ADVERTISEMENT

ರಾಜ್ಯ ಬಜೆಟ್‌ಗೆ ಜಿಲ್ಲೆಯ ಗಣ್ಯರು, ಜನರ ಮಿಶ್ರ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2011, 10:35 IST
Last Updated 25 ಫೆಬ್ರುವರಿ 2011, 10:35 IST

ದಾವಣಗೆರೆ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಗುರುವಾರ ರಾಜ್ಯ ಬಜೆಟ್ ಮಂಡನೆ ಮಾಡಿದ್ದು, ಈ ಬಗ್ಗೆ ವಿವಿಧ ಪಕ್ಷದ ಮುಖಂಡರು, ಸಾರ್ವಜನಿಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಕೃಷಿ ಬಜೆಟ್; ಶಬ್ದಗಳ ಆಕರ್ಷಣೆ
ನಿರೀಕ್ಷಿತ ಮಟ್ಟದಲ್ಲಿ ಕೃಷಿ ಬಜೆಟ್ ಮಂಡನೆ ಆಗಿಲ್ಲ. ಕೇವಲ ಶಬ್ದಗಳ ಆಕರ್ಷಣೆ ಮಾತ್ರ.ಶೇ. 50ರಷ್ಟು ಅನುದಾನ ಮೀಸಲಿಡುವ ಭರವಸೆ ಇತ್ತು. ಕೃಷಿ, ಜಲ ಸಂಪನ್ಮೂಲ, ಮೀನುಗಾರಿಕೆ ಇಲಾಖೆ, ನೀರಾವರಿ ಮತ್ತಿತರ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಶೇ. 30ರಷ್ಟು ಮಾತ್ರ ಹಣ ಮೀಸಲಿಡಲಾಗಿದೆ.ಪ್ರತ್ಯೇಕವಾಗಿ ಈಗ ಕೃಷಿಗೆ ಮೀಸಲಿಟ್ಟಿರುವ ಹಣದ ಪ್ರಮಾಣ ಮತ್ತು ಕಳೆದ ಬಜೆಟ್‌ಗಳಲ್ಲಿ ಮೀಸಲಿಟ್ಟ ಅನುದಾನ ಪ್ರಮಾಣ ಎರಡಕ್ಕೂ ಯಾವುದೇ ವ್ಯತ್ಯಾಸ ಇಲ್ಲ.
-ತೇಜಸ್ವಿ ಪಟೇಲ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ.

ಸಮತೋಲನ ಬಜೆಟ್
ಕಳೆದ ಬಜೆಟ್‌ಗಳಿಗೆ ಹೋಲಿಸಿದರೆ ಈ ಬಾರಿಯ ಬಜೆಟ್ ಎಲ್ಲಾ ಕ್ಷೇತ್ರಗಳ ಪಾಲಿಗೆ ಸಮತೋಲನ ಬಜೆಟ್.ಪ್ರತ್ಯೇಕ ಕೃಷಿ ಬಜೆಟ್ ಮಂಡನೆ ಮಾಡುವ ಮೂಲಕ ಕೃಷಿ ಕ್ಷೇತ್ರವನ್ನು ಬಲಗೊಳಿಸುವ ಪ್ರಯತ್ನ ಮಾಡಿದ್ದಾರೆ. ಅಲ್ಲದೇ, ಜಾಗತಿಕ ಕೃಷಿ ಬಂಡವಾಳ ಸಮಾವೇಶ ಹಮ್ಮಿಕೊಳ್ಳುವುದಾಗಿ ಭರವಸೆ ನೀಡಿರುವುದು ಆಶಾದಾಯಕ.ಶಿಕ್ಷಣ, ನಗರಾಭಿವೃದ್ಧಿ, ಲೋಕೋಪಯೋಗಿ ಇಲಾಖೆ, ವಾಣಿಜ್ಯ, ಕೈಗಾರಿಕಾ ಕ್ಷೇತ್ರಕ್ಕೂ ಉತ್ತಮ ಕೊಡುಗೆ ನೀಡಿದ್ದಾರೆ. ಯಾವುದೇ ಕ್ಷೇತ್ರವನ್ನು ಕಡೆಗಣಿಸಿಲ್ಲ. ಆದರೆ, ಮೌಲ್ಯವರ್ಧಿತ ತೆರಿಗೆಯನ್ನು ಶೇ. 1ರಷ್ಟು ಏರಿಕೆ ಮಾಡಿರುವುದು ಸರಿಯಲ್ಲ.
- ಪ್ರೊ.ಬಿ.ಪಿ. ವೀರಭದ್ರಪ್ಪ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ, ದಾವಣಗೆರೆ ವಿಶ್ವವಿದ್ಯಾಲಯ.

