ADVERTISEMENT

ರಾಜಕೀಯ ವಲಸಿಗರ `ಹರಪನಹಳ್ಳಿ ಕ್ಷೇತ್ರ'

ಗದ್ದುಗೆಗೆ ಕಾದಾಟ, ಮತಕ್ಕೆ ಹೋರಾಟ-2013

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 8:46 IST
Last Updated 5 ಏಪ್ರಿಲ್ 2013, 8:46 IST

ಹರಪನಹಳ್ಳಿ: ಶಾಶ್ವತ ಬರಪೀಡಿತ ಪ್ರದೇಶ, ಅತ್ಯಂತ ಹಿಂದುಳಿದ ತಾಲ್ಲೂಕು ಎಂಬ ಅಪಖ್ಯಾತಿಗೆ ಗುರಿಯಾದ ಹಾಗೂ ಜಿಲ್ಲೆಯಲ್ಲಿಯೇ ಅತ್ಯಧಿಕ ಮೆಕ್ಕೆಜೋಳ ಉತ್ಪಾದನೆಯಿಂದಾಗಿ `ಮೆಕ್ಕೆಜೋಳ'ದ ಕಣಜ ಎಂದೇ ಪ್ರಖ್ಯಾತಿ ಪಡೆದಿರುವ ಹರಪನಹಳ್ಳಿ ಕ್ಷೇತ್ರ ರಾಜಕೀಯವಾಗಿ ವಲಸಿಗ ರಾಜಕಾರಣಿಗಳಿಗೆ ಅಧಿಕಾರದ ಕೃಪಾಕಟಾಕ್ಷ ಧಾರೆ ಎರೆದ ಕ್ಷೇತ್ರ ಎಂದೇ ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ವ್ಯಂಗ್ಯದ ವಿಶ್ಲೇಷಣೆ.

ಕ್ಷೇತ್ರದಲ್ಲಿ 1952ರಲ್ಲಿ ನಡೆದ ಪ್ರಥಮ ಚುನಾವಣೆಯಿಂದ ಹಿಡಿದು, ಕಳೆದ 2008ರ ಚುನಾವಣೆಯವರೆಗೆ ನಡೆದ ಒಟ್ಟು 13ಬಾರಿ ವಿಧಾನಸಭೆಗೆ ಚುನಾವಣೆ ನಡೆದಿದೆ. ಹೆಚ್ಚುಕಡಿಮೆ 61ವರ್ಷದ ಅಧಿಕಾರಾವಧಿಯಲ್ಲಿ ಬರೋಬ್ಬರಿ 25ವರ್ಷಗಳ ಸುದೀರ್ಘ ಅವಧಿಗೆ ಕ್ಷೇತ್ರದಿಂದ ವಲಸೆ ರಾಜಕಾರಣಿಗಳು `ಶಾಸಕ ಗಿರಿ' ಆಸ್ಥಾನದ ಮೇಲೆ ವಿರಾಜಮಾನರಾಗಿ ರಾಜ್ಯಭಾರ ನಡೆಸಿದ್ದಾರೆ. ಈ ಪೈಕಿ, ಜೆ.ಎಚ್. ಪಟೇಲ್ ಸಂಪುಟದಲ್ಲಿ ಕೊನೆಯ ಅವಧಿಯಲ್ಲಿ ಅಲ್ಪಸಮಯ ಸಮಾಜ ಕಲ್ಯಾಣ ಇಲಾಖೆ ಸಹಾಯಕ ಸಚಿವರಾಗಿ ಆಡಳಿತ ನಡೆಸಿದ ಡಿ. ನಾರಾಯಣದಾಸ್(1999ರಲ್ಲಿ) ಹಾಗೂ ಬಿ.ಎಸ್. ಯಡಿಯೂರಪ್ಪ ಸಂಪುಟದಲ್ಲಿ ಸಂಪುಟದರ್ಜೆಯ ಕಂದಾಯ ಇಲಾಖೆಯ ಸಚಿವರಾಗಿ ಜಿ. ಕರುಣಾಕರರೆಡ್ಡಿ(2008-2011ಆಗಸ್ಟ್) ಅಧಿಕಾರದ ರಾಜ್ಯಭಾರ ನಡೆಸಿದರು. ಇಬ್ಬರೂ ಸಹ ಕ್ಷೇತ್ರವನ್ನು ಪ್ರತಿನಿಧಿಸಿದ ವಲಸಿಗ ರಾಜಕಾರಣಿಗಳು.

