ADVERTISEMENT

‘ರಾಜೀ ಸಂಧಾನ ಮಾಡಿಸಬೇಡಿ; ದೂರು ದಾಖಲಿಸಿಕೊಳ್ಳಿ’

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2017, 6:25 IST
Last Updated 28 ಅಕ್ಟೋಬರ್ 2017, 6:25 IST

ದಾವಣಗೆರೆ: ನೊಂದವರು ಠಾಣೆಗೆ ದೂರು ನೀಡಲು ಬಂದಾಗ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕೇ ಹೊರತು ರಾಜೀ–ಸಂಧಾನಕ್ಕೆ ಮುಂದಾಗಬಾರದು ಎಂದು ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷೆ ಮೀರಾ ಸಿ.ಸಕ್ಸೆನಾ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಮಾನವ ಹಕ್ಕುಗಳ ಆಯೋಗ, ಜಸ್ಟೀಸ್ ಅಂಡ್ ಕೇರ್‌, ಗ್ಲೋಬಲ್‌ ಕನ್‌ಸರ್ನ್‌, ಸಾಧನಾ, ವನಮಾಲಾ ಸಂಸ್ಥೆಗಳ ಸಹಯೋಗದಲ್ಲಿ ‘ಮಾನವ ಹಕ್ಕುಗಳು, ಲಿಂಗ ಸಮಾನತೆ, ಮಾನವ ಕಳ್ಳಸಾಗಣೆ’ ವಿಷಯ ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಅಪಹರಣ, ನಾಪತ್ತೆ, ಮಹಿಳೆಯರ ಮೇಲಿನ ದೌರ್ಜನ್ಯದಂತಹ ಪ್ರಕರಣಗಳಲ್ಲಿ ಪೊಲೀಸರು ಹೆಚ್ಚು ಜಾಗೃತರಾಗಿರಬೇಕು. ಸ್ವಲ್ಪ ನಿರ್ಲಕ್ಷ್ಯ ವಹಿಸಿದರೂ ದೊಡ್ಡ ಅನಾಹುತಗಳಾಗುವ ಸಾಧ್ಯತೆಗಳಿರುತ್ತವೆ. ವ್ಯಾಜ್ಯಗಳು ನ್ಯಾಯಾಲಯಗಳಲ್ಲೇ ಇತ್ಯರ್ಥವಾಗಬೇಕು; ಪೊಲೀಸ್ ಠಾಣೆಗಳಲ್ಲಿ ಅಲ್ಲ ಎಂದು ಕಿವಿಮಾತು ಹೇಳಿದರು.

ADVERTISEMENT

ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳುವ ಮುನ್ನ, ಸೂಕ್ತ ಕಾರಣವನ್ನು ಕುಟುಂಬದವರಿಗೆ ನೋಟಿಸ್‌ ಮೂಲಕ ತಿಳಿಸಬೇಕು. ಠಾಣೆಯ ಡೈರಿಯಲ್ಲೂ ವಿವರ ನಮೂದಿಸಬೇಕು. ಯಾರನ್ನೂ ಅಕ್ರಮವಾಗಿ ವಶಕ್ಕೆ ತೆಗೆದುಕೊಳ್ಳುವಂತಿಲ್ಲ. ಅದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದರು. ಹಿರಿಯ ಅಧಿಕಾರಿಗಳ ಒತ್ತಡಕ್ಕೆ ಮಣಿದೊ, ಅರಿವಿನ ಕೊರತೆಯಿಂದಲೊ ಕಾನೂನುಗಳನ್ನು ಪಾಲಿಸದಿದ್ದರೆ ತೊಂದರೆಗೆ ಸಿಲುಕಿಕೊಳ್ಳಬೇಕಾಗುತ್ತದೆ. ಈ ಬಗ್ಗೆ ಎಚ್ಚರ ಅಗತ್ಯ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಎಸ್‌.ಗುಳೇದ ಮಾತನಾಡಿ, ‘ಸ್ವಾತಂತ್ರ್ಯ ಬಂದು 7 ದಶಕಗಳೇ ಕಳೆದರೂ ಮಹಿಳೆಯರಿಗೆ ಸಿಗಬೇಕಾದ ಗೌರವ, ಸಮಾನತೆ ಸಿಗದಿರುವುದು ಬೇಸರದ ಸಂಗತಿ. ಶೋಷಣೆಗೆ ಒಳಗಾದಾಗ ಸಮಾಜಕ್ಕೆ ಹೆದರಿ ಮರೆಮಾಚುವ ಬದಲು ಧೈರ್ಯವಾಗಿ ಪೊಲೀಸ್ ಠಾಣೆಗೆ ದೂರು ನೀಡಬೇಕು’ ಎಂದರು.

