಕ್ಷ್ಯ ವಹಿಸಿದಲ್ಲಿ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಭದ್ರಾ ನೀರು ಈ ಭಾಗದ ರೈತರಿಗೆ ಜೀವನಾಡಿ. ಬೇಸಿಗೆ ಬೆಳೆಗೆ ಭತ್ತ ನಾಟಿ ಮಾಡಿಕೊಳ್ಳಲು ಭದ್ರಾ ಎಡದಂಡೆ ಹಾಗೂ ಬಲದಂಡೆ ನಾಲೆಗಳಲ್ಲಿ ನೀರು ಹರಿಸುವ ಕುರಿತು ಭದ್ರಾ ಅಚ್ಚುಕಟ್ಟು ಪ್ರಾಧಿಕಾರ ಸಮಿತಿ ನಡೆಸಿದ ಸಭೆಯಲ್ಲಿ ಯಾವುದೇ ರೈತ ಮುಖಂಡರನ್ನು ಆಹ್ವಾನಿಸಿಲ್ಲ. ಕೇವಲ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ಚರ್ಚಿಸಿ, ಅವರು ನೀಡಿದ ಮಾಹಿತಿ ಮೇರೆಗೆ ನೀರು ಹರಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎನ್ನುವ ದೂರುಗಳು ಬರುತ್ತಿವೆ. ರೈತ ವಿರೋಧಿ ನೀತಿಯನ್ನು ಇನ್ನಾದರೂ ಕೈಬಿಡಿ ಎಂದರು.

ಮತ್ತೊಮ್ಮೆ ಸಭೆಗೆ ಆಗ್ರಹ : ಪ್ರಸ್ತುತ ಭದ್ರಾ ಆಣೆಕಟ್ಟಿನಲ್ಲಿ 162 ( 32 ಟಿಎಂಸಿ ) ಅಡಿ ನೀರು ಇದೆ. 32 ಟಿಎಂಸಿ ನೀರಿನಲ್ಲಿ 7 ಟಿಎಂಸಿ ನೀರನ್ನು ಕುಡಿಯುವುದಕ್ಕೆ ಮೀಸಲಿಟ್ಟು, ಉಳಿದ 25 ಟಿಎಂಸಿ ನೀರನ್ನು ಜ. 1 ರಿಂದ ಮೇ 20 ರವರೆಗೆ  79 ದಿನಗಳ ಕಾಲ ನೀರು ಹರಿಸುತ್ತೇವೆ ಎನ್ನುವ ಏಕಪಕ್ಷೀಯ ತೀರ್ಮಾನ ಸರಿಯಲ್ಲ. ಇಂತಹ ತೀರ್ಮಾನವನ್ನು ಬದಿಗಿಟ್ಟು ರೈತ ರೊಂದಿಗೆ ಮತ್ತೊಮ್ಮೆ ಸಭೆ ಕರೆದು ಚರ್ಚೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.

ಡಿ. 10 ಕ್ಕೆ  ಕಾಡಾ ಕಚೇರಿಗೆ ಮುತ್ತಿಗೆ: ಕಾಡಾ ಸಮಿತಿಯು ಕೈಗೊಂಡಿರುವ ಅವೈಜ್ಞಾನಿಕ ತೀರ್ಮಾನವನ್ನು ವಿರೋ ಧಿಸಿ ಭದ್ರಾ ನಾಲೆಗಳಲ್ಲಿ ಸತತವಾಗಿ ನೀರು ಹರಿಸಬೇಕೆಂದು ಹಕ್ಕೋತ್ತಾಯ ಮುಂದಿಟ್ಟುಕೊಂಡು  ಡಿ. 10 ರಂದು ಗುರುವಾರ ಬೆಳಿಗ್ಗೆ ಶಿವಮೊಗ್ಗ ಸಮೀಪದ ಮಲವಗೊಪ್ಪ ಭದ್ರಾ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಅವರು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವ ರವೀಂದ್ರನಾಥ್,  ಮಾಜಿ ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ, ಬಸವರಾಜ್ ನಾಯ್ಕ, ಹಾಗೂ ಇತರ ರೈತ ಮುಖಂಡ ರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸ ಬೇಕೆಂದು ಅವರು ಮನವಿ ಮಾಡಿದರು. ಸಭೆಯಲ್ಲಿ ಕುಂದೂರು, ಸಾಸ್ವೆಹಳ್ಳಿ ಹೋಬಳಿ ಹಾಗೂ ಬೇಲಿಮಲ್ಲೂರು ಭಾಗದ ರೈತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.