ADVERTISEMENT

ಮಾಸಾಶನ ರದ್ದು; ಅಧಿಕಾರಿಗಳಿಗೆ ತರಾಟೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 4:25 IST
Last Updated 18 ಅಕ್ಟೋಬರ್ 2012, 4:25 IST
ಮಾಸಾಶನ ರದ್ದು; ಅಧಿಕಾರಿಗಳಿಗೆ ತರಾಟೆ
ಮಾಸಾಶನ ರದ್ದು; ಅಧಿಕಾರಿಗಳಿಗೆ ತರಾಟೆ   

ದಾವಣಗೆರೆ: ಮಾಸಾಶನ ಅಂದರೆ ಭಿಕ್ಷೆ ಅಲ್ಲ. ಅದು ವ್ಯಕ್ತಿಯ ಹಕ್ಕು...  ಹೀಗೆಂದು ಗುಡುಗಿದವರು ಅಂಗವಿಕಲ ವ್ಯಕ್ತಿಗಳ ರಾಜ್ಯ ಆಯುಕ್ತ ಕೆ.ವಿ. ರಾಜಣ್ಣ.

ಜಿಲ್ಲಾ ಪಂಚಾಯ್ತಿ ಕಚೇರಿಯಲ್ಲಿ ಬುಧವಾರ ಜಿಲ್ಲೆಯ ಅಂಗವಿಕಲರ ಕಲ್ಯಾಣ ಕಾರ್ಯಕ್ರಮಗಳ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಸೂಕ್ತ ಮಾಹಿತಿ ನೀಡದೇ 4,334 ಅಂಗವಿಕಲರ ಮಾಸಾಶನ ರದ್ದುಗೊಳಿಸಿದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಅವರು, ಅಂಗವಿಕಲರನ್ನು ದಾಖಲೆ ಪರಿಶೀಲನೆ ಹೆಸರಿನಲ್ಲಿ ಅಲೆದಾಡಿಸಬಾರದು. ಮಾನಸಿಕ ಅಸ್ವಸ್ಥರಿಗೆ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಸೂಚಿಸಿದರು.

ಚಿಕಿತ್ಸೆಗೆ ಸೂಚನೆ: ಜಿಲ್ಲೆಯಲ್ಲಿ ಮಾನಸಿಕ ತಜ್ಞರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಆದ್ದರಿಂದ ವಾರಕ್ಕೊಮ್ಮೆ ತಾಲ್ಲೂಕು ಕೇಂದ್ರಗಳಲ್ಲಿ ಮಾನಸಿಕ ಚಿಕಿತ್ಸಾ ಶಿಬಿರ ನಡೆಸಬೇಕು. ಎಲ್ಲ ಇಲಾಖೆಗಳೂ ಅಂಗವಿಕಲರ ಕಲ್ಯಾಣ ಸಂಬಂಧಿಸಿದಂತೆ ಹಮ್ಮಿಕೊಂಡ ಕಾರ್ಯಕ್ರಮಗಳ ವರದಿಯನ್ನು ಒಂದು ವಾರದ ಒಳಗೆ ನೀಡಬೇಕು.

ಅವರಿಗಾಗಿ ಇರುವ ಸೌಲಭ್ಯಗಳ ಬಗ್ಗೆ ಪತ್ರಿಕೆಗಳಲ್ಲಿ ಎಷ್ಟು ಪ್ರಚಾರವಾಗಿದೆ ಎಂಬ ಮಾಹಿತಿಯನ್ನು ವಾರ್ತಾಧಿಕಾರಿ ನೀಡಬೇಕು. ಮಾನಸಿಕ ಅಸ್ವಸ್ಥರು ಗೃಹಬಂಧನದಲ್ಲಿರುವುದು, ತೊಂದರೆಗೆ ಒಳಗಾಗಿರುವುದು ಕಂಡುಬಂದಲ್ಲಿ ಸೂಕ್ತ ಗಮನಹಸುವಂತೆ ಸೂಚಿಸಿದರು.

ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಿ: ಅಂಗವಿಕಲತೆ ಬಗ್ಗೆ ನಕಲಿ ಪ್ರಮಾಣಪತ್ರ ನೀಡುವ ವೈದ್ಯರ ಬಗ್ಗೆ ಕ್ರಮಕ್ಕೆ ಏಕೆ ಶಿಫಾರಸು ಮಾಡಿಲ್ಲ ಎಂದು ತಹಶೀಲ್ದಾರರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಎರಡನೇ ಬಾರಿ ತಪಾಸಣೆಗೆ ಕಳುಹಿಸಿದರೂ ಅದೇ ಪ್ರಮಾಣಪತ್ರ ಕೊಡುತ್ತಾರೆ ಎಂದು ತಹಶೀಲ್ದಾರ್ ಡಾ.ಬಿ.ಆರ್. ಹರೀಶ್ ಸ್ಪಷ್ಟನೆ ನೀಡಿದರೂ ರಾಜಣ್ಣ ಒಪ್ಪಲಿಲ್ಲ.

