ADVERTISEMENT

ಯುಪಿಎಸ್‌ಸಿ: ಅಕ್ಷಯ್‌ಗೆ 464ನೇ ರಾಂಕ್

​ಪ್ರಜಾವಾಣಿ ವಾರ್ತೆ
Published 8 ಮೇ 2012, 3:15 IST
Last Updated 8 ಮೇ 2012, 3:15 IST

ದಾವಣಗೆರೆ: `ಸತತ ಮೂರು ಪ್ರಯತ್ನದ ನಂತರ ಈಗ ಯುಪಿಎಸ್‌ಸಿ ಪರೀಕ್ಷೆಯಲ್ಲಿ 464 ರ‌್ಯಾಂಕ್ ಲಭಿಸಿದ್ದು ಸಂತಸ ತಂದಿದೆ. ಇದು ಹಿಂದಿನ ಫಲಿತಾಂಶಕ್ಕಿಂತ ಈ ಬಾರಿಯದ್ದು ತೃಪ್ತಿ ತಂದಿದೆ.ಜನರ ಸೇವೆ ಮಾಡಬೇಕು ಎಂಬ ಕನಸು ನನಸಾಗುತ್ತಿದೆ. ಯಾವುದೇ ಹುದ್ದೆ ನೀಡಿದರೂ ನಾಗರಿಕ ಸೇವೆಗೆ ಸಿದ್ಧ~

-ಇದು 2011ನೇ ಸಾಲಿನಲ್ಲಿ ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಂಡು 464ನೇ ರ‌್ಯಾಂಕ್ ಪಡೆದ ದಾವಣಗೆರೆಯ ಸಾಫ್ಟ್‌ವೇರ್ ಎಂಜಿನಿಯರ್ ಎಸ್.ಸಿ. ಅಕ್ಷಯ್ ಅವರ ಮನದಾಳದ ಮಾತು.

ಕಳೆದ 2008ರಿಂದಲೂ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸಿದ್ದೆ. ಮೂರು ಬಾರಿ ಕೆಲವೇ ಅಂಕಗಳಲ್ಲಿ ರ‌್ಯಾಂಕ್ ತಪ್ಪಿಹೋಗುತ್ತಿತ್ತು. ಆದರೆ, 2009ರಲ್ಲಿ ಸಾಫ್ಟ್‌ವೇರ್ ಹುದ್ದೆಗೆ ರಾಜೀನಾಮೆ ನೀಡಿ, ನಾಗರಿಕ ಸೇವಾ ಪರೀಕ್ಷೆಯತ್ತ ಸಂಪೂರ್ಣ ಏಕಾಗ್ರತೆ ಹರಿಸಿದೆ. ಇದು ಹೆಚ್ಚಿನ ಸಾಧನೆಗೆ ಸಹಕಾರಿ ಆಯಿತು ಎನ್ನುತ್ತಾರೆ ಅಕ್ಷಯ್.

ದಾವಣಗೆರೆ ಸಿದ್ದವೀರಪ್ಪ ಬಡಾವಣೆಯ ವಾಸಿ ಪ್ರೊ.ಚಂದ್ರಶೇಖರ್ ಮತ್ತು ಪ್ರಮೀಳಾ ದಂಪತಿ ಪುತ್ರ ಅಕ್ಷಯ್. ತಂದೆ ದಾವಣಗೆರೆಯ ಜೆಜೆಎಂ ವೈದ್ಯಕೀಯ ಕಾಲೇಜಿನಲ್ಲಿ ಫಿಸಿಯಾಲಜಿ ವಿಭಾಗದಲ್ಲಿ ಪ್ರಾಧ್ಯಾಪಕ. ತಾಯಿ ಪ್ರಮೀಳಾ ಅವರು ಕೂಡ ಅದೇ ಕಾಲೇಜಿನ ಸಮುದಾಯ ಆರೋಗ್ಯ ವಿಭಾಗದಲ್ಲಿ ಸಮಾಜಶಾಸ್ತ್ರ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಿರಿಯ ಸಹೋದರ ಸಂತೋಷ ಎಂಬಿಬಿಎಸ್ ಮುಗಿಸಿದ್ದಾರೆ. ಮಗನ ಸಾಧನೆಗೆ ಸದಾ ಪ್ರೋತ್ಸಾಹ ನೀಡುತ್ತಿರುವ ದಂಪತಿಗೆ ಮಗ ನಾಗರಿಕ ಸೇವೆಗೆ ಆಯ್ಕೆಯಾಗಿರುವುದು ಹರ್ಷ ತಂದಿದೆ.

ಅಕ್ಷಯ್ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯಲ್ಲಿ 5ರಿಂದ ಪಿಯುವರೆಗೆ ಓದಿದರು. ನಂತರ ಬಾಪೂಜಿ ತಾಂತ್ರಿಕ ಕಾಲೇಜಿನಲ್ಲಿ ಮಾಹಿತಿ ವಿಜ್ಞಾನದಲ್ಲಿ ಎಂಜಿನಿಯರಿಂಗ್ ಪದವಿ ಪಡೆದು ಬೆಂಗಳೂರಿನ ಸಾಫ್ಟ್‌ವೇರ್ ಕಂಪೆನಿ ಸೇರಿದರು. ಸಾಫ್ಟ್‌ವೇರ್ ಉದ್ಯಮ ಕೇವಲ ವಾಣಿಜ್ಯಿಕವಾದುದು. ಜನರೊಂದಿಗೆ ಬೆರೆಯಲು ಆಗಲಿಲ್ಲ ಎಂಬ ಕಾರಣಕ್ಕೆ ಆ ಹುದ್ದೆ ತ್ಯಜಿಸಿದ್ದಾರೆ. ನಾಗರಿಕರ ಸೇವೆ ಮಾಡಬೇಕೆಂಬ ಹಂಬಲ ಮೊದಲಿನಿಂದಲೂ ಇತ್ತು. ಅದಕ್ಕೆ ಸಾಕಷ್ಟು ಪೂರ್ವತಯಾರಿ ನಡೆಸಿ ಪರೀಕ್ಷೆ ತೆಗೆದುಕೊಂಡೆ ಎನ್ನುತಾರೆ ಅವರು.

ಓದಿದ್ದು ಮಾಹಿತಿ ವಿಜ್ಞಾನ ಎಂಜಿನಿಯರಿಂಗ್ ವಿಷಯವಾದರೂ, ಪರೀಕ್ಷೆಗೆ ಭೂಗೋಳಶಾಸ್ತ್ರ ಮತ್ತು ಮನಶಾಸ್ತ್ರ ವಿಷಯ ಆಯ್ಕೆ ಮಾಡಿಕೊಂಡೆ. ಮೊದಲಿನಿಂದಲೂ ಭೂಗೋಳ ಶಾಸ್ತ್ರದ ಬಗ್ಗೆ ಆಸಕ್ತಿ ಇತ್ತು. ತಮ್ಮ ಗೆಳೆಯರು ಮನಶಾಸ್ತ್ರ, ಭೂಗೋಳ ಶಾಸ್ತ್ರ ವಿಷಯಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಇದು ಅವರ ಜತೆ ಚರ್ಚೆ ನಡೆಸಲು ಸಹಾಯವಾಯಿತು ಎನ್ನುತ್ತಾರೆ ಅಕ್ಷಯ್.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.