ADVERTISEMENT

ಮಾಗಿ ಚಳಿಯಲ್ಲಿ ಅರಳುತ್ತಿರುವ ಹಿಂಗಾರು ಬೆಳೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2011, 6:15 IST
Last Updated 18 ಜನವರಿ 2011, 6:15 IST

ಹರಪನಹಳ್ಳಿ:  ಆರಂಭದಲ್ಲಿ ಸ್ವಲ್ಪ ಕರುಣೆಯ ಕಣ್ಣು ಮಿಟುಕಿಸುತ್ತಿದ್ದ ಮಾಗಿಚಳಿ, ಕಳೆದೊಂದು ವಾರದಿಂದ ಸುರಿಯುತ್ತಿರುವ ಶೀತಕ್ಕೆ ಜನ ತತ್ತರಿಸುತ್ತಿದ್ದರೆ, ಭೂತಾಯಿಯ ಒಡಲಲ್ಲಿ ಬಿತ್ತನೆಯಾಗಿರುವ ಹಿಂಗಾರು ಹಂಗಾಮಿನ ಫಸಲು ಸಮೃದ್ಧವಾಗಿ ಅರಳುತ್ತಿವೆ.

ಪ್ರತಿವರ್ಷ ಹಿಂಗಾರು ಹಂಗಾಮಿನ ಬಿತ್ತನೆ ಸಮಯಕ್ಕೆ ಸರಿಯಾಗಿ ಮಳೆಯಾಗದ ಕಾರಣ ಬಿತ್ತನೆಯ ಪ್ರಮಾಣ ಕಡಿಮೆಯಾಗಿರುತ್ತಿತ್ತು. ಆದರೆ, ನವೆಂಬರ್‌ನಲ್ಲಿ ಸುರಿದ ಅಕಾಲಿಕ ಮಳೆ ಹಿಂಗಾರು ಬಿತ್ತನೆಗೆ ಭೂಮಿಯನ್ನು ಹದಗೊಳಿಸಿತು. ಜತೆಗೆ, ನೀರಾವರಿ ಪ್ರದೇಶದ ಬೋರ್‌ವೆಲ್‌ಗಳಲ್ಲಿ ಗಣನೀಯ ಪ್ರಮಾಣದಲ್ಲಿ ನೀರು ಚೇತರಿಸಿಕೊಂಡಿವೆ.

ಹೀಗಾಗಿ, ಕಳೆದ ಬಾರಿಗಿಂತ ಈ ವರ್ಷ ಮೂರ್ನಾಲು ಪಟ್ಟಿಗೂ ಅಧಿಕ ಬಿತ್ತನೆಯಾಗಿದೆ. ಕಳೆದ ವರ್ಷ ಕೇವಲ 3,268ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದ ಹಿಂಗಾರು, ಈ ಬಾರಿ 12,235 ಹೆಕ್ಟೇರ್ ವಿಸ್ತೀರ್ಣಕ್ಕೆ ವ್ಯಾಪಿಸಿಕೊಂಡಿದೆ.

ತಾಲ್ಲೂಕಿನ ಕಸಬಾ, ಚಿಗಟೇರಿ, ಅರಸೀಕೆರೆ ಹಾಗೂ ತೆಲಿಗಿ ಹೋಬಳಿಯಲ್ಲಿ ಹಿಂಗಾರು ಜೋಳ 3,100ಹೆಕ್ಟೇರ್, ಕಡಲೆ 2,020ಹೆಕ್ಟೇರ್, ಹುರುಳಿ 1,175, ಅಲಸಂದೆ 375, ಸೂರ್ಯಕಾಂತಿ 2,855, ಅವರೆ 140, ಬಿಟಿಹತ್ತಿ 940, ತಂಬಾಕು 490, ಗೋಧಿ 550, ಹೆಸರು 10 ಹಾಗೂ ಮೆಕ್ಕೆಜೋಳ 475ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ.

ಚಿಗಟೇರಿ ಹೋಬಳಿಯಲ್ಲಿ ಪ್ರಮುಖವಾಗಿ ತಂಬಾಕು, ಕಡಲೆ ಹಾಗೂ ಬಿಳಿಜೋಳ ಹೆಚ್ಚಾಗಿ ಬಿತ್ತನೆಯಾಗಿದೆ. ಎರೆಮಣ್ಣಿನಿಂದ ಕೂಡಿರುವ ಈ ಪ್ರದೇಶದಲ್ಲಿ ಹಿಂಗಾರು ಒಕ್ಕಲುತನ ಮುಂಗಾರಿನ ಅಬ್ಬರದಷ್ಟೆ ಜೋರಾಗಿರುತ್ತದೆ. ಪ್ರತಿವರ್ಷ ಮಾಗಿಚಳಿಯೊಂದಿಗೆ ಸುರಿಯುತ್ತಿದ್ದ ಮಂಜಿನಹನಿ (ಇಬ್ಬನಿ) ಪರಿಣಾಮ ಹಿಂಗಾರು ಬೆಳೆಗೆ ರೋಗಬಾಧೆ ತಗುಲಿ, ಇಳುವರಿಯಲ್ಲಿ ಕುಂಠಿತಗೊಂಡು ರೈತರನ್ನು ಕಂಗಡೆಸುತ್ತಿದ್ದವು. ಈ ಬಾರಿ ಡಿಸೆಂಬರ್ ಮಾಹೆಯಿಂದ ಹೆಚ್ಚುಕಡಿಮೆ ಒಂದೇ ಸಮನೆ ಚಳಿ ಸುರಿಯುತ್ತಿರುವುದರಿಂದ ಹಿಂಗಾರು ಹಂಗಾಮಿನ ಪೈರು ಸಮೃದ್ಧವಾಗಿ ರೈತರ ಕೈಹಿಡಿದಿವೆ. ಚಳಿ ಸುರಿದಷ್ಟು ಬೆಳೆ ನಳನಳಿಸುತ್ತದೆ ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕ ಟಿ. ತಿಪ್ಪೇಸ್ವಾಮಿ.

ಕಡಲೆ ಹಾಗೂ ಸೂರ್ಯಕಾಂತಿ ಬೆಳೆಗೆ ಅಲ್ಲಲ್ಲಿಕಾಯಿಕೊರಕ ಹಾಗೂ ಕಾಂಡಕೊರಕ ಹುಳುಬಾಧೆ ಕಂಡುಬಂದಿದೆ. ಇಲಾಖೆಯಲ್ಲಿ ದೊರಕುವ ರಿಯಾಯಿತಿ ದರದ ಮಿನಾಶಕ ಪಡೆದು ಹತೋಟಿ ಕ್ರಮ ಅನುಸರಿಸುವಂತೆ ಅವರು ಸೂಚಿಸುತ್ತಾರೆ. ಒಟ್ಟಾರೆ ಕೊರೆವ ಮಾಗಿಚಳಿಗೆ ನಡುಗುವ ರೈತನ ಮುಖದಲ್ಲಿ ಹಿಂಗಾರು ಹಂಗಾಮಿನ ಸಮೃದ್ಧಿ ಫಸಲು ಸಂತಸ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.