1957ರಲ್ಲಿ ದ್ವಿಸದಸ್ಯ (ಹರಪನಹಳ್ಳಿ- ಕೂಡ್ಲಿಗಿ ವ್ಯಾಪ್ತಿ) ಕ್ಷೇತ್ರವಾಗಿದ್ದ ಸಂದರ್ಭದಲ್ಲಿ ನಡೆದ ಎರಡನೇ ಚುನಾವಣೆಯಲ್ಲಿ ಕೂಡ್ಲಿಗಿ ತಾಲ್ಲೂಕಿನ ಎಂ.ಎಂ.ಜೆ. ಸದ್ಯೋಜಾತಯ್ಯ ಹಾಗೂ ಎಂ. ದಾಸಪ್ಪ(ಇಬ್ಬರೂ ಕೂಡ್ಲಿಗಿ ತಾಲ್ಲೂಕಿನವರು) ಪ್ರಜಾ ಸೋಷಿಯಲಿಸ್ಟ್ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗುವ ಮೂಲಕ ವಲಸಿಗರ ಆಳ್ವಿಕೆಗೆ ಮುನ್ನುಡಿ ಬರೆದರು.

ಮೂಲತಃ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಕಮಲಾಪುರ ಗ್ರಾಮದವರಾದ ಡಿ. ನಾರಾಯಣದಾಸ್ ಕಂದಾಯ ಇಲಾಖೆಯಲ್ಲಿ ಗುಮಾಸ್ತರಾಗಿ ಸರ್ಕಾರಿ ನೌಕರಿಯಲ್ಲಿದ್ದರು. ಹುದ್ದೆಗೆ ಸ್ವಯಂ ನಿವೃತ್ತಿ ಪಡೆಯುವ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಟ್ಟ ನಾರಾಯಣದಾಸ್, ಕ್ಷೇತ್ರದಲ್ಲಿ 1972ರಲ್ಲಿ ನಡೆದ ಚುನಾವಣೆಯಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್(ಒ) ಅಭ್ಯರ್ಥಿಯಾಗಿ, ನಂತರದ 1978ರಲ್ಲಿ ನಡೆದ ಚುನಾವಣೆಯಲ್ಲಿಯೂ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಬಿ.ವೈ. ನೇಮಾನಾಯ್ಕ ಅವರನ್ನು ಎರಡು ಬಾರಿ ಸೋಲಿಸುವ ಮೂಲಕ ಸತತ ಎರಡು ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು.

ನಂತರ ಕಾಂಗ್ರೆಸ್ ಪಕ್ಷದಲ್ಲಿ ಅವರಿಗೆ ಟಿಕೆಟ್ ಧಕ್ಕಲಿಲ್ಲ. ಒಂದು ಅವಧಿಗೆ ವಿಧಾನ ಪರಿಷತ್ ಸದಸ್ಯರಾಗಿದ್ದ ನಾರಾಯಣದಾಸ್ ಪುನಃ 1994ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್‌ನ ಬಿ.ಎಚ್. ಯಂಕಾನಾಯ್ಕ ಅವರನ್ನು ಸೋಲಿಸುವ ಮೂಲಕ ಮತ್ತೊಮ್ಮೆ `ಶಾಸಕ ಗಿರಿ' ಅನುಭವಿಸಿದರು. ಒಟ್ಟಾರೆ ಮೂರು ಬಾರಿ ಶಾಸಕರಾಗಿ ಒಂದು ಅವಧಿ ವಿಧಾನ ಪರಿಷತ್ ಸದಸ್ಯರಾಗಿ ಅಧಿಕಾರ ನಡೆಸಿದರು.

