ದಾವಣಗೆರೆ: ಇಂದು ಶಿಕ್ಷಣ, ಉದ್ಯೋಗ, ಆರೋಗ್ಯ, ನೀರು, ಭೂಮಿ ಎಲ್ಲವೂ ಮಾಫಿಯಾಗಳ ಹಿಡಿತದಲ್ಲಿವೆ. ಈ ಮಾಫಿಯಾಗಳ ಬಿಗಿಹಿಡಿತದಿಂದ ಬಿಡಿಸಿಕೊಳ್ಳಲು ಸಮ ಸಮಾಜ ನಿರ್ಮಾಣಕ್ಕೆ ಸಂಘಟಿತ ಹೋರಾಟ ವೊಂದೇ ಮಾರ್ಗ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಸಂಚಾಲಕ ನೂರ್ ಶ್ರೀಧರ್ ಪ್ರತಿಪಾದಿಸಿದರು.
ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ನಗರದ ಜಯದೇವ ವೃತ್ತದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರಚಾರಾಂದೋಲನ ಸಭೆಯಲ್ಲಿ ಅವರು ಮಾತನಾಡಿದರು.
ಹಿಂದೆ ಮಾಫಿಯಾಗಳ ಹಿಡಿತ ಗೋಚರವಾಗುತ್ತಿರಲಿಲ್ಲ. ಈಗ ಮಾಫಿಯಾಗಳು ಮುಖ್ಯವಾಹಿನಿಗೆ ಬಂದು ನಿಂತಿದ್ದು, ಇಡೀ ವ್ಯವಸ್ಥೆಯನ್ನೇ ನಿಯಂತ್ರಿಸುತ್ತಿವೆ. ಎಲ್ಲರಿಗೂ ಸಿಗಬೇಕಾದ ಶಿಕ್ಷಣ, ಉದ್ಯೋಗ, ಆರೋಗ್ಯ, ನೀರು, ಭೂಮಿ ಇಂದು ಕೆಲವೇ ಜನರ ಕೈ ಸೇರುತ್ತಿರುವುದು ಅಪಾಯಕಾರಿ ಸಂಗತಿ ಎಂದು ಆತಂಕ ವ್ಯಕ್ತಪಡಿಸಿದರು.
ಭೂಮಿ ಇಂದು ಕೇವಲ ರೈತರ ಪ್ರಶ್ನೆಯಾಗಿ ಉಳಿದಿಲ್ಲ. ಬಂಡವಾಳ ಶಾಹಿಗೆ ಅದೊಂದು ಹೂಡಿಕೆಯ ಮಾರ್ಗವಾಗಿ, ರಾಜಕಾರಣಿಗಳಿಗೆ ಸಂಪತ್ತಿನ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ವಿಶ್ಲೇಷಿಸಿದರು.
‘ಉಳುಮೆ ಮಾಡಿ, ಆ ಜಾಗದಲ್ಲೇ ವಾಸ ಮಾಡುವ ರೈತನಿಗೆ ಇದುವರೆಗೂ ಭೂಮಿಯ ಒಡೆತನ ಸಿಕ್ಕಿಲ್ಲ. ರಾಜ್ಯದಲ್ಲಿ ಹಕ್ಕುಪತ್ರಕ್ಕಾಗಿ ಸಲ್ಲಿಸಿದ್ದ 4 ಲಕ್ಷ ಬಗರ್‌ಹುಕುಂ ಅರ್ಜಿಗಳು ಇನ್ನೂ ವಿಲೇಯಾಗಿಲ್ಲ. ವಿಲೇ ಮಾಡುವುದಕ್ಕಾಗಿಯೇ ಇರುವ ಭೂನ್ಯಾಯ ಮಂಡಳಿ ಕೆಲಸ ಮಾಡುತ್ತಿಲ್ಲ. ಸರ್ಕಾರಕ್ಕೆ ಈ ಬಗ್ಗೆ ಮಾಹಿತಿ ಇದ್ದು ಸುಮ್ಮನೆ ಕುಳಿತಿದೆ’ ಎಂದು ಆರೋಪಿಸಿದರು.