ಬಜೆಟ್ ಶಿವಮೊಗ್ಗ ಪಾಲು
ಪ್ರತಿಸಲದಂತೆ ಈ ಬಜೆಟ್‌ನಲ್ಲೂ ಸಾರ್ವಜನಿಕರ ಹಣವನ್ನು ದೇವಾಲಯಗಳಿಗೆ ಹಂಚಿಕೆ ಮಾಡಿದ್ದಾರೆ. ಎಲ್ಲಾ ಸೌಲಭ್ಯಗಳು ಬಳ್ಳಾರಿ, ಶಿವಮೊಗ್ಗ ಜಿಲ್ಲೆಯ ಪಾಲಾಗಿವೆ. ಉಳಿದ ಜಿಲ್ಲೆಗಳನ್ನು ನಿರ್ಲಕ್ಷ್ಯ ಮಾಡಲಾಗಿದೆ.ಕೃಷಿ ಬಜೆಟ್ ಪ್ರತ್ಯೇಕವಾಗಿ ಮಂಡಿಸಿದ್ದು ಬಿಟ್ಟರೆ, ಬೇರೆ ಯಾವುದೇ ಹೊಸ ಯೋಜನೆಗಳಿಲ್ಲ. ಮೌಲ್ಯವರ್ಧಿತ ತೆರಿಗೆಯನ್ನು ಹೆಚ್ಚಳ ಮಾಡಿರುವುದು ಇನ್ನಷ್ಟು ಹೊರೆಯಾಗಿದೆ.
-ಶಾಮನೂರು ಶಿವಶಂಕರಪ್ಪ, ಶಾಸಕರು, ದಾವಣಗೆರೆ ದಕ್ಷಿಣ.

ಉದ್ಯಮಿಗಳಿಗೆ ನಿರಾಸೆ
ವ್ಯಾಪಾರಸ್ಥರಿಗೆ, ಕೈಗಾರಿಕೋದ್ಯಮಿಗಳಿಗೆ ಈ ಬಜೆಟ್ ಆಶಾದಾಯಕವಾಗಿಲ್ಲ.ಚರ್ಚೆ ಮಾಡದೆ ಮೌಲ್ಯವರ್ಧಿತ ತೆರಿಗೆ ಪ್ರಮಾಣವನ್ನು ಶೇ. 13.5ನಿಂದ 14.5ಕ್ಕೆ ಏರಿಕೆ ಮಾಡಿರುವುದು  ಉದ್ಯಮಿಗಳಿಗೆ ಹೊರೆ ಆಗಿದೆ. ಬಂಗಾರದ ಮೇಲಿನ ತೆರಿಗೆಯನ್ನು ಶೇ. 1ರಷ್ಟು ಏರಿಕೆ ಮಾಡಿರುವುದು ಸರಿಯಲ್ಲ.ರಾಜ್ಯದಲ್ಲಿ ಗುತ್ತಿಗೆದಾರರಿಗೆ ರೂ ಐದು ಸಾವಿರ ಕೋಟಿ ಬಿಲ್ ಪಾವತಿಮಾಡದೆ ಬಾಕಿ ಉಳಿಸಿಕೊಂಡಿದೆ. ಜಗಳೂರು ತಾಲ್ಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-13ರನ್ನು ಎನ್.ಎಚ್-19ರ ವ್ಯಾಪ್ತಿಗೆ ಒಳಪಡಿಸಿರುವುದು ಜಿಲ್ಲೆಯ ಪಾಲಿಗೆ ಒಂದೇ ಉತ್ತಮ ಅಂಶ.
-ಜಂಬಗಿ ರಾಧೇಶ್, ತೆರಿಗೆ ಸಲಹೆಗಾರರ ಸಂಘದ ಜಿಲ್ಲಾಧ್ಯಕ್ಷ