1967ರಿಂದ 2008ರವರೆಗೆ ಪರಿಶಿಷ್ಟ ಜಾತಿಗೆ ಮೀಸಲು ಕ್ಷೇತ್ರವಾಗಿದ್ದ ಕ್ಷೇತ್ರ, ಪುನರ್ವಿಂಗಡನೆಯ ನಂತರ 2008ರಲ್ಲಿ ಸಾಮಾನ್ಯ ಕ್ಷೇತ್ರವಾಗಿತ್ತು. ಈ ವೇಳೆ ನಡೆದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಇಬ್ಬರೂ ಹೊರಗಿನ ಪ್ರಬಲ ಅಭ್ಯರ್ಥಿಗಳೇ ಕಣಕ್ಕಿಳಿದರು. ಬಳ್ಳಾರಿ ಮೂಲದವರಾದ ಜಿ. ಕರುಣಾಕರರೆಡ್ಡಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಹೂವಿನಹಡಗಲಿಯ ಎಂ.ಪಿ. ಪ್ರಕಾಶ್ ಅವರನ್ನು ಪರಾಭವಗೊಳಿಸಿ, ಕ್ಷೇತ್ರದಲ್ಲಿ ಪುನಃ ವಲಸಿಗರ ಆಳ್ವಿಕೆಗೆ ವೇದಿಕೆ ಸೃಷ್ಟಿಸಿದರು.

ಹೀಗೆ ಅರ್ಧದಷ್ಟು ಅವಧಿಯವರೆಗೆ ಹೊರಗಿನ ಅಭ್ಯರ್ಥಿಗಳಿಗೆ ಕ್ಷೇತ್ರದ ಮತದಾರರ ಮನ್ನಣೆ ಹಾಕಿದ್ದಾರೆ. ಈ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷ ಎಂ.ಪಿ. ಪ್ರಕಾಶ್ ಪುತ್ರ ಎಂ.ಪಿ. ರವೀಂದ್ರ, ಬಿಜೆಪಿಯಿಂದ ಜಿ. ಕರುಣಾಕರರೆಡ್ಡಿ, ಬಿಎಸ್‌ಆರ್ ಕಾಂಗ್ರೆಸ್‌ನಿಂದ ಕೂಡ್ಲಿಗಿ ಮಾಜಿ ಶಾಸಕ ಸಿರಾಜ್ ಷೇಕ್ ಸ್ಪರ್ಧಿಸುವುದು ಬಹುತೇಕ ಖಚಿತ. (ಮೂವರು ಹೊರಗಿನವರು). ಉಳಿದಂತೆ ಕೆಜೆಪಿ ಅಭ್ಯರ್ಥಿ ಎನ್. ಕೊಟ್ರೇಶ್(ಜಗಳೂರು ಕ್ಷೇತ್ರದ ತಾಲ್ಲೂಕಿನ ಅರಸೀಕೆರೆ ಗ್ರಾಮದವರು) ಹಾಗೂ ಜೆಡಿಎಸ್ ಇನ್ನೂ ಅಭ್ಯರ್ಥಿ ಘೋಷಿಸಿಲ್ಲ. ಈ ಎಲ್ಲಾ ಅಂಶಗಳನ್ನು ಗಮನಿಸಿದರೆ, ಕ್ಷೇತ್ರ ಮತ್ತೊಂದು ಅವಧಿಗೆ ವಲಸಿಗರ ಪಾಲಾಗುವ ಲಕ್ಷಣಗಳು ಗೋಚರಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.