ಮಾಸಾಶನ ದುರುಪಯೋಗ ತಡೆಯಲು ಅಂಚೆ ಇಲಾಖೆ ಬದಲಿಗೆ ಬ್ಯಾಂಕ್ ಖಾತೆಗೆ ನೇರವಾಗಿ ಪಾವತಿಸಬೇಕು. ಶೂನ್ಯ ಖಾತೆ ತೆರೆಯಲು ಸರ್ಕಾರೇತರ ಸಂಘಟನೆಗಳು  ನೆರವಾಗಬೇಕು ಎಂದು ರಾಜಣ್ಣ ಸೂಚಿಸಿದರು.

ಇದೇ ವೇಳೆ ಅಂಗವಿಕಲರ ಅಭಿವೃದ್ಧಿ ಸಂಬಂಧಿಸಿ ಜಗಳೂರು ತಾಲ್ಲೂಕು ಪಂಚಾಯ್ತಿ ಸಿದ್ಧಪಡಿಸಿದ ಯೋಜನೆಗೆ ರಾಜಣ್ಣ ಶ್ಲಾಘಿಸಿದರು.

ಉದ್ಯೋಗಕ್ಕೆ ಸಲಹೆ: ಉದ್ಯಮಿ, ಕೈಗಾರಿಕೆಗಳ ಮಾಲೀಕರು ಅಂಗವಿಕಲರಿಗೆ ಉದ್ಯೋಗ ಅವಕಾಶ ನೀಡಲು ವ್ಯವಸ್ಥೆ ಮಾಡಬೇಕು. ಕೃಷಿ, ತೋಟಗಾರಿಕೆ, ಜಲಸಂಪನ್ಮೂಲ ಇಲಾಖೆ, ಹೈನುಗಾರಿಕೆ ಇಲಾಖೆ ಮೂಲಕ ಅಂಗವಿಕಲರಿಗೆ ಸೂಕ್ತ ಸಹಾಯ ಒದಗಿಸುವ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿಸಬೇಕು ಎಂದು ಹೇಳಿದರು.

ಕೇವಲ ಅಂಗವಿಕಲರ ದಿನಾಚರಣೆಯಂದೇ ಕ್ರೀಡಾಕೂಟ ಬೇಡ. ಜಿಲ್ಲಾಮಟ್ಟದ ಬದಲು ತಾಲ್ಲೂಕುಮಟ್ಟದಲ್ಲೇ ಆಯೋಜಿಸಿ. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಅದಕ್ಕೆ ನೆರವು ನೀಡಬೇಕು ಎಂದರು.

ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಸುಚೇತಾ ನೆಲವಿಗಿ ಮಾತನಾಡಿ, ಈ ಕ್ರೀಡಾಕೂಟಕ್ಕೆ ಇಲಾಖೆಯಿಂದ ರೂ 66 ಸಾವಿರ ನೆರವು ನೀಡಲಾಗುತ್ತಿದೆ ಎಂದರು.

ಸೌಲಭ್ಯ ವಂಚನೆ ಆಗಿದ್ದಲ್ಲಿ ಸಂಬಂಧಿತ ಅಧಿಕಾರಿಗಳು ನ್ಯಾಯಾಲಯದ ಮುಂದೆ ನಿಲ್ಲಬೇಕಾಗುತ್ತದೆ. ಏನೇ ತೊಂದರೆ ಆದರೂ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸೌಲಭ್ಯ ಒದಗಿಸುವಲ್ಲಿ ಪೂರ್ವಾಗ್ರಹ ಬೇಡ. ಅಂಗವಿಕಲರನ್ನು ಗೌರವದಿಂದ ಕಾಣಬೇಕು. ತಾಲ್ಲೂಕುಮಟ್ಟದಲ್ಲಿ ತಿಂಗಳಿಗೊಮ್ಮೆ ಸಭೆ ನಡೆಸಬೇಕು ಎಂದು ಸೂಚಿಸಿದರು. ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ, ಜಿ.ಪಂ. ಸಿಇಒ ಎ.ಬಿ. ಹೇಮಚಂದ್ರ ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.