ADVERTISEMENT

ಮುಖ್ಯಶಿಕ್ಷಕರ ವರ್ತನೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2013, 4:27 IST
Last Updated 12 ಸೆಪ್ಟೆಂಬರ್ 2013, 4:27 IST

ಮಲೇಬೆನ್ನೂರು: ಸಮೀಪದ ಉಕ್ಕಡಗಾತ್ರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕನ ವರ್ತನೆ ಖಂಡಿಸಿ ಬುಧವಾರ ಪೋಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಬಡ್ತಿ ಮುಖ್ಯಶಿಕ್ಷಕ ಎಚ್‌.ದೇವಪ್ಪ ಶಾಲೆಗೆ ಬಂದ ನಂತರ ವಾತಾವರಣ ಬದಲಾಗಿದೆ.ಪರಿಸರ ಶಿಕ್ಷಣದ ಒಂದು ಪಾಠ ಕೂಡ ಮಾಡಿಲ್ಲ, ನಲಿಕಲಿ ಅವಧಿಯಲ್ಲಿ ಬ್ರೆಕ್‌ ಡ್ಯಾನ್ಸ್‌ ಮಾಡಿಸಿ ಆನಂದಿಸುತ್ತಾರೆ. ವಿರೋಧಿಸಿದ ಮಕ್ಕಳ ತಲೆಗೆ ಬೆತ್ತದ ಹೊಡೆತ ಖಾಯಂ. 

ಬಿಸಿಯೂಟಕ್ಕೆ ಹುಳು ಇರುವ, ಹೀರೆ, ಬೆಂಡೆ, ಬದನೆಕಾಯಿ, ಕೊಳೆತ ಸೊಪ್ಪು  ತರುತ್ತಾರೆ. ಅನ್ನದಲ್ಲಿ ಕಲ್ಲು, ಗಾಜಿನ ತುಂಡು, ಬಾಲದಹುಳು ಇರುತ್ತದೆ. ಆಹಾರ ತಯಾರಕರು ಧಾನ್ಯ ಸ್ವಚ್ಛಗೊಳಿಸುವುದಿಲ್ಲ. ಪ್ರತಿನಿತ್ಯ ನೀರು ಸಾರು ಊಟ ಮಾಡಬೇಕಾಗಿದೆ ಎಂದು ಮಕ್ಕಳು ದೂರಿದರು. 

ಗ್ರಾಮಸ್ಥರ ದೂರು: ಮುಖ್ಯಶಿಕ್ಷಕ ಶಾಲೆಗೂ ಸರಿಯಾಗಿ ಬರುವುದಿಲ್ಲ. ಮುಂಚಿತವಾಗಿ ಹಾಜರಿ ಪುಸ್ತಕದಲ್ಲಿ ಸಹಿ ಮಾಡಿ ಹೋಗಿರುತ್ತಾರೆ. ಪಾಠ ಪ್ರವಚನ ಕುಂಠಿತಗೊಂಡಿವೆ. ಬಿಸಿಯೂಟದ ಗುಣಮಟ್ಟ ಕಳಪೆಯಾಗಿದೆ.

ಅವರ ಅವಧಿಯಲ್ಲಿ ನಿರ್ಮಿಸಿದ ಶಾಲೆ, ಶೌಚಾಲಯ ಕಟ್ಟಡ ಕಳಪೆಯಾಗಿದೆ. ಟೈಲ್ಸ್‌ ಬೇಸಿನ್‌, ಕನ್ನಡಿ, ನಲ್ಲಿ ಸಂಪರ್ಕ ಹೊಂದಿಸಿಲ್ಲ. ಹಣ ಮಾತ್ರ ಖರ್ಚಾಗಿದೆ. ಶೌಚಾಲಯ ಗಬ್ಬು ನಾರುತ್ತಿದೆ, ಶಾಲೆ ಉಗ್ರಾಣವಾಗಿವೆ

ಗ್ರಾಮಸ್ಥರು ` 40 ಸಾವಿರ  ಖರ್ಚು ಮಾಡಿ ರಿಪೇರಿ ಮಾಡಿಸಿದ  4 ಗಣಕಯಂತ್ರಗಳು ಕೆಲಸ ಮಾಡುತ್ತಿಲ್ಲ ಎಂದು ತೋರಿಸಿದರು.
ಒಮ್ಮೆಯೂ ಎಸ್‌ಡಿಎಂಸಿ ಸಭೆ ಕರೆದಿಲ್ಲ ಎಂದು ಹಿಂದಿನ ಅಧ್ಯಕ್ಷರು ರಾಜೀನಾಮೆ ನೀಡಿದ್ದಾರೆ ಎಂದು ಉಪಸ್ಥಿತರು ಆರೋಪಿಸಿದರು.

ಬೀಗ ಜಡಿಯಲು ಯತ್ನ: ಶಿಕ್ಷಣ ಇಲಾಖೆ ಅಧಿಕಾರಿಗಳು ಬಾರದ ಪ್ರಯುಕ್ತ ಶಾಲೆಗೆ ಬೀಗ ಹಾಕಲು ಯತ್ನಿಸಿದಾಗ ಗ್ರಾಮದ ಹಿರಿಯರು ಮನವೊಲಿಸಿ ತಡೆ ಒಡ್ಡಿದರು. ಪಿಎಸ್‌ಐ ಉಮೇಶ್‌ಬಾಬು ಆಗಮಿಸಿ ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಸರ್ಕಾರಿ ಕಚೇರಿಗೆ ಬೀಗಹಾಕಿದರೆ ಕಾನೂನು ರೀತ್ಯ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿ ಶಿಕ್ಷಣ ಇಲಾಖೆಯೊಂದಿಗೆ ಸಮಸ್ಯೆ ಪರಿಹರಿಸಿಕೊಳ್ಳಿ ಎಂದರು.

ಗ್ರಾಮ ಪಂಚಾಯ್ತಿ ಸದಸ್ಯ ಶಂಕರಪ್ಪ, ರೆಡ್ಡೆಪ್ಪ, ಕುಬೇರ, ಸುರೇಶ್‌, ಸಂಜೀವರೆಡ್ಡಿ, ಹನುಮಂತಪ್ಪ, ಗದ್ದಿಗೆಪ್ಪ, ಸಿದ್ದೇಶ್‌, ರುದ್ರಗೌಡ, ಚಿಕ್ಕಪ್ಪ, ಚಂದ್ರಪ್ಪ, ಶಿವರೆಡ್ಡಿ, ರವೀಂದ್ರ, ಪರಮೇಶ್‌, ಸಿದ್ಲಿಂಗಪ್ಪ, ಬಸವರಾಜ್‌, ನಾಗರಾಜ್‌, ಚಂದ್ರಶೇಖರ್‌, ಪೋಷಕರು ಹಾಗೂ ಮಕ್ಕಳು ಇದ್ದರು.

ಮುಖ್ಯ ಶಿಕ್ಷಕ ಅಮಾನತ್ತು: ಆರೋಪಗಳ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಮುಖ್ಯಶಿಕ್ಷಕನನ್ನು ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT