ADVERTISEMENT

ರಸ್ತೆ ತುಂಬೆಲ್ಲಾ ಗುಂಡಿ: ಸವಾರರ ಗೋಳು

​ಪ್ರಜಾವಾಣಿ ವಾರ್ತೆ
Published 20 ಜೂನ್ 2013, 12:41 IST
Last Updated 20 ಜೂನ್ 2013, 12:41 IST

ಹರಪನಹಳ್ಳಿ: ಪಟ್ಟಣಕ್ಕೆ ಅಗತ್ಯ ಮೂಲಸೌಕರ್ಯ ಒದಗಿಸುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಅನುದಾನ, ಎಸ್‌ಎಫ್‌ಸಿ, ಮುಕ್ತನಿಧಿ, 13ನೇ ಹಣಕಾಸು ಯೋಜನೆ, ಶಾಸಕ-ಸಂಸದರ ಅನುದಾನ ಸೇರಿದಂತೆ ಹಲವು ಯೋಜನೆಗಳಿಂದ ಕೋಟ್ಯಂತರ ರೂಪಾಯಿ ಪುರಸಭೆ ಖಾತೆಗೆ ಹರಿದು ಬರುತ್ತಿದೆ. ಆದರೂ, ಪಟ್ಟಣದ ಒಂದೆರಡು ರಸ್ತೆಗಳನ್ನು ಹೊರತುಪಡಿಸಿ, ಬಹುತೇಕ ಬಡಾವಣೆಗಳ ರಸ್ತೆಗಳು ಗುಂಡಿ ಬಿದ್ದಿದ್ದು, ಸಂಚಾರ ಕಷ್ಟವಾಗಿದೆ.

ಪಟ್ಟಣದಲ್ಲಿ ಹಾದು ಹೋಗಿರುವ ಎರಡು ಹೆದ್ದಾರಿಗಳನ್ನು ಹೊರತುಪಡಿಸಿದರೆ, ಉಳಿದ ಪ್ರಮುಖ ಬೀದಿ ಹಾಗೂ ವಿವಿಧ ಬಡಾವಣೆಗಳಲ್ಲಿನ ರಸ್ತೆಗಳು ಸಂಚಾರಕ್ಕೆ ಸಾಧ್ಯವಾಗದಷ್ಟು ಹದಗೆಟ್ಟು ಹೋಗಿವೆ. ಆಟೋರಿಕ್ಷಾಗಳು ರಸ್ತೆಗೆ ಇಳಿದರೆ ಕುಣಿಯುತ್ತ; ವಾಲಾಡುತ್ತ ಸಾಗುತ್ತವೆ. ದ್ವಿಚಕ್ರ ವಾಹನ ಸವಾರರು ಎಚ್ಚರ ತಪ್ಪಿದರೆ ಸಾಕು ಬೈಕ್ ಬೀಳುವುದು ಖಂಡಿತ. ಶಾಲಾ ಮಕ್ಕಳನ್ನು ತುಂಬಿಕೊಂಡು ಹೋಗುವ ಆಟೋರಿಕ್ಷಾದವರು ಹಾಗೂ ಅದರಲ್ಲಿ ಪ್ರಯಾಣಿಸುವ ಮಕ್ಕಳ ಗೋಳು ಹೇಳತೀರದು.

ಕರ್ನಾಟಕ ಒಳಚರಂಡಿ ಮಂಡಳಿ ಪಟ್ಟಣದಲ್ಲಿ ಒಳಚರಂಡಿ ನಿರ್ಮಾಣಕ್ಕಾಗಿ ಒಂದೂವರೆ ವರ್ಷದ ಹಿಂದೆ ರಸ್ತೆಯ ಮೇಲೆ ಕಾಮಗಾರಿ ಆರಂಭಿಸಿದೆ. ಇದರ ಪರಿಣಾಮ ರಸ್ತೆಗಳು ಸಾಲು ಗುಂಡಿಗಳಂತೆ ಗೋಚರಿಸುತ್ತಿವೆ. ರಸ್ತೆಯ ಅಕ್ಕಪಕ್ಕದಲ್ಲಿನ ನಿವಾಸಿಗಳು ಬೇಸಿಗೆ ಹಾಗೂ ಮಳೆಗಾಲದಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ.