ನಾಗರಿಕರು ಠಾಣೆಗೆ ದೂರು ನೀಡಲು ಬಂದಾಗ ತಕ್ಷಣ ದೂರು ದಾಖಲಿಸಿಕೊಳ್ಳಬೇಕು. ಅಪಹರಣ, ನಾಪತ್ತೆ, ಮಹಿಳೆಯ ಮೇಲಿನ ದೌರ್ಜನ್ಯ, ಕೌಟುಂಬಿಕ ಹಿಂಸೆಯಂತಹ ಪ್ರಕರಣಗಳಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಬಾರದು. ದೂರು ದಾಖಲಾದ ನಂತರದ ತನಿಖೆಯ ಅವಧಿ ಅತ್ಯಂತ ಮಹತ್ವದ್ದು ಎಂದರು.

ಸಂಪ‍ನ್ಮೂಲ ವ್ಯಕ್ತಿ ಚಂದನ್‌ ಉಪನ್ಯಾಸ ನೀಡಿ, ‘ಸಂಶೋಧನೆಯ ಪ್ರಕಾರ ದೇಶದಲ್ಲಿರುವ ಶೇ 80ರಷ್ಟು ಬಾಲಕಾರ್ಮಿಕರು ಮಾನವ ಕಳ್ಳಸಾಗಣೆಗೆ ಒಳಪಟ್ಟವರು. ಭಿಕ್ಷಾಟನೆ, ಜೀತ ಕಾರ್ಮಿಕ ಪದ್ಧತಿ, ಅಂಗಾಂಗ ಮಾರಾಟ, ದತ್ತು ಸ್ವೀಕಾರ, ವೇಶ್ಯಾ ಚಟುವಟಿಕೆಗಳಿಗೆ ಹೆಚ್ಚಾಗಿ ಮಾನವ ಕಳ್ಳ ಸಾಗಣೆಗಳು ನಡೆಯುತ್ತವೆ’ ಎಂದರು.

ವಿಶ್ವದಲ್ಲಿ 436 ಕೋಟಿ ಮಂದಿ ಆಧುನಿಕ ಜೀತ ಪದ್ಧತಿಗೆ ಒಳಪಟ್ಟಿದ್ದು, ಭಾರತದಲ್ಲೇ 2 ಕೋಟಿ ಮಂದಿ ಇದ್ದಾರೆ. ಪ್ರತಿವರ್ಷ 8,945 ಮಕ್ಕಳು ಕಾಣೆಯಾಗುತ್ತಿದ್ದಾರೆ. ನಾಪತ್ತೆ ಪ್ರಕರಣಗಳನ್ನು ನಿರ್ಲಕ್ಷ್ಯ ಮಾಡದೆ ಸಂಘ –ಸಂಸ್ಥೆಗಳ ಸಹಕಾರ ಪಡೆದು ಪ್ರಕರಣ ಬೇಧಿಸಲು ಶ್ರಮಿಸಬೇಕು ಎಂದರು. ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಬೃಂದಾ ಅಡಿಗೆ, ಸಂದೇಶ್‌ ಕುಮಾರ್, ಅಶ್ವಿನಿ, ಮಂಜುಳಾ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.