ಹಣ ಹಂಚಿಕೆ ಮಾತ್ರ
ಈ ಬಾರಿಯ ಬಜೆಟ್ ಸಾಮಾನ್ಯ ಜನರಿಗೆ ದೂರವಾದ ಬಜೆಟ್. ಪ್ರತಿ ವರ್ಷ ಬಜೆಟ್ ಮಂಡನೆ ಮಾಡಿದಾಗಲೂ ಎಲ್ಲಾ ಕ್ಷೇತ್ರಗಳಿಗೆ ಹಣ ಹಂಚಿಕೆ ಮಾತ್ರ ಮಾಡಲಾಗುತ್ತದೆ. ಘೋಷಣೆಗಳು ಅನುಷ್ಠಾನವಾಗದೆ ಹಾಗೆಯೇ ಉಳಿದರೆ ಏನೂ ಪ್ರಯೋಜನವಿಲ್ಲ.
-ಸಿ.ಜಿ. ವೀರಭದ್ರಪ್ಪ, ವರ್ತಕ

ಜನಪರ ಬಜೆಟ್
ಎಲ್ಲ ಕ್ಷೇತ್ರಗಳಿಗೂ ಸಮಾನವಾಗಿ ಅನುದಾನ ಹಂಚಿಕೆ ಮಾಡಲಾಗಿದೆ. ಕೃಷಿಗೆ, ನಗರಾಭಿವೃದ್ಧಿ, ಶಿಕ್ಷಣಕ್ಕೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಯೋಜನೆ, ಮೂಲ ಸೌಕರ್ಯ ಅಭಿವೃದ್ಧಿ ಇತರೆ ಕ್ಷೇತ್ರಗಳಿಗೆ ಸಮಾನ ಆದ್ಯತೆ ನೀಡಲಾಗಿದೆ.ಒಟ್ಟಾರೆ, ಜನಪರವಾದ ಬಜೆಟ್ ಇದಾಗಿದ್ದು, ಘೋಷಣೆಗಳನ್ನು ಶೀಘ್ರ ಅನುಷ್ಠಾನಗೊಳಿಸಬೇಕು.
-ಜಿ. ರಾಮಚಂದ್ರಪ್ಪ, ನಿವೃತ್ತ ಸರ್ಕಾರಿ ನೌಕರ

ರೈತಪರ ಕಾಳಜಿ
ದೇಶದಲ್ಲಿಯೇ ಮೊದಲ ಬಾರಿಗೆ ರೈತ ಬಜೆಟ್ ಮಂಡಿಸುವ ಮೂಲಕ ರೈತಪರ ಕಾಳಜಿ ಮೆರೆದಿದ್ದಾರೆ.ಕೃಷಿ ಬಜೆಟ್ ಮಂಡಿಸುವ ಅವಕಾಶ ಕಾನೂನಿನಲ್ಲಿ ಇಲ್ಲದಿದ್ದರೂ, ವಿರೋಧಗಳ ನಡುವೆಯೂ ಮಂಡನೆ ಮಾಡಿದ್ದಾರೆ. ಒಳ್ಳೆಯ ಯೋಜನೆಗಳ ಮಧ್ಯೆಯೂ ರೈತ ಬೆಳೆಗಳಿಗೆ ಭದ್ರತೆ ಹಾಗೂ ವೈಜ್ಞಾನಿಕ ಬೆಲೆ ನಿಗದಿ ಪಡಿಸುವಲ್ಲಿ ವಿಫಲವಾಗಿದೆ. ಅಲ್ಲದೇ, ಬಡ್ಡಿ ರಹಿತ ಸಾಲಯೋಜನೆ ಘೋಷಣೆ ಮಾಡಬೇಕಿತ್ತು.
-ಎಲ್.ಎಚ್. ಅರುಣ್‌ಕುಮಾರ್, ಮಾನವ ಹಕ್ಕುಗಳ ವೇದಿಕೆ ಕಾರ್ಯದರ್ಶಿ