ಬೇಸಿಗೆಯಲ್ಲಿ ದೂಳಿನಿಂದಾಗಿ ರಸ್ತೆಯ ಅಕ್ಕಪಕ್ಕದ ನಿವಾಸಿಗಳು ಮನೆಗಳ ಕಿಟಕಿ-ಬಾಗಿಲು ಮುಚ್ಚಿಕೊಂಡು ಕಾಲ ಕಳೆದಿದ್ದಾರೆ. ವಾಹನಗಳ ಓಡಾಟದಿಂದ ಆವರಿಸಿಕೊಳ್ಳುವ ಧೂಳು ಕ್ಷಯ, ಕೆಮ್ಮು ಮುಂತಾದ ರೋಗಕ್ಕೆ ತುತ್ತಾಗುವ ಭೀತಿ ತಂದಿಟ್ಟಿದೆ. ಮಳೆಗಾಲ ಬಂತೆಂದರೆ ಸಾಕು ರಸ್ತೆಗಳು ಕೆಸರು ಗದ್ದೆಯಾಗಿ ಪರಿವರ್ತನೆಯಾಗುತ್ತವೆ. ವಾಹನಗಳು ಸಿಡಿಸುವ ಕೆಸರು ಗೋಡೆಗಳ ತುಂಬೆಲ್ಲಾ ಮೆತ್ತಿಕೊಂಡು ಮನೆಯ ಅಂದವನ್ನೇ ತಿಂದುಹಾಕುತ್ತದೆ.

ಆಟೊ ಚಾಲಕ ಹನುಮಂತಪ್ಪ ಮಾತನಾಡಿ, `ಒಂದು ಗುಂಡಿ ತಪ್ಪಿಸಲು ಹೋದರೆ, ಮುಂದೆ ಮತ್ತೊಂದು ಗುಂಡಿಯಲ್ಲಿ ಹುದುಗಿ ಹೋಗುವ ಭೀತಿ. ಇಲ್ಲವೇ; ಆಟೋದ ಬ್ಲೇಡ್ ತುಂಡಾಗುವ ಭೀತಿ. ಹೀಗಾಗಿ, ಜೀವ ಕೈಯಲ್ಲಿ ಹಿಡಿದುಕೊಂಡು ಆಟೊ ಓಡಿಸಿ ಹೊಟ್ಟೆ ಹೊರೆಯಬೇಕಾಗಿದೆ. ಒಳಚರಂಡಿ ಕಾಮಗಾರಿ ಈಗಾಗಲೇ ಕೆಲ ಬಡಾವಣೆಗಳಲ್ಲಿ ಮುಗಿದಿದ್ದರೂ ಪುರಸಭೆ ರಸ್ತೆಯ ಅಭಿವೃದ್ಧಿಗೆ ಮುಂದಾಗಿಲ್ಲ' ಎಂದರು.

ಮಾಜಿ ಶಾಸಕ ಜಿ.ಕರುಣಾಕರ ರೆಡ್ಡಿ ರಸ್ತೆಗೆ ಇಳಿಯದ ಪರಿಣಾಮ ಗುಂಡಿ ಬಿದ್ದಿರುವ ರಸ್ತೆಗಳು ಅವರಿಗೆ ಕಾಣಿಸಲಿಲ್ಲ. ನೂತನ ಶಾಸಕ ಎಂ.ಪಿ.ರವೀಂದ್ರ ಅವರಾದರೂ ಅಯೋಮಯವಾಗಿರುವ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಸಂಚಾರಕ್ಕೆ ಮುಕ್ತಗೊಳಿಸಬೇಕು ಎನ್ನುವುದು ಪಟ್ಟಣದ ನಿವಾಸಿಗಳ ಪ್ರಬಲ ಬೇಡಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.