ADVERTISEMENT

ಭ್ರೂಣಹತ್ಯೆ ನಾಗರಿಕ ಸಮಾಜದ ಕಳಂಕ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2013, 4:51 IST
Last Updated 11 ಸೆಪ್ಟೆಂಬರ್ 2013, 4:51 IST

ಹರಪನಹಳ್ಳಿ: ಮಹಿಳಾ ಸಂಕುಲ ಗರ್ಭದಲ್ಲಿ ಹಾಗೂ ಹೊರಗಡೆಯೂ ಸುರಕ್ಷಿತವಾಗಿರದಂತಹ ಸನ್ನಿವೇಶ ಸೃಷ್ಟಿಯಾಗಿರುವುದು ನಾಗರಿಕ ಸಮಾಜದ ಕಳಂಕ ಎಂದು ಸ್ಥಳೀಯ ಜೆಎಂಎಫ್‌ಸಿ ನ್ಯಾಯಾಲಯದ ಕಿರಿಯ ವಿಭಾಗದ ನ್ಯಾಯಾಧೀಶ ಪ್ರಕಾಶ ಬನಸೋಡೆ ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಘದ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ  ಕಾನೂನು ಸಾಕ್ಷರತಾ ರಥಸಂಚಾರ ಹಾಗೂ ಜನತಾ ನ್ಯಾಯಾಲಯ  ಪ್ರವಾಸದ ಕಾನೂನು ಅರಿವು- ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಗುವಿನ ಆರೋಗ್ಯದ ಬೆಳವಣಿಗೆಗೆ ಪೂರಕವಾಗಿ ಆವಿಷ್ಕರಿಸಲಾದ ವೈದ್ಯಕೀಯ ಯಂತ್ರೋಪಕರಣ ಲಿಂಗ ಗುರುತಿಸುವಿಕೆಗೆ ಬಳಕೆಯಾಗುವ ಮೂಲಕ ಮಹಿಳಾ ಸಂಕುಲಕ್ಕೆ ಮಾರಕವಾಗಿ ಪರಿಣಮಿಸಿದೆ. ಈ ಸಮಾಜಘಾತುಕ ಕ್ರಿಯೆ ಪುರುಷ- ಮಹಿಳೆ ಅನುಪಾತದ ಗಂಡಾಂತರಕ್ಕೂ ಕಾರಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಬಾಲ್ಯವಿವಾಹದಂತ ಆಚರಣೆಯೂ ಸಹ ಮಹಿಳೆಯ ಏಳಿಗೆಗೆ ಕಂಟಕವಾಗಿದೆ.ಹೀಗಾಗಿ ಮಹಿಳೆ ಈ ಎಲ್ಲಾ ಸಂಕೋಲೆಗಳಿಂದ ಬಂಧಮುಕ್ತರಾಗಲು ಮೊದಲು ಸುಶಿಕ್ಷತಳಾಗಬೇಕು ಎಂದು ಕರೆ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ಎಸ್.ಎಂ. ರುದ್ರಮುನಿಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಪ್ರಭಾರ ತಹಶೀಲ್ದಾರ್ ಕೆ.ಬಿ. ಆನಂದಪ್ಪನಾಯ್ಕ, ಸಹಾಯಕ ಸರ್ಕಾರಿ ಅಭಿಯೋಜಕ ಕೆ.ಸಿ. ದೀಪಕ್, ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿ ಮಹೇಶ್ ವಿ. ಪೂಜಾರ್, ಶಿಶು ಅಭಿವದ್ಧಿ ಯೋಜನಾಧಿಕಾರಿ ಸಿದ್ದೇಶಪ್ಪ, ತಾಲ್ಲೂಕು ಪಂಚಾಯ್ತಿ ಸಹಾಯಕ ನಿರ್ದೇಶಕ ಭಜಂತ್ರಿ, ವಕೀಲರಾದ ಪಿ. ಜಗದೀಶಗೌಡ ಪಾಟೀಲ್, ವಿ.ಜಿ. ಪ್ರಕಾಶಗೌಡ, ನಾಗರಾಜ, ಹನುಮಂತಪ್ಪ, ಮಂಜುನಾಥ, ಬಸವರಾಜ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.