ಅಭಿವೃದ್ಧಿ ಇಲ್ಲ
ಬಜೆಟ್ ಗಾತ್ರ ಹೆಚ್ಚಿದೆ. ಆದರೆ, ಅಭಿವೃದ್ಧಿ ಗಾತ್ರ ಇಳಿದಿದೆ. ಇದೊಂದು ನಿಷ್ಪ್ರಯೋಜಕ ಬಜೆಟ್.ಮುಖ್ಯಮಂತ್ರಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ವಿಚಾರಣೆ ನಡೆಯುವ ಸಾಧ್ಯತೆ ಇರುವುದರಿಂದ ಬಜೆಟ್ ಮಂಡಿಸಿದ್ದಾರೆ. ರೈತರನ್ನು ವಂಚಿಸಲು ಕೃಷಿ ಬಜೆಟ್ ಲೇಪನ ಮಾಡಿದ್ದಾರೆ.ವಾಹನ ತೆರಿಗೆ, ವ್ಯಾಟ್‌ದರ ಹೆಚ್ಚಳ ಮಾಡಿ ಜನ ಸಾಮಾನ್ಯರಿಗೆ ಇನ್ನಷ್ಟು ಹೊರೆ ಮಾಡಿದ್ದಾರೆ. ಒಟ್ಟಿನಲ್ಲಿ ಇದೊಂದು ಚುನಾವಣೆ ಪೂರ್ವ ತಯಾರಿ ಎಂದೇ ಹೇಳಬಹುದು.
-ಡಿ. ಬಸವರಾಜ್, ಕೆಪಿಸಿಸಿ ಸದಸ್ಯ

ಜನರಿಗೆ ಸ್ಪಂದನೆ
ಗ್ರಾಮೀಣಾಭಿವೃದ್ಧಿಗೆ, ಕೃಷಿಕರ ಕಷ್ಟಗಳಿಗೆ ಸ್ಪಂದಿಸುವ ಬಜೆಟ್ ಇದಾಗಿದೆ. ಯಾವ ಕ್ಷೇತ್ರವನ್ನು ಕಡೆಗಣಿಸಿಲ್ಲ.ಮುಖ್ಯವಾಗಿ ಮೂಲ ಸೌಕರ್ಯ ಅಭಿವೃದ್ಧಿಗೆ, ಎರಡು ಹಂತದಲ್ಲಿ ನಿರಂತರ ಜ್ಯೋತಿ ಯೋಜನೆ ಅನುಷ್ಠಾನ, ಭೂ ಚೇತನ ಯೋಜನೆ, ಪಂಪ್‌ಸೆಟ್‌ಗಳಿಗೆ  ಗುಣಮಟ್ಟದ ವಿದ್ಯುತ್ ವಿತರಣೆಗೆ ಪ್ರಯತ್ನ ಮಾಡಲಾಗಿದೆ. ಎಲ್ಲ ವಲಯಗಳಿಗೆ ಸೂಕ್ತ ಆದ್ಯತೆ ನೀಡಲಾಗಿದೆ.
-ಡಾ.ಎ.ಎಚ್. ಶಿವಯೋಗಿ ಸ್ವಾಮಿ, ವಿಧಾನ ಪರಿಷತ್ ಮುಖ್ಯ ಸಚೇತಕ

