ADVERTISEMENT

ಯುಪಿಎನಿಂದ ಕೆಟ್ಟ ಆಡಳಿತ: ರವೀಂದ್ರನಾಥ್

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2014, 5:25 IST
Last Updated 11 ಮಾರ್ಚ್ 2014, 5:25 IST

ಚನ್ನಗಿರಿ: ಕೇಂದ್ರದಲ್ಲಿ 55 ವರ್ಷ ಕಾಂಗ್ರೆಸ್‌ ಆಡಳಿತ ನಡೆಸಿದ್ದು, ಅದರಲ್ಲೂ 10 ವರ್ಷಗಳ ಅವಧಿಯ ಯುಪಿಎ ಸರ್ಕಾರದ ಆಡಳಿತ ಅತ್ಯಂತ ಕೆಟ್ಟದಾಗಿದ್ದು, ದೇಶದ ಜನರು ಬದಲಾವಣೆ ಬಯಸಿದ್ದಾರೆ. ಕೇಂದ್ರದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂದು ಮಾಜಿ ಸಚಿವ ಎಸ್‌.ಎ.ರವೀಂದ್ರನಾಥ್‌ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಹಾಲಸ್ವಾಮಿ ಸಮುದಾಯ ಭವನದಲ್ಲಿ ಸೋಮವಾರ ನಡೆದ ತಾಲ್ಲೂಕು ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶ ಹಾಗೂ ರಾಜ್ಯದ ಸ್ಥಿತಿ ತುಂಬಾ ಹದಗೆಟ್ಟಿದೆ. ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ಕುಂಠಿತಗೊಂಡಿವೆ ಎಂದು ಆರೋಪಿಸಿದರು.

ಸಂಸತ್ ಸದಸ್ಯ ಜಿ.ಎಂ.ಸಿದ್ದೇಶ್ವರ ಮಾತನಾಡಿ, ‘ಹಿಂದಿನಿಂದಲೂ ಕಾಂಗ್ರೆಸ್‌ನವರು ನನ್ನ ಬಗ್ಗೆ ಅಪಪ್ರಚಾರ  ಮಾಡುತ್ತಾ ಬಂದಿದ್ದಾರೆ. ಅಪ್ಪನಿಗೆ ಸಚಿವ ಸ್ಥಾನ ಹಾಗೂ ಮಗ ಶಾಸಕ ಆಗಿದ್ದರೂ, ಬೇರೆಯವರಿಗೆ ಅವಕಾಶ ಮಾಡಿಕೊಡದೇ ಸಂಸತ್‌ ಸದಸ್ಯ ಸ್ಥಾನಕ್ಕೆ ಅಭ್ಯರ್ಥಿಯಾಗಿರುವುದು ಕುಟುಂಬ ರಾಜಕಾರಣವಾಗಿದೆ. ಏನೇ ಅಪಪ್ರಚಾರ ಮಾಡಿದರೂ ನನ್ನ ಗೆಲುವನ್ನು ಕಸಿದುಕೊಳ್ಳಲು ಸಾಧ್ಯ ಇಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ಜೀವನಮೂರ್ತಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಜಯಲಕ್ಷ್ಮೀ, ರಾಜ್ಯ ಘಟಕದ ಕಾರ್ಯದರ್ಶಿ ಸುಮಾ ರುದ್ರೇಶ್‌, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಕೆ.ಜಿ. ಬಸವಲಿಂಗಪ್ಪ, ಎಚ್‌.ವಿ.ರುದ್ರಪ್ಪ, ಮೀನಾಕ್ಷಿಬಾಯಿ, ಮುಖಂಡರಾದ ಸುಭಾನ್ ಸಾಬ್‌, ಶಿವಲಿಂಗಯ್ಯ, ಎಚ್‌.ಎಸ್‌.ಶಿವಕುಮಾರ್, ಶಿವಾನಂದ ಉಪಸ್ಥಿತರಿದ್ದರು.
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಆರ್‌.ಎಂ.ರವಿ ಅಧ್ಯಕ್ಷತೆ ವಹಿಸಿದ್ದರು. ಗೌ.ಹಾಲೇಶ್‌ ಸ್ವಾಗತಿಸಿದರು. ಶಿವಕುಮಾರ್‌ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.