ADVERTISEMENT

`ಮತದಾನಕ್ಕೆ ಗುರುತಿನ ಚೀಟಿ ಒಂದೇ ಮಾನದಂಡ ಅಲ್ಲ'

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 8:44 IST
Last Updated 5 ಏಪ್ರಿಲ್ 2013, 8:44 IST

ಹೊನ್ನಾಳಿ: ಚುನಾವಣಾ ಗುರುತಿನ ಚೀಟಿ ಹೊಂದಿದ ಒಂದೇ ಕಾರಣಕ್ಕೆ ಎಲ್ಲರೂ ಮತದಾನ ಮಾಡಲು ಸಾಧ್ಯ ಇಲ್ಲ ಎಂದು ತಹಶೀಲ್ದಾರ್ ಟಿ.ವಿ. ಪ್ರಕಾಶ್ ಹೇಳಿದರು.

ಇಲ್ಲಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಎದುರು ಬುಧವಾರ ಹಮ್ಮಿಕೊಂಡ ಮತದಾರರ ಹಾಗೂ ಕೃಷಿ ಜಾಗೃತಿ ಆಂದೊಲನ ಉದ್ಘಾಟಿಸಿ ಅವರು ಮಾತನಾಡಿದರು.

ಮತದಾನ ಮಾಡಲು ಭಾವಚಿತ್ರಸಹಿತ ಗುರುತಿನ ಚೀಟಿ ಇರಬೇಕು ಎಂಬುದು ಸರಿ. ಆದರೆ, ಇದೊಂದೇ ಸಾಲದು. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವಿಕೆಯ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು ಎಂದು ಅವರು ಸೂಚಿಸಿದರು.

ಹೊಸದಾಗಿ ಭಾವಚಿತ್ರಸಹಿತ ಗುರುತಿನ ಚೀಟಿ ಪಡೆಯಲು ಏ.7 ಕೊನೆಯ ದಿನ. ನಿಮ್ಮ ವಯಸ್ಸಿನ ಪ್ರಮಾಣ ಪತ್ರ, ಒಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ನಮೂನೆ 6ರಲ್ಲಿ ವಿವರಗಳನ್ನು ಭರ್ತಿ ಮಾಡಿ ಮತಗಟ್ಟೆ ಅಧಿಕಾರಿಗೆ ನೀಡಿದರೆ ಆದಷ್ಟು ಶೀಘ್ರ ಗುರುತಿನ ಚೀಟಿ ನೀಡಲಾಗುವುದು ಎಂದು ಅವರು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಮತದಾನದ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದಾಗಿ ಅರ್ಹ ಅಭ್ಯರ್ಥಿಗಳು ಆಯ್ಕೆಯಾಗುವುದರಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ, ಚುನಾವಣಾ ಪ್ರಕ್ರಿಯೆಯಲ್ಲಿ ಎಲ್ಲರೂ ತಪ್ಪದೇ ಪಾಲ್ಗೊಳ್ಳಬೇಕು ಎಂದು ಅವರು ವಿನಂತಿಸಿದರು.

ಸ್ವೀಪ್ ಸಮಿತಿ ಅಧ್ಯಕ್ಷ ಎಚ್. ಹುಲಿರಾಜ್ ಮಾತನಾಡಿದರು. ಜಿಲ್ಲಾ ಜಂಟಿ ಕೃಷಿ ನಿರ್ದೇಶಕ  ಡಾ.ಆರ್.ಜಿ.  ಗೊಲ್ಲರ್, ಬಿಇಒ ಕೆ.ಸಿ. ಮಲ್ಲಿಕಾರ್ಜುನ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಭರ್ಮಪ್ಪ ಮೈಸೂರು, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಡಾ.ಎಚ್.ಕೆ. ರೇವಣಸಿದ್ದನಗೌಡ, ಜಿ. ಹನುಮಂತಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.