ನಿರೀಕ್ಷೆ ಹುಸಿ
ರೈತರ ಜೀವನಮಟ್ಟ ಸುಧಾರಿಸುವಂತ ಬಜೆಟ್ ಮಂಡನೆ ಆಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ, ಭ್ರಮನಿರಸನವಾಗಿದೆ. ಒಟ್ಟಾರೆ ಹಣ ಹಂಚಿಕೆ ಮಾಡಲಾಗಿದೆ ಹೊರತು, ಪ್ರತಿ ಜಿಲ್ಲೆಗೆ ಎಷ್ಟು ಎಂಬುದು ನಿಗದಿ ಆಗಿಲ್ಲ.ಬಡ ರೈತ ಮಕ್ಕಳ ಉನ್ನತ ಶಿಕ್ಷಣ ಬಡ್ಡಿ ರಹಿತ ಸಾಲ, ಕೃಷಿ ಸಾಲ ಬಡ್ಡಿ ದರ ಇಳಿಕೆ, ಪಶು ಚಿಕಿತ್ಸೆಗೆ ಸಂಚಾರ ವಾಹನ ವ್ಯವಸ್ಥೆ ಮತ್ತಿತರರ ಯೋಜನೆಗಳು ಆಶಾದಾಯಕ.
-ಬಿ.ಎಂ. ಸತೀಶ್, ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ

‘ಭರವಸೆ’ ಇಲ್ಲದಕೃಷಿ ಬಜೆಟ್ ಮಂಡನೆ ಮಾಡಿರುವುದು ಸರಿಯಷ್ಟೆ. ಆದರೆ, ಬೇಸಾಯ ಆಧಾರಿತ ಬೆಳೆ ನೀತಿ ಜಾರಿಗೆ ತರಬೇಕಿತ್ತು. ಗ್ರಾಮೀಣ ಭಾಗದ ರೈತ ಯುವಕರು ವಲಸೆ ಹೋಗುವುದನ್ನು ತಡೆಯಲು ಕ್ರಮ ಕೈಗೊಂಡಿಲ್ಲ. ವೈಜ್ಞಾನಿಕ ಬೆಲೆ ನಿಗದಿ ಬಗ್ಗೆ ಭರವಸೆ ನೀಡದಿರುವುದು ರೈತರಿಗೆ ಬೇಸರ ಉಂಟು ಮಾಡಿದೆ.
- ಹುಚ್ಚವ್ವನಹಳ್ಳಿ ಮಂಜುನಾಥ್, ರೈತ ಮುಖಂಡ

ನಗರಾಭಿವೃದ್ಧಿ ಕಡೆಗಣನೆ

ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಆದರೆ, ನಗರಾಭಿವೃದ್ಧಿಗೆ ಏನೂ ಕೊಡುಗೆ ಇಲ್ಲ. ಪಾತ್ರೆಗಳ, ಬೇಳೆ ಕಾಳುಗಳ ದರ ಇಳಿಕೆ ಮಾಡಲಾಗಿದೆ. ಅಡುಗೆ ಅನಿಲ ದರ ಮಾತ್ರ ಹೆಚ್ಚಿಗೆ ಆಗುತ್ತಿದೆ. ಹಾಗಂತ ಉಪವಾಸ ಇರೋಕೆ ಆಗುತ್ತಾ?. ಕೃಷಿಗೆ ಬಹಳ ಸೌಲಭ್ಯ ನೀಡಿದ್ದಾರೆ. ಆದರೆ, ಸಿಗಬೇಕಲ್ಲ?.
-ರೇಣುಕಾ, ಗೃಹಿಣಿ

ಶಿಕ್ಷಣಕ್ಕೆ ಕೊಡುಗೆ
ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಬಡ್ಡಿ ರಹಿತ ಸಾಲ ಯೋಜನೆ, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೂ ಉಚಿತ ಪಠ್ಯಪುಸ್ತಕ ವಿತರಣೆ ಯೋಜನೆ ಉತ್ತಮ.
ಆದರೆ, ವಿದ್ಯಾರ್ಥಿ ನಿಲಯಗಳಲ್ಲಿ, ಶಾಲೆಗಳಲ್ಲಿ ಮೂಲಸೌಲಭ್ಯ ಕಲ್ಪಿಸುವುದಕ್ಕೆ ಪ್ರಥಮ ಆದ್ಯತೆ ನೀಡಬೇಕಿತ್ತು.
-ಎಚ್.ಡಿ. ಲಿಂಗರಾಜು, ಬಿ.ಎಸ್ಸಿ ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.