ADVERTISEMENT

ಮಸುಕಾದ ಮುಸಾಫಿರ್ ಖಾನ ಕಟ್ಟಡ

ಕೆ.ಎಸ್.ವೀರೇಶ್ ಪ್ರಸಾದ್
Published 25 ಮಾರ್ಚ್ 2012, 9:30 IST
Last Updated 25 ಮಾರ್ಚ್ 2012, 9:30 IST

ಸಂತೇಬೆನ್ನೂರಿನ ಪುಷ್ಕರಣಿಯ ಸೌಂದರ್ಯ, ತಾಂತ್ರಿಕ ಅಂಶಗಳು, ನಿರ್ಮಾಣ ಕೌಶಲ ರಾಜ್ಯಾದ್ಯಾಂತ ಚಿರಪರಿಚಿತ. ಇದರ ಪಶ್ಚಿಮಕ್ಕಿರುವ ಪುಷ್ಕರಣಿಗೆ ಮುಖ ಮಾಡಿ ನಿಂತ ಬೃಹತ್ `ಮುಸಾಫಿರ್ ಖಾನ~ ಅಷ್ಟೇ ಭವ್ಯ ಕಟ್ಟಡ. ಕನ್ನಡದಲ್ಲಿ `ಪ್ರವಾಸಿಗರ ತಂಗುದಾಣ~,

ಇತಿಹಾಸದಲ್ಲಿ ಇಲ್ಲಿನ ಪಾಳೆಗಾರರು ಅವನತಿ ಕಂಡ ನಂತರ ಅಂದಿನ ಡಿಸ್ಟ್ರಿಕ್ಟ್ ಬೋರ್ಡ್ ಆಡಳಿತ `ಮುಸಾಫಿರ್ ಖಾನ~ ಎಂದು ಮುಖ್ಯದ್ವಾರದ ಮೇಲ್ಬಾಗದಲ್ಲಿ ಕೆತ್ತಿಸಿದೆ.ಮುಸ್ಲಿಂ ವಾಸ್ತು ಶಿಲ್ಪದ ಈ ಭವ್ಯ ಕಟ್ಟದ ಉತ್ತರ-ದಕ್ಷಿಣವಾಗಿ 150 ಅಡಿ ಉದ್ದ ಪೂರ್ವ-ಪಶ್ಚಿಮವಾಗಿ 40 ಅಡಿ ಅಗಲ ಇದೆ.  ಪೂರ್ಣ ಗ್ರಾನೈಟ್ ಶಿಲೆಯಿಂದ ನಿರ್ಮಾಣಗೊಂಡಿದೆ.

ಇಂಡೋ-ಅರೇಬಿಕ್ ಶೈಲಿಯ 9 ಚೂಪಾದ ಕಮಾನು ದ್ವಾರಗಳಲ್ಲಿ ಮಧ್ಯದ ದ್ವಾರ ವಿಶಾಲವಾಗಿದೆ. ಮೇಲ್ಞಾವಣಿಗಾಗಿ ಚುತುರ್ಮುಖ ಬೃಹತ್ ಕಲಾತ್ಮಕ ಶಿಲಾ ಕಂಬಗಳನ್ನು ಒಳ ಭಾಗಗಳಲ್ಲಿ ಕಾಣ ಬಹುದು ಮೂರು ಅಡ್ಡಸಾಲು, ಎಂಟು ಕಂಬ ಸಾಲುಗಳಲ್ಲಿ ಕಮಾನು ಶೈಲಿಯ ಸುಂದರ ಜೋಡಣೆ ಜ್ಯಾಮಿತಿಯ ದೃಷ್ಟಿಯಿಂದ ಪರಿಪೂರ್ಣತೆ ಹೊಂದಿವೆ. ಬಿಜಾಪುರದಲ್ಲಿ ಇಂತಹದ್ದೇ ಕಟ್ಟಡ ಹೋಲುವ ಕಟ್ಟಡ ಇಂದಿಗೂ ಕಾಣ ಸಿಗುತ್ತವೆ.

ಮುಸಾಫಿರ್ ಖಾನ ಇತಿಹಾಸ

ಕ್ರಿ.ಶ. 1558 ರಲ್ಲಿ ಸಂತೇಬೆನ್ನೂರಿನ ನಾಯಕ ವಂಶದ ರಾಜ ಕೆಂಗ ಹನುಮಪ್ಪ ನಾಯಕ ಸುಂದರ ಪುಷ್ಕರಣಿ ಹಾಗೂ ಮನೆ ದೇವರು ರಾಮಚಂದ್ರ ದೇವಾಲಯ ನಿರ್ಮಿಸಿದನು. ಪುಷ್ಕರಣಿ ಮಧ್ಯದ ವಸಂತ ಮಂಟಪದಲ್ಲಿ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿ ತೆಪ್ಪೋತ್ಸವ ವಿಜೃಂಭಣೆಯಿಂದ ನೇರವೇರಿಸಲಾಗುತ್ತಿತ್ತು.
 
ಸುತ್ತ ಮಂಟಪಗಳಲ್ಲಿ ರಾಜ ಮನೆತನದವರು ಈ ದೃಶ್ಯ ವೀಕ್ಷಿಸುತ್ತಿದ್ದರು ಎಂದು ಕೈಫಿಯುತ್ತಿನಲ್ಲಿ ದಾಖಲಾಗಿದೆ. ಅದು ಪಾಳೆಗಾರರ ಉನ್ನತದ ಕಾಲ. ಇಂದಿನ ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಯಲ್ಲಿ ಅಂದಿನ ಪಾಳೆಗಾರರ ಆಳ್ವಿಕೆಗೆ ಸಂತೇಬೆನ್ನೂರು ರಾಜಧಾನಿ ಕೇಂದ್ರವಾಗಿತ್ತು.