ರಾಜ್ಯದಲ್ಲಿ ಸಾಕಷ್ಟು ಸರ್ಕಾರಿ ಭೂಮಿ ಒತ್ತುವರಿ ಆಗಿದೆ. ಈ ಬಗ್ಗೆ ವರದಿ ನೀಡಲು ಸರ್ಕಾರವೇ ನೇಮಿಸಿದ್ದ ಎ.ಟಿ.ರಾಮಸ್ವಾಮಿ ಹಾಗೂ ಬಾಲ ಸುಬ್ರಹ್ಮಣ್ಯನ್ ಸಮಿತಿಗಳು ವರದಿ ನೀಡಿ ಹಲವು ವರ್ಷಗಳು ಕಳೆದಿವೆ. ತಪ್ಪಿತಸ್ಥರ ವಿರುದ್ಧ ಇದುವರೆಗೂ ಕ್ರಮ ಜರುಗಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಗಸ್ಟ್ 20ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಕಳೆದ ಜುಲೈ 20ರಂದು ಕರೆ ನೀಡಿದ್ದ ಜಿಲ್ಲಾ ಕೇಂದ್ರಗಳಲ್ಲಿನ ಹೋರಾಟಕ್ಕೆ ಉತ್ತಮ ಯಶಸ್ಸು ಸಿಕ್ಕಿದೆ ಎಂದು ಹೇಳಿದರು.
ಆಗಸ್ಟ್ 9ರಂದೇ ಪ್ರಚಾ ರಾಂದೋಲನ ಸಭೆ ಆರಂಭಿಸಿದ್ದಕ್ಕೂ ವಿಶೇಷ ಕಾರಣವಿದ್ದು, ಕ್ವಿಟ್ ಇಂಡಿಯಾ ಎಂದು ಬ್ರಿಟಿಷ್‌ರಿಗೆ ಭಾರತ ಕರೆ ಕೊಟ್ಟ ದಿನ ಇದು ಎಂದು ಅವರು ಸ್ಮರಿಸಿದರು. ಅರಸು ಪರಂಪರೆಯ ರಾಜಕಾರಣವನ್ನು ಮುಂದುವರಿ ಸುತ್ತಿರುವುದಾಗಿ ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ
ಅವರಿಗೆ ಬದ್ಧತೆ ಇದ್ದರೆ ಭೂಮಿ ಹೊಂದಿದವರಿಗೆ ಹಕ್ಕುಪತ್ರ ನೀಡಬೇಕು. ಇಲ್ಲದಿದ್ದರೆ ಹೋರಾಟ ತಾರ್ಕಿಕ ಅಂತ್ಯ ಕಾಣುವವರೆಗೂ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಹೊನ್ನೂರು ಮುನಿಯಪ್ಪ ಮಾತನಾಡಿ, ದಾವಣಗೆರೆಯಲ್ಲೂ ಭೂ ಮಾಫಿಯಾ ಹೆಚ್ಚಾಗಿದೆ. ಸರ್ಕಾರಿ ಭೂಮಿ ಉಳ್ಳವರ ಪಾಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರೈತ ಸಂಘಟನೆಗಳ ಸಂಚಾಲಕ ರವಿಕುಮಾರ್ ಮಾತನಾಡಿ, ಕೈಗಾರಿಕೆ ಸ್ಥಾಪನೆ ಹೆಸರಿನಲ್ಲಿ ಸಬ್ಸಿಡಿ ದರದಲ್ಲಿ ಸರ್ಕಾರದಿಂದ ನಿವೇಶನ ಪಡೆದುಕೊಳ್ಳುವ ಉದ್ಯಮಿಗಳು ಆ ನಿವೇಶನವನ್ನು ಖಾಲಿ ಬಿಟ್ಟು ಹಲವು ವರ್ಷಗಳ ನಂತರ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದಾರೆ. ಇದರಿಂದ ನಿಜವಾದ ಭೂರಹಿತರಿಗೆ ಭೂಮಿ ಸಿಗುತ್ತಿಲ್ಲ ಎಂದು
ದೂರಿದರು.
ಸಭೆಯಲ್ಲಿ ರೈತ ಸಂಘ ಹಾಗೂ ಹಸಿರುಸೇನೆ ದಾವಣಗೆರೆ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಾಪುರದ ದೇವರಾಜ್, ವಕೀಲ ಅನಿಷ್ ಪಾಶ ಮಾತನಾಡಿದರು. ವಿವಿಧ
ಸಂಘಟನೆಗಳ ಮುಖಂಡರಾದ ಕರಿಬಸಪ್ಪ, ಜಮೀನಾ ಖಾನಂ, ಗೋಪಿ ನಾಯ್ಕ, ಕೆಂಪರಾಜು, ಚಿಕ್ಕನಹಳ್ಳಿ ಮಲ್ಲೇಶಪ್ಪ, ಈಚಘಟ್ಟ ರುದ್ರೇಶ್, ಅಂದನೂರು ಮಂಜುನಾಥ್, ನಾಗರಾಜ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.