ADVERTISEMENT

ಮಾಸಾಶನ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2011, 5:00 IST
Last Updated 18 ಅಕ್ಟೋಬರ್ 2011, 5:00 IST

ಹರಪನಹಳ್ಳಿ: ಅಂಗವಿಕಲ, ವಯೋವೃದ್ಧ ಹಾಗೂ ವಿಧವೆಯರಿಗೆ ನೆರವು ಕಲ್ಪಿಸುವ ದೃಷ್ಟಿಯಿಂದ ಜಾರಿಗೊಳಿಸಲಾದ ವಿವಿಧ ಯೋಜನೆಗಳ ಮಾಸಾಶನವನ್ನು ಕಳೆದ ಏಳೆಂಟು ತಿಂಗಳಿನಿಂದಲೂ ಬಿಡುಗಡೆ ಮಾಡದೇ, ಸರ್ಕಾರ ಫಲಾನುಭವಿಗಳಿಗೆ ವಂಚನೆ ಮಾಡುತ್ತಿದೆ ಎಂದು ಆರೋಪಿಸಿ ಅಖಿಲ ಭಾರತ ಕೃಷಿ ಕಾರ್ಮಿಕರ ಸಂಘಟನೆ (ಎಐಎಎಲ್‌ಎ) ಹಾಗೂ ಅಖಿಲ ಭಾರತ ಕಮ್ಯುನಿಸ್ಟ್ (ಸಿಪಿಐ-ಎಂಎಲ್) ಪಕ್ಷದ ನೇತೃತ್ವದಲ್ಲಿ ಫಲಾನುಭವಿಗಳು ಸೋಮವಾರ ಪಟ್ಟಣದ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪಕ್ಷದ ರಾಜ್ಯ ಘಟಕದ ಕಾರ್ಯದರ್ಶಿ ಇದ್ಲಿ ರಾಮಪ್ಪ ಮಾತನಾಡಿ, ಕುಟುಂಬ ಹಾಗೂ ಸಮಾಜದ ಅನಾದರಕ್ಕೆ ಒಳಗಾಗದ ನಿರ್ಗತಿಕ ವಿಧವೆ, ಅಂಗವಿಕಲ ಹಾಗೂ ವಯೋವೃದ್ಧರು, ಮಾಸಾಶನದಿಂದಲೇ ಸ್ವಾವಲಂಬಿಯಾಗಿ ಬದುಕುಕಟ್ಟಿಕೊಳ್ಳಲು ಮುಂದಾಗಿದ್ದರು.

ಆದರೆ, ಅಧಿಕಾರಿಗಳ ನಿರ್ಲಕ್ಷ್ಯತೆಯಿಂದಾಗಿ ಕಳೆದ ಏಳೆಂಟು ತಿಂಗಳಿನಿಂದಲೂ ಮಾಸಾಶನ ಬಿಡುಗಡೆಯಾಗದೇ, ಇರುವುದರಿಂದ ಬದುಕಿನ ಮುಸ್ಸಂಜೆಯಲ್ಲಿರುವ ಫಲಾನುಭವಿಗಳು ಪರದಾಟ ನಡೆಸಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ದೂರಿದರು.

ಮಂತ್ರಿ ಮಹೋದಯರು ಹಾಗೂ ಅಧಿಕಾರಿಗಳ ವಿವಿಧ ಬಾಬ್ತುಗಳಿಗೆ ಸಾವಿರಾರು ಕೋಟಿ ರೂಗಳನ್ನು ವ್ಯಯ ಮಾಡುತ್ತಿರುವ ಸರ್ಕಾರ, ನಿರ್ಗತಿಕ ಕುಟುಂಬಗಳ ಫಲಾನುಭವಿಗಳ ಮಾಸಾಶನ ಬಿಡುಗಡೆ ಮಾಡುವಲ್ಲಿ ತಾರತಮ್ಯ ನೀತಿ ಅನುಸರಿಸುವ ಮೂಲಕ, ಅವರು ತಿನ್ನುವ ಅನ್ನಕ್ಕೂ ಸಂಚಕಾರ ತಂದಿದೆ ಎಂದು ಆರೋಪಿಸಿದರು.

ಮಾನವೀಯತೆಯ ಆಧಾರದ ಮೇಲೆ ಕೂಡಲೇ ಅಂಗವಿಕಲ, ವಿಧವೆಯರ ಹಾಗೂ ವಯೋವೃದ್ಧರ ಮಾಸಾಶನ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

ನಂತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಉಪ ವಿಭಾಗಾಧಿಕಾರಿ(ಪ್ರೊಬೇಷನ್) ಬಿ. ಅನುರಾಧಾ ಆಹವಾಲು ಸ್ವೀಕರಿಸಿ, ಕೂಡಲೇ ಮಾಸಾಶನ ಬಿಡುಗಡೆಗೆ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ಸಂಘಟನೆಗಳ ಮುಖಂಡರಾದ ದೊಡ್ಡಮನಿ ಪ್ರಸಾದ್, ಕರಡಿದುರ್ಗದ ಚೌಡಪ್ಪ, ಸಂದೇರ್ ಪರಶುರಾಮ್, ಕೆ. ಮೈಲಪ್ಪ, ಫಲಾನುಭವಿಗಳಾದ ಹೊಂಬಳಗಟ್ಟಿ ಇಬ್ರಾಹಿಂ ಸಾಹೇಬ್, ಗೋವೇರಹಳ್ಳಿ ಗುರುಸಿದ್ದಯ್ಯ, ಗುಂಡಗತ್ತಿ ಹನುಮಕ್ಕಾ, ಕಂಚಿಕೆರೆ ಸಣ್ಣನಾಗಮ್ಮ, ಸಿದ್ದಮ್ಮ, ಇದ್ಲಿ ತಿಮ್ಮಣ್ಣ ಹೊಸಕೋಟೆ ನೀಲಕಂಠಪ್ಪ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.