ಬಿಜಾಪುರದ ಸುಲ್ತಾನನ ಸೈನ್ಯಾಧಿಕಾರಿ ರಣದುಲ್ಲಾಖಾನ್ ಕಾಲದಲಲ್ಲಿ ಅವನ ಅನುಚರರಾದ ಖಾನ್ ಖಾನ್, ಪತ್ತೇಖಾನ್, ಫರೀದ್ ಖಾನ್, ಸರ್ಜಾ ಖಾನ್ ಕ್ರಿ.ಶ. 1641-56 ರವರೆಗೆ ಈ ಮಸೀದಿ ನಿರ್ಮಾಣ ಕಾರ್ಯ ಕೈಗೊಂಡರು. ದೇವಸ್ಥಾನ ನಾಶ ಮಾಡಿ ಈ ಕಟ್ಟಡ ನಿರ್ಮಿಸಲಾಗಿದೆ  ಎನ್ನುತ್ತಾರೆ ಇತಿಹಾಸ ಸಂಶೋಧಕ ಸುಮತೀಂದ್ರ ನಾಡಿಗ್.

ಸುಮಾರು 4 ಶತಮಾನಗಳೇ ಕಳೆದರೂ ಕಟ್ಟಡ ಸಧೃಡವಾಗಿದೆ. ಮುಂಭಾಗದ ಎರಡು ಅಂಚಿನಲ್ಲಿ ಅಷ್ಟ ಮುಖಗಳ ಶಿಲೆಯ ಮಿನಾರ್‌ಗಳು ಕಮಲದಲ್ಲಿ ಅರಳಿದಂತೆ ಕೆತ್ತಿರುವುದು ಆಕರ್ಷಕವಾಗಿದೆ. ಅಲ್ಲಲ್ಲಿ ಹೂ ಬಳ್ಳಿಯಂತಹ ಉಬ್ಬು ಶಿಲ್ಪ ಗಮನ ಸೆಳೆಯುತ್ತವೆ.

ಅಂದಿನ ಉಕ್ಕಿನ ಸಲಾಕೆಯಿಂದಾದ ಮುಂಬಾಗಿಲುಗಳ ರಕ್ಷಣಾ ವ್ಯವಸ್ಥೆ ಸದೃಢವಾಗಿದೆ. ಪ್ರಾಚ್ಯವಸ್ತು ಇಲಾಖೆ ಕಮಾನು ದ್ವಾರಗಳಿಗೆ ಜಾಲರಿ ರಕ್ಷಣಾ ವ್ಯವಸ್ಥೆ ನಿರ್ಮಿಸಿ ಪ್ರವೇಶ ನಿರ್ಬಂಧಿಸಿದೆ. ಕೆಲಕಾಲ ಮಿಲಿಟರಿ ಕೋಠಿಯಾಗಿಯೂ ಉಪಯೋಗಿಸಲಾಗಿದೆ. ಜಾಲರಿ ಕಿಟಕಿಗಳ ಸೂಕ್ಷ ಕಲಾತ್ಮಕ ಕೆತ್ತನೆ ಆಕರ್ಷಣೀಯ.

ಈ ಕಟ್ಟಡ ಮೇಲಂತಸ್ತು ತಲುಪಲು ಬಲಭಾಗದ ಗೋಡೆಗೆ ತಾಗಿದಂತೆ ಕಿರಿದಾದ ಮೆಟ್ಟಿಲುಗಳ ಪ್ರವೇಶವಿದೆ. ಅಲ್ಲಿ ಮಕ್ಕಳಿಗೆ ಸೂಕ್ತ ತಡೆಗೋಡೆ ಇಲ್ಲದ ಕಾರಣ ಪವೇಶ ನಿಷೇಧಿಸಿದೆ.ಕಟ್ಟಡದ ಸುತ್ತ ಕೈದೋಟ ಬೆಳಸಲಾಗಿದೆ. ಬೇಸಿಗೆಯ ಸುಡು ಬಿಸಿಲಲ್ಲಿ ಕಟ್ಟಡದಲ್ಲಿ ತಂಪು ಹವೆಯ ಅನುಭವ ಅಹ್ಲಾದಕರ.

ಪ್ರಾಚ್ಯ ವಸ್ತು ಇಲಾಖೆ ಹೆಚ್ಚಿನ ಹಣ ಬಿಡುಗಡೆಗೊಳಿಸಿ ಇನ್ನೂ ಹೆಚ್ಚಿನ ಅಭಿವೃದ್ಧಿಗೊಳಿಸಬೇಕಾಗಿದೆ. ರಾತ್ರಿ ವೇಳೆ ಅನೈತಿಕ ಚಟುವಟಿಕೆ ಹೆಚ್ಚದಂತೆ ರಕ್ಷಣೆಗೆ ವಿದ್ಯುತ್ ದೀಪಗಳನ್ನು ಅಳವಡಿಸಬೇಕು ಎನ್ನುತ್ತಾರೆ ಗ್ರಾಮದ ವಿನಾಯಕ, ಶಿಕ್ಷಕ ಮಲ್ಲೇಶ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.